ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಆಹಾರ ಧಾನ್ಯ ವಿತರಿಸಿದ್ದ ಮತ್ತೊಬ್ಬ ಸೋಂಕಿತ!

ಕೋವಿಡ್‌ 19 ವ್ಯಕ್ತಿಯ ಜೊತೆ ಓಡಾಟ: ಗಣ್ಯ ವ್ಯಕ್ತಿಗಳಿಗೂ ಕ್ವಾರಂಟೈನ್‌?
Last Updated 3 ಮೇ 2020, 2:58 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೋವಿಡ್‌ -19ಸೋಂಕಿತ (ಪಿ–589) ನಗರದ ಕೇಶ್ವಾಪುರದ ಶಾಂತಿ ಕಾಲೊನಿಯ ವ್ಯಕ್ತಿ ಕೂಡ ಸಾರ್ವಜನಿಕರಿಗೆ ಆಹಾರ ಧಾನ್ಯ ವಿತರಣೆ ಮಾಡಿದ್ದಾರೆ.

ಸೋಂಕಿನಿಂದ ಗುಣಮುಖರಾಗಿರುವ ಮುಲ್ಲಾ ಓಣಿಯ 27 ವರ್ಷದ ಉದ್ಯಮಿ ಕೂಡ ಧಾನ್ಯಗಳನ್ನು ಹಂಚಿದ್ದರು. ಆದ್ದರಿಂದ ಸೋಂಕಿತರು ದಿನಸಿ ಹಂಚಿದ ಜಿಲ್ಲೆಯ ಎರಡನೇ ಪ್ರಕರಣ ಇದಾಗಿದೆ.

ಶಾಂತಿ ಕಾಲೊನಿಯ ಸೋಂಕಿತ ವ್ಯಕ್ತಿ ಮಾರ್ಚ್‌ 27ರಂದು ತಮ್ಮ ಮಗನ ಜೊತೆ ನಗರದ ತುಳಜಾಭವಾನಿ ದೇವಸ್ಥಾನದಲ್ಲಿ ಹಾಗೂ ನಂತರದ ದಿನಗಳಲ್ಲಿ ತೊರವಿ ಹಕ್ಕಲ, ಆನಂದನಗರ, ಅರವಿಂದನಗರ, ಹಳೇ ಹುಬ್ಬಳ್ಳಿ, ಟಿಪ್ಪುನಗರ, ನೇಕಾರನಗರ ಮತ್ತು ಕೇಶ್ವಾಪೂರದಲ್ಲಿ ಆಹಾರ ಧಾನ್ಯ ಹಂಚಿದ್ದ ಎಂದು ಜಿಲ್ಲಾಡಳಿತ ತಿಳಿಸಿದೆ.

ಲಾಕ್‌ಡೌನ್‌ ಘೋಷಣೆಯಾದ ನಂತರ ಕಮರಿಪೇಟೆಯಲ್ಲಿರುವ ಮಟನ್ ಮಾರಾಟ ಮಾಡುವ ಅಂಗಡಿಗಳಿಗೂ ತೆರಳಿದ್ದ. ಬಳಿಕ ಏಪ್ರಿಲ್‌ನಲ್ಲಿ ಶಾಂತಿನಗರ, ಬೆಂಗೇರಿ , ಮಹಾವೀರಗಲ್ಲಿ, ಬೆಳಗಾಂವಗಲ್ಲಿ, ಮರಾಠಾಗಲ್ಲಿ, ಶಕ್ತಿನಗರ, ವಿಕಾಸನಗರ, ಗೋಕುಲ ರಸ್ತೆ, ಜನತಾ ಬಜಾರ, ಸುರಭಿ ನಗರ, ಹೊಸೂರ, ಸ್ಟೇಷನ್ ರಸ್ತೆ, ತಬೀಬ್ ಲ್ಯಾಂಡ್, ಕಲ್ಯಾಣ ನಗರ, ವೆಂಕಟೇಶ ಕಾಲೊನಿ, ದೇಶಪಾಂಡೆ ನಗರ, ದಾಜಿಬಾನ ಪೇಟ, ಸಿಬಿಟಿ, ರೈಲ್ವೆ ವರ್ಕ್ ಶಾಪ್, ಗಣೇಶಪೇಟ, ಗೂಡ್ಸ್ ಶೆಡ್ ರೋಡ, ತಾಡಪತ್ರಿ ಗಲ್ಲಿ, ಚೇತನಾ ಕಾಲೊನಿ, ಬೂಸಪೇಟದಲ್ಲಿ ಸಂಚರಿಸಿದ್ದರು.

ಆದ್ದರಿಂದ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದ ಸಾರ್ವಜನಿಕರಿಗೂ ಕೊರೊನಾ ಸೋಂಕು ತಗಲುವ ಸಾಧ್ಯತೆಯಿದ್ದು, ಜಿಲ್ಲಾಡಳಿತದ ಸಹಾಯವಾಣಿಗೆ 1077 ಕರೆ ಮಾಡಿ ಮಾಹಿತಿ ನೀಡಬೇಕು. ಸಮೀಪದ ಸರ್ಕಾರ ಆಸ್ಪತ್ರೆ ಭೇಟಿ ನೀಡಿ ಪರೀಕ್ಷೆಗೆ ಒಳಪಡಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

ಶಾಂತಿನಗರದ ಸೋಂಕಿತ ವ್ಯಕ್ತಿಯು ನಗರದ ಕೆಲ ರಾಜಕಾರಣಿಗಳು ಮತ್ತು ಗಣ್ಯ ವ್ಯಕ್ತಿಗಳ ಜೊತೆಗೂ ಓಡಾಡಿದ್ದ ಎಂದು ತಿಳಿದು ಬಂದಿದೆ. ಆದ್ದರಿಂದ ಅವರು ಕ್ವಾರಂಟೈನ್‌ಗೆ ಒಳಪಡಿಸುವ ಸಾಧ್ಯತೆಯಿದೆ.

ನಿರ್ಬಂಧ: ಸಾರ್ವಜನಿಕರ ಆರೋಗ್ಯ ಕಾಪಾಡುವ ಉದ್ದೇಶದಿಂದ ಸಂಘ, ಸಂಸ್ಥೆಗಳು ಮತ್ತು ವ್ಯಕ್ತಿಗಳು ನೇರವಾಗಿ ಆಹಾರ ಧಾನ್ಯದ ಕಿಟ್ ಹಾಗೂ ಇತರ ಸಾಮಗ್ರಿಗಳನ್ನು ವ್ಯಕ್ತಿಗಳಿಗೆ ನೀಡುವುದಕ್ಕೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಶನಿವಾರ ಮತ್ತೊಮ್ಮೆ ಆದೇಶ ಹೊರಡಿಸಿದ್ದಾರೆ.

ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ದಾನ ಕೊಡುವವರು ಅವಳಿ ನಗರದಲ್ಲಿ ಸ್ಥಾಪಿಸಿರುವ ಕೇಂದ್ರಗಳಲ್ಲೇ ನೀಡಬೇಕು ಎಂದು ಸೂಚಿಸಿದ್ದಾರೆ.

ಇಬ್ಬರು ಮಕ್ಕಳು ಗುಣಮುಖ; ಬಿಡುಗಡೆ

ಧಾರವಾಡ: ಸಂಬಂಧಿಯೊಬ್ಬರ ಸಂಪರ್ಕದಿಂದ ಕೋವಿಡ್–19 ಸೋಂಕಿಗೆ ತುತ್ತಾಗಿದ್ದ ಇಬ್ಬರು ಮಕ್ಕಳು ಸೋಂಕು ಮುಕ್ತರಾಗಿ ಶುಕ್ರವಾರ ರಾತ್ರಿ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ.

‘ಚಿಕಿತ್ಸೆ ಪಡೆಯುತ್ತಿದ್ದ ಮೂರು ವರ್ಷ ಆರು ತಿಂಗಳ ಗಂಡುಮಗು (ಪಿ–234) ಮತ್ತು ಏಳು ವರ್ಷದ ಬಾಲಕಿ (ಪಿ–235) ಸೋಂಕಿನಿಂದ ಮುಕ್ತರಾಗಿದ್ದಾರೆ. ವ್ಯಾಪಾರ ಸಂಬಂಧ ದೆಹಲಿಗೆ ಹೋಗಿದ್ದ 27 ವರ್ಷದ ಯುವಕನ (ಪಿ–194) ಸಂಬಂಧಿಕರು ಈ ಮಕ್ಕಳು. 24 ಗಂಟೆಗಳ ಅವಧಿಯಲ್ಲಿ ಎರಡು ಬಾರಿ ಈ ಮಕ್ಕಳ ಗಂಟಲ ದ್ರವ ಪರೀಕ್ಷೆ ನಡೆಸಿದಾಗ ಸೋಂಕು ಇಲ್ಲದಿರುವುದು ಖಚಿತವಾಗಿದೆ’ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ತಿಳಿಸಿದ್ದಾರೆ.

ಏ. 13ರಂದು ಈ ಮಕ್ಕಳಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು. ಹುಬ್ಬಳ್ಳಿ ಮುಲ್ಲಾ ಓಣಿಯ ಇದೇ ಕುಟುಂಬದ ಒಟ್ಟು ನಾಲ್ಕು ಜನರಿಗೆ ಸೋಂಕು ತಗುಲಿತ್ತು. ಇವರಲ್ಲಿ ಸದ್ಯ 5 ವರ್ಷದ ಬಾಲಕ (ಪಿ–233) ಮತ್ತು 37 ವರ್ಷದ ಪುರುಷ (ಪಿ–236) ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಪುಟ್ಟ ಮಕ್ಕಳ ಆರೈಕೆ ತಾನೇ ಮಾಡುವುದಾಗಿ ಹೇಳಿದ ತಾಯಿಗೂ ಆಸ್ಪತ್ರೆಯಲ್ಲಿ ಇರಲು ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿತ್ತು. ಆದರೆ, ಆಕೆಗೆ ಸೋಂಕು ತಗುಲಿಲ್ಲ ಎಂಬುದನ್ನೂ ವೈದ್ಯರು ದೃಢಪಡಿಸಿಕೊಂಡಿದ್ದಾರೆ. ಇದರಿಂದಾಗಿ ಅಸ್ಪತ್ರೆಯಿಂದ ಬಿಡುಗಡೆ ಹೊಂದಿರುವವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.

ಆಸ್ಟ್ರೇಲಿಯಾದಿಂದ ಬಂದಿದ್ದ ಇಲ್ಲಿನ ಹೊಸಯಲ್ಲಾಪುರದ 33 ವರ್ಷದ ವ್ಯಕ್ತಿ ಮತ್ತು ಹುಬ್ಬಳ್ಳಿಯ ಮುಲ್ಲಾ ಓಣಿಯ 27 ವರ್ಷದ ಉದ್ಯಮಿ ಗುಣಮುಖರಾಗಿದ್ದರು. ಉಳಿದ ಆರು ಸೋಂಕಿತರು ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ದೀಪಾ ತಿಳಿಸಿದ್ದಾರೆ.

ಸುಳ್ಳು ಸುದ್ದಿ: ಕ್ರಮಕ್ಕೆ ಡಿ.ಸಿ ಪತ್ರ

ಹುಬ್ಬಳ್ಳಿ: ಶಾಂತಿನಗರದಲ್ಲಿ ಪತ್ತೆಯಾಗಿರುವ ಕೋವಿಡ್-19 ಸೋಂಕು ಹೊಂದಿರುವ ವ್ಯಕ್ತಿಯ ಕಾಲ್ಪನಿಕ ಹೆಸರಿನೊಂದಿಗೆ ಆರೋಗ್ಯವಂತ ಮಾಧ್ಯಮ ಛಾಯಾಗ್ರಾಹಕರ ಫೋಟೊ ಅಂಟಿಸಿ ಕೆಲ ವ್ಯಕ್ತಿಗಳು ಸಾಮಾಜಿಕ ತಾಣದಲ್ಲಿ ಹರಿಯಬಿಟ್ಟಿದ್ದಾರೆ.

ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹುಬ್ಬಳ್ಳಿ–ಧಾರವಾಡ ಪೊಲೀಷ್‌ ಕಮಿಷನರ್‌ಗೆ ಪತ್ರ ಬರೆದಿದ್ದಾರೆ.‌‌

ಧಾರವಾಡದ ಮುಲ್ಲಾ ಓಣಿಯ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಾಗಲೂ ಆ ವ್ಯಕ್ತಿಯ ಹೆಸರಿನೊಂದಿಗೆ ಪತ್ರಕರ್ತರೊಬ್ಬರ ಫೋಟೊ ಅಂಟಿಸಿ ಸುಳ್ಳು ಸುದ್ದಿ ಹರಡಿಸಲಾಗಿತ್ತು. ಆಗ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT