ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿಯನ್ನು ಕಾಂಗ್ರೆಸ್ ಪಾಕಿಸ್ತಾನ ಮಾಡಿತ್ತು: ಸಿ.ಟಿ. ರವಿ ಆರೋಪ

Published : 9 ಸೆಪ್ಟೆಂಬರ್ 2024, 8:54 IST
Last Updated : 9 ಸೆಪ್ಟೆಂಬರ್ 2024, 8:54 IST
ಫಾಲೋ ಮಾಡಿ
Comments

ಹುಬ್ಬಳ್ಳಿ: 'ಮೂವತ್ತು ವರ್ಷಗಳ ಹಿಂದೆ ಇದೇ ಕಾಂಗ್ರೆಸ್ ಸರ್ಕಾರ ಹುಬ್ಬಳ್ಳಿಯನ್ನು ಪಾಕಿಸ್ತಾನವನ್ನಾಗಿ ಮಾಡಿತ್ತು. ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲು ಅವಕಾಶ ನೀಡದೆ ಪಾಕಿಸ್ತಾನದ ಮನಸ್ಥಿತಿ ಪ್ರದರ್ಶಿಸಿತ್ತು' ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆರೋಪಿಸಿದರು.

'ಈದ್ಗಾ' ಗಣೇಶಮೂರ್ತಿ ವಿಸರ್ಜನೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಅಂದು ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವ ವಿಷಯದಲ್ಲಿ ಪ್ರಾಣತೆತ್ತವರು ಇದ್ದಾರೆ. ಪಾಕಿಸ್ತಾನದ ಮನಸ್ಥಿತಿ ಹೊಂದಿದ್ದ ಕಾಂಗ್ರೆಸ್ ಸರ್ಕಾರ, ಹುಬ್ಬಳ್ಳಿಯನ್ನು ಸಹ ಅದೇ ರೀತಿ ನೋಡಿತ್ತು. ಈಗ ಅದೇ ಮೈದಾನದಲ್ಲಿ ನಾವು ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಿ, ಅದ್ದೂರಿಯಾಗಿ ಹಬ್ಬ ಆಚರಿಸಿದ್ದೇವೆ' ಎಂದರು.

'ನಾವು ಯಾವಾಗ ಸಂಘಟಿತರಾಗುತ್ತೇವೆಯೋ, ಆವಾಗ ದೇಶದ್ರೋಹಿಗಳ ಸದ್ದು ಅಡಗುತ್ತದೆ. ಅದಕ್ಕಾಗಿಯೇ ಬಾಲಗಂಗಾಧರ ತಿಲಕರು ಗಣೇಶೋತ್ಸವ ಆಚರಣೆ ಜಾರಿಗೆ ತಂದಿದ್ದು. ನಾವೆಲ್ಲ ಒಗ್ಗಟ್ಟಾಗಿ, ದೇಶಪ್ರೇಮ ಸಾರಬೇಕು' ಎಂದರು.

'ಪ್ರತಿ ದೇಶಕ್ಕೂ ಒಂದು ಆತ್ಮವಿದೆ. ನಮ್ಮ‌ದೇಶದ ಆತ್ಮ ಹಿಂದುತ್ವವಾಗಿದೆ. ಅದನ್ನೇ ದುರ್ಬಲಗೊಳಿಸುವ ಸಂಚು ನಡೆಯುತ್ತಿದೆ. ಇದು ಹೀಗೆ ಮುಂದುವರಿದರೆ ದೇಶಕ್ಕೆ ಉಳಿಗಾಲವಿಲ್ಲ. ಜೈ ಭೀಮ ಎನ್ನುವವರು, ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಳ್ಳಬೇಕು. ಅವರನ್ನು ಸರಿಯಾಗಿ ಅರ್ಥಮಾಡಿಕೊಂಡರೆ, ಜೈ ಭೀಮ ಜೈ ಭಾರತ ಎನ್ನುತ್ತಿದ್ದರು. ಆ ಭೀಮನ ಶಕ್ತಿ ಭಾರತವನ್ನು ಮೇಲೆತ್ತುವಲ್ಲಿ ಬಳಕೆಯಾಗಬೇಕಿದೆ' ಎಂದು ಹೇಳಿದರು.

'ಹಿಂದೂ ವಿರೋಧಿಗಳು, ನಮನ್ನು 'ನೀವ್ಯಾರು' ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ನಾವು ರಾಮನ ಅನುಯಾಯಿಗಳು, ಹನುಮನ ಭಕ್ತರು ಎಂದು ಎದೆತಟ್ಟಿ ಹೇಳಬೇಕು. ಅವರಿಗೆ ಇಲ್ಲಿರಲು ಆಶ್ರಯ ನೀಡಿದವರು ಯಾರು ಎನ್ನುವುದನ್ನು ಮೊದಲು ತಿಳಿಯಲಿ. ಅಸಂಬದ್ಧ ಮಾತುಗಳನ್ನಾಡಿದರೆ ಬಾಲ ಹೇಗೆ ಕತ್ತರಿಸಬೇಕೆನ್ನುವುದು ನಮಗೆ ಗೊತ್ತು' ಎಂದು ಎಚ್ಚರಿಸಿದರು.

'ಡಿಜೆ ಹಚ್ಚಬಾರದಂತೆ, ಪ್ರಸಾದ ಪರೀಕ್ಷೆ ಮಾಡಿಸಬೇಕಂತೆ ಹೀಗೆ ಏನೇನೋ ನಿಯಮಾವಳಿಗಳನ್ನು ಸರ್ಕಾರ ಜಾರಿಗೆ ತರುತ್ತಿದೆ. ಓಲೈಕೆ ರಾಜಕಾರಣವೇ ಅದಕ್ಕೆ ಮುಖ್ಯವಾಗಿದೆ. ನಾವು ಸಹ ಕೋಮುವಾದಿಗಳಾಗಿದ್ದರೆ, ನಮ್ಮನ್ನು ಪ್ರಶ್ನೆ ಮಾಡುವವರೇ ಇರುತ್ತಿರಲಿಲ್ಲ. ನಾವಿಬ್ಬರು ನಮಗಿಬ್ಬರು ಎನ್ನುವ ಕೌಟುಂಬಿಕ ತತ್ವಸಿದ್ಧಾಂತ ಬಿಟ್ಟು, ನಮ್ಮ ತಾಕತ್ತು ಏನೆಂದು ತೋರಿಸಬೇಕಿದೆ' ಎಂದು ಸಿ.ಟಿ. ರವಿ ಹೇಳಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, 'ಹಿಂದೆ ಇದೇ ಮೈದಾನದಲ್ಲಿ ಘರ್ಷಣೆಯಾಗಿತ್ತು. ಈಗ ಇದೇ ಮೈದಾನದಲ್ಲಿ ಕೋಮು ಸೌಹಾರ್ದತೆಯಲ್ಲಿ ಗಣೇಶೋತ್ಸವ ಆಚರಿಸುತ್ತಿದ್ದೇವೆ‌. ಅನೇಕರು ವಿರೋಧಿಸಿದ್ದರು, ಅದ್ಯಾವುದನ್ನೂ ಲೆಕ್ಕಿಸದೆ ಶಾಂತಿಯಿಂದ ಹಬ್ಬ ಮಾಡಿದ್ದೇವೆ' ಎಂದರು.

ರಾಣಿ ಚನ್ನಮ್ಮ ಶ್ರೀ ಗಜಾನನ ಉತ್ಸವ ಮಹಾಮಂಡಳಿ ಗೌರವಾಧ್ಯಕ್ಷ ವಿ.ಎಸ್.ವಿ. ಪ್ರಸಾದ್, ಅಧ್ಯಕ್ಷ ಸಂಜೀವ ಬಡಸ್ಕರ, ವಿಧಾನಪರಿಷತ್ ಸದಸ್ಯ ಪ್ರದೀಪ‌ ಶೆಟ್ಟರ್, ಪಾಲಿಕೆ‌ ಸದಸ್ಯ ಸಂತೋಷ ಚವ್ಹಾಣ, ಶಿವು ಮೆಣಸಿನಕಾಯಿ, ಮುಖಂಡರಾದ ಶಂಕರಪಾಟೀಲ ಮುನೇನಕೊಪ್ಪ, ಮಹೇಂದ್ರ ಕೌತಾಳ, ಅಶೋಕ ಕಾಟವೆ ಹಾಗೂ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT