ಧಾರವಾಡ: ನಗರದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಗುರುವಾರ ‘ಸಂವಿಧಾನವೇ ಬೆಳಕು– ಹೆಜ್ಜೆಯಿಡು ಹುಬ್ಬಳ್ಳಿ,ಧಾರವಾಡ’ ಅಭಿಯಾನದಡಿ ಸಂವಿಧಾನ ನಡಿಗೆ (ವಾಕಥಾನ್) ಜರುಗಿತು. ಬೋಧಕರು, ವಿದ್ಯಾರ್ಥಿಗಳು, ಅಧಿಕಾರಿಗಳು, ವಕೀಲರು ಸೇರಿ ಹಲವರು ಧ್ವಜಗಳನ್ನು ಹಿಡಿದು ಉತ್ಸಾಹದಿಂದ ಹೆಜ್ಜೆ ಹಾಕಿದರು. ‘ಅಂಬೇಡ್ಕರ್ಗೆ ಜೈ’, ‘ಸಂವಿಧಾನಕ್ಕೆ ಜೈ’ ಎಂದು ಘೋಷಣೆ ಕೂಗಿದರು.

‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗ ಹಾಗೂ ರಾಜ್ಯ ಸರ್ಕಾರದ ಸಮಾಜಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮಕ್ಕೂ ಮುನ್ನ ಗಾಂಧಿ ಭವನದಲ್ಲಿ ವಿಚಾರ ಸಂಕಿರಣ ನಡೆಯಿತು. ಅಲ್ಲಿ ಸಂವಿಧಾನದ ತಿರುಳನ್ನು ವಿವರಿಸಲಾಯಿತು. ಮಹತ್ವ ಮತ್ತು ಅಗತ್ಯತೆ ತಿಳಿಯಪಡಿಸಲಾಯಿತು.

ಬೆಳಿಗ್ಗೆ 7 ರಿಂದ 10ರವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡರು. ಕುಲಪತಿ ಪ್ರೊ.ಎ.ಎಂ.ಖಾನ್ ಅವರು ಚಾಲನೆ ನೀಡಿದರು. ವಿಶ್ವವಿದ್ಯಾಲಯದ ಆವರಣದಲ್ಲಿ ಮೂರು ಕಿಲೋ ಮೀಟರ್ ವಾಕಥಾನ್ ನಡೆಯಿತು. ಹಸಿರು ಪರಿಸರ, ಬೆಳಗಿನ ಎಳೆ ಬಿಸಿಲಿನಲ್ಲಿ ಎಲ್ಲರೂ ಹುರುಪಿನಿಂದ ಸಾಗಿದರು. ಗಾಂಧಿ ಭವನದಿಂದ ಆರಂಭಗೊಂಡು ಆಡಳಿತ ಕಚೇರಿ ಮುಂಭಾಗದ ರಸ್ತೆಯಲ್ಲಿ ಸಾಗಿ, ಕ್ರೀಡಾಂಗಣ ತಲುಪಿ, ಅಲ್ಲಿಂದ ಪುನಃ ಗಾಂಧಿ ಭವನಕ್ಕೆ ಮರಳಿದರು.

ಪ್ರೊ. ಎ.ಎಂ.ಖಾನ್ ಮಾತನಾಡಿ, ‘ಸಂವಿಧಾನದ ಪ್ರಸ್ತಾವನೆಯಷ್ಟೇ ಓದಿದರೆ ಸಾಲದು, ಸಂವಿಧಾನವನ್ನು ಪೂರ್ತಿ ಓದಬೇಕು. ಅಧ್ಯಯನ ಮಾಡಬೇಕು. ಹಕ್ಕುಗಳು, ಕರ್ತವ್ಯಗಳನ್ನು ಅರಿಯಬೇಕು. ಪ್ರಜೆಗಳು ಹೇಗೆ ಬದುಕಬೇಕು ಎಂಬುದನ್ನು ಮನಗಾಣಬೇಕು. ಸಂವಿಧಾನ ಪುಸ್ತಕ ದೊಡ್ಡದಿದೆ, ವಾರಕ್ಕೆ ಒಂದು ಪುಟವನ್ನಾದರೂ ಓದಿ, ಅರ್ಥೈಸಿಕೊಳ್ಳಬೇಕು. ಅದನ್ನು ಪಾಲಿಸಬೇಕು’ ಎಂದು ಸಲಹೆ ನೀಡಿದರು.

ಪರೀಕ್ಷಾಂಗ ಕುಲಸಚಿವ ಪ್ರೊ. ಎನ್.ವೈ.ಮಟ್ಟಿಹಾಳ ಮಾತನಾಡಿ, ‘ಸಂವಿಧಾನದೆಡೆ ನಡಿಗೆ ಎಂದರೆ ಸತ್ಯ, ಮಾನವೀಯತೆ, ಸಮಾನತೆ, ಭ್ರಾತೃತ್ವ, ನ್ಯಾಯದ ಕಡೆಗಿನ ನಡಿಗೆ. ಶೋಷಿತರು, ಬಡವರು, ಮಹಿಳೆಯರು ಎಲ್ಲರೂ ಸಮಾನತೆಯ ನೆಲೆಗಟ್ಟಿನಲ್ಲಿ ಬದುಕು ರೂಪಿಸಿಕೊಳ್ಳಲು ಸಾಧ್ಯ ಆಗಿಸುತ್ತಿರುವುದು ಸಂವಿಧಾನದ ಸಾಧನೆ’ ಎಂದು ಹೇಳಿದರು.

‘ಅಂಬೇಡ್ಕರ್ ಅವರು ಅಖಂಡ ಭಾರತಕ್ಕೆ ಸಂವಿಧಾನವನ್ನು ರಚಿಸಿಕೊಟ್ಟಿದ್ಧಾರೆ. ದೇಶವನ್ನು ಭೌಗೋಳಿಕವಾಗಿ ಅಖಂಡವಾಗಿ ನೋಡಿದರೆ ಸಾಲದು, ಇಡೀ ಭಾರತದ ಬದುಕನ್ನು ಅಖಂಡವಾಗಿ ನೋಡಬೇಕು. ಸಂವಿಧಾನದ ಆಶಯಗಳು ಶೇ 100ರಷ್ಟು ಅನುಷ್ಠಾನವಾದರೆ, ಅದು ಸಾಧ್ಯವಾಗುತ್ತದೆ’ ಎಂದು ವಿಶ್ಲೇಷಿಸಿದರು.

ಸಮಾಜಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಶುಭಾ ಪಿ. ಮಾತನಾಡಿ, ‘ಪ್ರತಿದಿನ ಸೂರ್ಯನ ಬೆಳಕು ಚೈತನ್ಯ ನೀಡುವಂತೆ ಸಂವಿಧಾನವು ಚೈತನ್ಯ ನೀಡುತ್ತಿದೆ. ಸಂವಿಧಾನದಿಂದ ನಾವೇನು ಪಡೆದಿದ್ದೇವೆ ಎಂಬುದನ್ನು ತಿಳಿದುಕೊಳ್ಳಬೇಕು. ಅದರ ಶಕ್ತಿಯನ್ನು ಅರ್ಥ ಮಾಡಿಕೊಂಡು ಇತರರಿಗೂ ತಿಳಿಸಬೇಕು’ ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಪ್ರಮಾಣಪತ್ರ ವಿತರಿಸಲಾಯಿತು. ‘ಪ್ರಜಾವಾಣಿ’ ಹುಬ್ಬಳ್ಳಿ ಬ್ಯುರೊ ಮುಖ್ಯಸ್ಥ ರಾಹುಲ ಬೆಳಗಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

‘ಸಂವಿಧಾನಕ್ಕೆ ಸವಾಲು ಹಿಮ್ಮೆಟ್ಟಿಸಲು ಸನ್ನದ್ಧರಾಗಿ’

‘ಹಲವು ಸಾಧನೆಗಳು ಮತ್ತು ಅಭಿವೃದ್ಧಿಯ ನಂತರ ಸಂವಿಧಾನವೇ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಅವುಗಳನ್ನು ಹಿಮ್ಮೆಟ್ಟಿಸದಿದ್ದರೆ ಪ್ರಜಾಪ್ರಭುತ್ವವಾದಿ ಆಡಳಿತ ವ್ಯವಸ್ಥೆಯನ್ನು ಉಳಿಸಿಕೊಳ್ಳುವುದೇ ಕಷ್ಟವಾಗಬಹುದು’ ಎಂದು ಗಾಂಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಶಿವಾನಂದ ವಿ.ಶೆಟ್ಟರ ಆತಂಕ ವ್ಯಕ್ತಪಡಿಸಿದರು.

ಸಂವಿಧಾನದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು ‘ಸಂವಿಧಾನ ಉಳಿಸಿಕೊಂಡಲ್ಲಿ ಮಾತ್ರವೇ ದೇಶದಲ್ಲಿ ಸೌಹಾರ್ದ ಮತ್ತು ಸಹಬಾಳ್ವೆ ಪರಂಪರೆ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜೊತೆಗೂಡಿ ಸಂವಿಧಾನ ರಕ್ಷಣೆಗೆ ಪಣತೊಡಬೇಕು’ ಎಂದರು.

‘ಹಕ್ಕುಗಳ ದಮನ ಮಾನವ ಹಕ್ಕುಗಳ ಉಲ್ಲಂಘನೆ ಕ್ಷೀಣಿಸುತ್ತಿರುವ ಪ್ರಜಾಪ್ರಭುತ್ವ ಮೂಲಭೂತವಾದ ಕೋಮುವಾದ ಪ್ರಜಾತಂತ್ರದ ಸಂಸ್ಥೆಗಳ ಸ್ವಾಯತ್ತತೆಗೆ ಧಕ್ಕೆಯಂಥ ಸವಾಲುಗಳಿವೆ. ಅವುಗಳನ್ನು ಹಿಮ್ಮೆಟಿಸಲು ಸನ್ನದ್ಧರಾಗಬೇಕು’ ಎಂದರು.

‘ಧರ್ಮ ಜಾತಿ ಭಾಷೆ ಸಂಸ್ಕೃತಿ ರಾಜಕೀಯ ಪಕ್ಷ ಸಿದ್ಧಾಂತ ಸೇರಿ ಎಲ್ಲವೂ ವಿಭಿನ್ನವಾಗಿದ್ದರೂ ಎಲ್ಲದಕ್ಕೂ ಸಂವಿಧಾನ ಅವಕಾಶ ಕಲ್ಪಿಸುತ್ತದೆ. ಎಲ್ಲರನ್ನೂ ಎಲ್ಲವನ್ನೂ ಒಳಗೊಳ್ಳುವ ಪ್ರಯತ್ನ ಮಾಡುತ್ತದೆ. ನಿಯಮಿತವಾಗಿ ಚುನಾವಣೆ ನಡೆದು ಪ್ರಜಾಪ್ರಭುತ್ವ ವ್ಯವಸ್ಥೆಯು ಗಟ್ಟಿಯಾಗಿ ಉಳಿಯಲು ಸಂವಿಧಾನ ಪ್ರಮುಖ ಪಾತ್ರ ವಹಿಸಿದೆ. ಸಂವಿಧಾನದ ಮೂಲತತ್ವಗಳನ್ನು ಎಲ್ಲರೂ ಅರಿತು ಪಾಲಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.