ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಪಾಲಿಕೆ ಆವರಣದಲ್ಲಿ ಕಸ ಚೆಲ್ಲಿ ಪ್ರತಿಭಟಿಸಿದ ಕಾಂಗ್ರೆಸ್

Last Updated 28 ಡಿಸೆಂಬರ್ 2021, 7:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅವಳಿನಗರ ಸ್ಮಾರ್ಟ್ ಸಿಟಿ ಅಲ್ಲ ಗಾರ್ಬೇಜ್ ಸಿಟಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಹುಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಘಟಕದ ಕಾರ್ಯಕರ್ತರು ಮಂಗಳವಾರ ಪಾಲಿಕೆ ಆವರಣಲ್ಲಿ ಕಸಚೆಲ್ಲಿ ಪ್ರತಿಭಟನೆ ನಡೆಸಿದರು.

ಬಿಜೆಪಿ ಕಾರ್ಯಕಾರಿಣಿ ನಡೆಯುವ ಸುತ್ತಲಿನ ಪ್ರದೇಶ ಮಾತ್ರ ಶುಚಿಯಾಗಿದೆ. ಉಳಿದೆಡೆ ತ್ಯಾಜ್ಯ ರಾಶಿ ಬಿದ್ದಿವೆ. ಪಾಲಿಕೆ ಅಧಿಕಾರಿಗಳು ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸದೆ, ಬಿಜೆಪಿ ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಎರಡು ಟ್ರ್ಯಾಕ್ಟರ್'ಗಳಲ್ಲಿ ತ್ಯಾಜ್ಯ ತುಂಬಿಕೊಂಡು ಪಾಲಿಕೆ ಆವರಣಕ್ಕೆ ಬಂದ ಕಾರ್ಯಕರ್ತರನ್ನು ಪೊಲೀಸರು ಪ್ರವೇಶ ದ್ವಾರದಲ್ಲಿಯೇ ತಡೆದರು. ಅದನ್ನು ವಿರೋಧಿಸಿ ಕಾರ್ಯಕರ್ತರು ಪೊಲೀಸರ ಜೊತೆ ವಾಗ್ವಾದ ನಡೆಸಿದರು. ಆವರಣದಲ್ಲಿ ಪ್ರತಿಭಟನೆಯಷ್ಟೇ ಮಾಡುತ್ತೇವೆ ಎಂದು ಒಳಗೆ ಬಂದ ಅವರು, ಕೆಲಹೊತ್ತು ಬಿಜೆಪಿ ಮತ್ತು ಪಾಲಿಕೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.

ಕಸ ಚೆಲ್ಲದಂತೆ ಪೊಲೀಸರು ಪರಿಪರಿಯಾಗಿ ವಿನಂತಿಸಿಕೊಂಡರೂ ಟ್ರ್ಯಾಕ್ಟರ್'ನಲ್ಲಿದ್ದ ತ್ಯಾಜ್ಯ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಮೋದಿ ಭಾವಚಿತ್ರದ ಜೊತೆ ಮನ್ ಕಿ ಬಾತ್ ಅಣಕು ಪ್ರದರ್ಶನ ನಡೆಸಿ, ಟೀಕಿಸಿದರು.

ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್ ಅಲ್ತಾಫ್ ಹಳ್ಳೂರು ಮಾತನಾಡಿ, ನಗರದ ಬಹುತೇಕ ಪ್ರದೇಶ ತ್ಯಾಜ್ಯದಿಂದ ತುಂಬಿದೆ. ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾದ ವಾರ್ಡ್'ಗಳಲ್ಲಿ ಮಾತ್ರ ಪೌರ ಕಾರ್ಮಿಕರು ಸರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾಗಿರುವ ವಾರ್ಡ್'ಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ. ನಾಲ್ಕು ತಿಂಗಳಾದರೂ ಪ್ರತಿನಿಧಿಗಳಿಗೆ ಪಾಲಿಕೆಯಲ್ಲಿ ಅಧಿಕಾರ ನೀಡದೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಅನುಮತಿ ಪಡೆಯದೆ ನಗರದಾದ್ಯಂತ ಬಿಜೆಪಿ ಬಾವುಟಗಳನ್ನು ಹಾಕಿ, ಸೌಂದರ್ಯ ಹಾಳು ಮಾಡಿದ್ದಾರೆ. ಅವರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರ? ಬಿಜೆಪಿಗೊಂದು ಕಾನೂನು, ಕಾಂಗ್ರೆಸ್'ಗೊಂದು ಕಾನೂನು ಎನ್ನುವಂತಾಗಿದೆ. ಅಧಿಕಾರಿಗಳು ಬಿಜೆಪಿ ಏಜೆಂಟರಾಗಿ ಕೆಲಸ ಮಾಡುವುದನ್ನು ಬಿಟ್ಟು, ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ರಜತ್ ಉಳ್ಳಾಗಡ್ಡಿ ಮಾತನಾಡಿ, ಕಸವಿಲೇವಾರಿಗೆ ಪಾಲಿಕೆಗೆ ಹಲವು ಬಾರಿ ಮನವಿ ಮಾಡಲಾಗಿದೆ. ಪೌರ ಕಾರ್ಮಿಕರು ಬಿಜೆಪಿ ಕಾರ್ಯಕಾರಿಣಿ ಹಿನ್ನೆಲೆಯಲ್ಲಿ ಗೋಕುಲ ರಸ್ತೆ ಪ್ರದೇಶದ ಸ್ವಚ್ಛತೆಯಲ್ಲಿ ತೊಡಗಿಕೊಂಡಿದ್ದಾರೆ.‌ ಎಲ್ಲ ವಾರ್ಡ್'ಗಳಲ್ಲಿ ಸ್ವಚ್ಛತೆ ನಡೆಸುತ್ತೇವೆ ಎಂದು ಭರವಸೆ ನೀಡಬೇಕು. ಇಲ್ಲದಿದ್ದರೆ ಪಾಲಿಕೆ ಆಯುಕ್ತರ ಮನೆ ಎದುರು ಕಸ ಚೆಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ಜೊತೆ ವಾಗ್ವಾದ ನಡೆಸಿದರು
ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ಜೊತೆ ವಾಗ್ವಾದ ನಡೆಸಿದರು

ವಾರ್ಡ್ ಜನಸಂಖ್ಯೆ ಆಧಾರದ ಮೇಲೆ ಪೌರಕಾರ್ಮಿಕರನ್ನು ನಿಯೋಜಿಸಬೇಕು. ವಾರ್ಡ್'ಗಳು ವಿಂಗಡಣೆಯಾಗಿ 82ಕ್ಕೆ ಹೆಚ್ಚಿಗೆಯಾಗಿದ್ದರಿಂದ, ಪಾಲಿಕೆ ಸದಸ್ಯರ ಜೊತೆ ಚರ್ಚಿಸಿ ಕಾರ್ಮಿಕರನ್ನು ನಿಯೋಜಿಸಲಾಗುವುದು ಎಂದು ಮಹಾನಗರ ಪಾಲಿಕೆ ಉಪ ಆಯುಕ್ತ‌ ಅಜೀಜ್ ದೇಸಾಯಿ‌ ಹೇಳಿದರು.

ಪಾಲಿಕೆ ಸದಸ್ಯರಾದ ನಿರಂಜನ ಹಿರೇಮಠ, ಆರೀಫ್ ಭದ್ರಾಪುರ, ಸುವರ್ಣಾ ಕಲ್ಲಕುಂಟ್ಲಾ, ಸಂದೀಲ್ ಕುಮಾರ,ಮುಸ್ತಾಕ್ ಮುದಗಲ್, ಪ್ರಕಾಶ ಕುರಹಟ್ಟಿ, ಇಕ್ಬಾಲ್ ನವಲೂರ, ಶಂಕರ ಹೊಸಮನಿ, ಡಾ. ಮಯೂರ ಮೋರೆ ಹಾಗೂ ಶಾಕೀರ್ ಸನದಿ, ನಾಗರಾಜ ಗೌರಿ, ಶರೀಫ್ ಗರಗದ, ಈರಣ್ಣ ಹಿರೇಹಾಳ, ದೀಪಾ ಗೌರಿ, ಬಸವರಾಜ ಕಿತ್ತೂರ, ದಾನಪ್ಪ ಕಬ್ಬೇರ, ಜ್ಯೋತಿ ವಾಲಿಕಾರ, ಬಾಳಮ್ಮ ಜಂಗನವರ, ಪ್ರೀತಿ ಜೈನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT