ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಕಾರ್ಮಿಕರ ಕೈಸೇರದ ಅಂತ್ಯಕ್ರಿಯೆ ಬಿಲ್

ಕೋವಿಡ್ ಶವಗಳ ಅಂತ್ಯಸಂಸ್ಕಾರ: ಮೃತರ ದಾಖಲೆ ಸಲ್ಲಿಕೆ ವಿಳಂಬ
Last Updated 5 ಆಗಸ್ಟ್ 2021, 14:41 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೋವಿಡ್–19 ಎರಡನೇ ಅಲೆಯಲ್ಲಿ ಮೃತಪಟ್ಟವರ ಅಂತ್ಯಸಂಸ್ಕಾರ ನೆರವೇರಿಸಿದ್ದಕ್ಕಾಗಿ, ಸ್ಮಶಾನ ಕಾರ್ಮಿಕರಿಗೆ ಪಾವತಿಯಾಗಬೇಕಿದ್ದ ಹಣದ ಪೈಕಿ ಅರ್ಧದಷ್ಟು ಮೊತ್ತವನ್ನು ಮಹಾನಗರ ಪಾಲಿಕೆ ಬಾಕಿ ಉಳಿಸಿಕೊಂಡಿದೆ.

ಕೋವಿಡ್ ಶವಗಳ ಅಂತ್ಯಕ್ರಿಯೆಗೆ ಹುಬ್ಬಳ್ಳಿ ಮತ್ತು ಧಾರವಾಡದ ಐದು ಸ್ಮಶಾನಗಳಲ್ಲಿ ಪಾಲಿಕೆ ವ್ಯವಸ್ಥೆ ಮಾಡಿತ್ತು. ಪ್ರತಿ ಅಂತ್ಯಸಂಸ್ಕಾರಕ್ಕೆ ಕಾರ್ಮಿಕರಿಗೆ ತಲಾ ₹6 ಸಾವಿರ ನಿಗದಿಪಡಿಸಲಾಗಿತ್ತು. ಅದರಂತೆ, ಜುಲೈ ಅಂತ್ಯದವರೆಗೆ ಒಟ್ಟು 560 ಶವಗಳ ಅಂತ್ಯಕ್ರಿಯೆ ನಡೆದಿತ್ತು.

ಸಾಲ ಮಾಡಿ ಅಂತ್ಯಕ್ರಿಯೆ: ‘ಸಾಲ ಮಾಡಿ ಕಟ್ಟಿಗೆ, ಡೀಸೆಲ್ ಹಾಗೂ ಪೂಜಾ ಸಾಮಗ್ರಿ ತಂದು 192 ಕೋವಿಡ್ ಶವಗಳನ್ನು ಸುಟ್ಟಿದ್ದೇವೆ. ಆ ಪೈಕಿ, 96 ಶವಗಳ ಅಂತ್ಯಸಂಸ್ಕಾರದ ಬಿಲ್ ಮಾತ್ರ ಪಾವತಿಯಾಗಿದೆ. ಅದರಲ್ಲೇ ಸ್ಮಶಾನವನ್ನು ಸ್ವಚ್ಛಗೊಳಿಸಿದ್ದೇನೆ. ಕಳೆದ ವರ್ಷದ ಆರು ತಿಂಗಳ ಸಂಬಳವೂ ಬಾಕಿ ಇದೆ’ ಎಂದು ಹೆಗ್ಗೇರಿ ಸ್ಮಶಾನದ ಕಾರ್ಮಿಕರ ಹುಸನಪ್ಪ ವಜ್ಜಣ್ಣವರ ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

‘ವಿದ್ಯಾನಗರದ ಸ್ಮಶಾನದಲ್ಲೂ 265 ಶವಗಳ ಅಂತ್ಯಕ್ರಿಯೆ ನೆರವೇರಿಸಿದ್ದೇವೆ. ಆ ಪೈಕಿ, ಇನ್ನೂ 150ರ ಬಿಲ್ ಬರಬೇಕಿದೆ. ಸದ್ಯ ಕೋವಿಡ್ ಶವಗಳು ಅಪರೂಪಕ್ಕೊಮ್ಮೆ ಬರುತ್ತಿವೆ. ಪಾಲಿಕೆಯವರು ಉಳಿಕೆ ಬಿಲ್ ಅನ್ನು ಆದಷ್ಟು ಬೇಗನೆ ಪಾವತಿಸಿದರೆ ಅನುಕೂಲವಾಗುತ್ತದೆ’ ಎಂದು ಅಲ್ಲಿನ ಕಾರ್ಮಿಕ ಪರಶುರಾಮ ಚಲವಾದಿ ಮನವಿ ಮಾಡಿದರು.

ಕೈ ಸೇರದ ದಾಖಲೆ:‘ಅಂತ್ಯಕ್ರಿಯೆಗಾಗಿ ಮೃತರ ಕಡೆಯವರು ಶವದೊಂದಿಗೆ ಎಸ್ಆರ್‌ಎಫ್‌ (ಸ್ಪೆಸಿಮೆನ್ ರೆಫರಲ್ ಫಾರಂ) ಐಡಿ, ಕೋವಿಡ್ ವರದಿ ಹಾಗೂ ಆಸ್ಪತ್ರೆಯವರು ಶವ ಹಸ್ತಾಂತರಿಸುವಾಗ ನೀಡುವ ಮರಣದ ವರದಿ (ಡೆತ್ ಸಮ್ಮರಿ) ನೀಡಬೇಕಿತ್ತು. ಆದರೆ, ಅನೇಕರು ದಾಖಲೆಗಳನ್ನು ತಂದಿರಲಿಲ್ಲ. ಬಳಿಕ ತಂದುಕೊಡುವುದಾಗಿ ಮನವಿ ಮಾಡಿದ್ದರಿಂದ, ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು’ ಎಂದುಕೋವಿಡ್ ಶವಗಳ ಅಂತ್ಯಕ್ರಿಯೆಯ ಉಸ್ತುವಾರಿ ನೋಡಿಕೊಳ್ಳುವ ಪಾಲಿಕೆಯ ಘನತ್ಯಾಜ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಸಂತೋಷಕುಮಾರ ಯರಂಗಳಿ ಹೇಳಿದರು.

‘ದಾಖಲೆ ಸಲ್ಲಿಕೆ ವಿಳಂಬವಾಗಿ ದ್ದರಿಂದ ಪಾಲಿಕೆ ಅಧಿಕಾರಿಗಳೇ ಮೃತರ ಕುಟುಂಬಗಳಿಂದ ದಾಖಲೆ ಸಂಗ್ರಹಿಸುತ್ತಿದ್ದಾರೆ.ಅವುಗಳ ಆಧಾರದ ಮೇರೆಗೆ, ಕಾರ್ಮಿಕರಿಗೆ ಪ್ರತಿ ಶವದ ಅಂತ್ಯಕ್ರಿಯೆಗೆ ತಲಾ ₹6 ಸಾವಿರ ಪಾವತಿಸಲಾಗಿದೆ. ಇದುವರೆಗೆಪೈಕಿ286 ಬಿಲ್ ಪಾವತಿಸಲಾಗಿದೆ. ದಾಖಲೆ ಸಂಗ್ರಹ ಪೂರ್ಣಗೊಂಡತಕ್ಷಣ ಬಾಕಿ 274 ಬಿಲ್‌ಗಳನ್ನು ಪಾವತಿಸಲಾಗುವುದು’ ಎಂದು ತಿಳಿಸಿದರು.

‘ಕೋವಿಡ್ ಸಾವು ತಗ್ಗಿರುವುದರಿಂದ, ಶವಗಳ ಸಾಗಾಟಕ್ಕೆ ಬಾಡಿಗೆ ಆಧಾರದ ಮೇಲೆ ಪಡೆದಿದ್ದ ಐದು ಆಂಬುಲೆನ್ಸ್‌ಗಳ ಪೈಕಿ, ಸದ್ಯ ಮೂರನ್ನು ಮಾತ್ರ ಇಟ್ಟುಕೊಳ್ಳಲಾಗಿದೆ. ಇವುಗಳಿಗೆ ಮಾಸಿಗೆ ₹70 ಸಾವಿರ ಬಾಡಿಗೆ ನಿಗದಿಪಡಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT