ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುಳಿದವರ ಹೆಸರಲ್ಲಿ ಕಾಂಗ್ರೆಸ್‌ ರಾಜಕೀಯ: ಸಚಿವ ಕೆ.ಎಸ್‌. ಈಶ್ವರಪ್ಪ

ಹಿಂದುಳಿದ ವರ್ಗಗಳ ಮೋರ್ಚಾ ಸಮಾವೇಶ
Last Updated 28 ನವೆಂಬರ್ 2021, 5:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸುದೀರ್ಘವಾಗಿ ಆಡಳಿತ ನಡೆಸಿದ ಕಾಂಗ್ರೆಸ್‌, ಹಿಂದುಳಿದ ವರ್ಗದವರ ಹೆಸರಲ್ಲಿ ರಾಜಕೀಯ ಮಾಡಿದ್ದೇ ದೊಡ್ಡ ಸಾಧನೆಯಾಗಿದೆ. ಅದನ್ನು ಹೊರತುಪಡಿಸಿದರೆ ಅವರ ಏಳಿಗೆಗೆ ಯಾವ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಆರೋಪಿಸಿದರು.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲಾ ಹಿಂದುಳಿದ ವರ್ಗಗಳ ಪ್ರಮುಖರ ಸಮಾವೇಶದಲ್ಲಿ ಅವರು ಮಾತನಾಡಿದರು.

ಹಿಂದುಳಿದವರ ಕಲ್ಯಾಣಕ್ಕಾಗಿ ಶ್ರಮಿಸಿದ್ದೇವೆ ಎಂದು 40 ವರ್ಷಗಳಿಂದಲೂ ಕಾಂಗ್ರೆಸ್ ಹೇಳುತ್ತಾ ಬಂದಿದೆ. ಅದನ್ನೇ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಸಹ ಹೇಳುತ್ತಿದ್ದಾರೆ. ಪರಿಶಿಷ್ಟ ಸಮುದಾಯದವರಿಗೆ, ಹಿಂದುಳಿದವರಿಗೆ ಭರವಸೆ ನೀಡಿ, ಅದನ್ನು ಈಡೇರಿಸದೆ ಮೋಸ ಮಾಡಿದ್ದಾರೆ. ಈ ವಿಷಯಗಳನ್ನು ಹಿಂದುಳಿದವರು ಅರ್ಥೈಸಿಕೊಂಡ ಪರಿಣಾಮ ಕಾಂಗ್ರೆಸ್ ಮೂಲೆಗುಂಪಾಯಿತು, ನರೇಂದ್ರ ಮೋದಿ ಪ್ರಧಾನಿ ಆದರು. ಕೇಂದ್ರ ಸಚಿವ ಸಂಪುಟದಲ್ಲಿ 47 ಮಂದಿ ಹಿಂದುಳಿದ ವರ್ಗದ ಪ್ರತಿನಿಧಿಗಳಿದ್ದಾರೆ ಎಂದರು.

ಬಿಜೆಪಿಯ ಹಿಂದುಳಿದ ವರ್ಗಗಳ ರಾಜ್ಯ ಘಟಕದ ಅಧ್ಯಕ್ಷ ನೆ.ಲ. ನರೇಂದ್ರಬಾಬು, ದೇಶವನ್ನು ಅತಿ ಹೆಚ್ಚು ವರ್ಷ ಆಳಿದ ಕಾಂಗ್ರೆಸ್‌ ಹಿಂದುಳಿದವರಿಗೆ ಸರಿಯಾಗಿ ಸೌಲಭ್ಯ ನೀಡಿಲ್ಲ. ಸಂವಿಧಾನದಲ್ಲಿ ಮೀಸಲಾತಿ ಕಲ್ಪಿಸಿದ್ದರೂ ಅದನ್ನು ನೀಡುವಲ್ಲಿ ಎಡವಿತ್ತು. ಕೇಂದ್ರದಲ್ಲಿ ಆಡಳಿತಕ್ಕೆ ಬಂದ ಬಿಜೆಪಿ ಹಂತ ಹಂತವಾಗಿ ಎಲ್ಲ ವರ್ಗದವರಿಗೂ ಮೀಸಲಾತಿ ನೀಡಲು ಮುಂದಾಯಿತು ಎಂದರು.

ಹಿಂದುಳಿದ ವರ್ಗದವರು ಸಂಘಟನಾತ್ಮಕವಾಗಿ ಹಕ್ಕನ್ನು ಕೇಳಬೇಕಿದೆ. ವೈಯಕ್ತಿಕವಾಗಿ ಬಲಿಷ್ಠವಾಗುವುದರ ಜೊತೆಗೆ ಸಂಘಟನೆಯಲ್ಲೂ ಸದೃಢವಾಗಬೇಕು ಎಂದು ಹೇಳಿದರು.

ಶಾಸಕ ಅರವಿಂದ ಬೆಲ್ಲದ, ಮುಖಂಡರಾದ ಸುರೇಶ ಬಾಬು, ವಿವೇಕಾನಂದ ಡಬ್ಬಿ, ರವೀಂದ್ರ ದಂಡಿನ, ಪ್ರವೀಣ ಪವಾರ, ರಾಜೇಂದ್ರ ನಾಯ್ಕ, ಬಸವರಾಜ ಕುಂದಗೋಳ, ಲಿಂಗರಾಜ‌ ಪಾಟೀಲ, ನಾಗೇಶ ಕಲಬುರ್ಗಿ, ಶಂಕರ ಶೆಳಕೆ, ಶಿವು ಬೆಳಾರದ, ಅಶೋಕ ಹೆಬ್ಬಳ್ಳಿ, ಮಯಲಾರಪ್ಪ ಕೆ., ರಂಗಾ ಬುದ್ದಿ, ಜಯಶೀಲಾ ಹಾಗೂ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಪದಾಧಿಕಾರಿಗಳು ಇದ್ದರು.

‘ಕಾಂಗ್ರೆಸ್‌ ಪ್ರಾದೇಶಿಕ ಪಕ್ಷವಾಗುತ್ತಿದೆ’: ಕೋವಿಡ್‌ ಲಸಿಕೆ ಬಂದಾಗ ಕಾಂಗ್ರೆಸ್‌ ಮುಖಂಡರು ತೀವ್ರವಾಗಿ ಟೀಕಿಸಿದ್ದರು. ಅದನ್ನು ಹಾಕಿಸಿಕೊಂಡರೆ ಗಂಡಸ್ತನ ಹೋಗುತ್ತದೆ ಎಂದು ಅಪಪ್ರಚಾರ ಮಾಡಿದ್ದರು. ನಂತರ, ಅವರೇ ಸರತಿ ಸಾಲಿನಲ್ಲಿ ನಿಂತು ಲಸಿಕೆ ಹಾಕಿಸಿಕೊಂಡರು. ಸ್ವಾತಂತ್ರ್ಯಾನಂತರದಿಂದ ಇಲ್ಲಿವರೆಗೂ ಅವರು ಸುಳ್ಳು ಹೇಳುತ್ತಾ, ಅಪಪ್ರಚಾರ ಮಾಡುತ್ತಲೇ ರಾಜಕೀಯ ಮಾಡುತ್ತಿದ್ದಾರೆ ಎಂದು ಈಶ್ವರಪ್ಪ ದೂರಿದರು.

ಎಲ್ಲ ರಾಜ್ಯದಲ್ಲೂ ಕಾಂಗ್ರೆಸ್‌ ಇದೆ. ಆದರೆ, ಚುನಾವಣೆಯಲ್ಲಿ ‌ಸೋತು ಹೋಗುತ್ತಿರುವುದರಿಂದ ಪ್ರಾದೇಶಿಕ ಪಕ್ಷವಾಗುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT