ಭಾನುವಾರ, ಏಪ್ರಿಲ್ 11, 2021
33 °C
ವಿಶ್ವ ಬುದ್ಧ ಧಮ್ಮ ಸಂಘದ ಡಾ.ಎಂ. ವೆಂಕಟಸ್ವಾಮಿ ಅಭಿಪ್ರಾಯ

ಜಾತಿ ಗುಲಾಮಗಿರಿ ಮುಕ್ತಿಗಾಗಿ ಧಮ್ಮ ದೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಜಾತಿ ಗುಲಾಮಗಿರಿಯಿಂದ ಶೋಷಿತರು ಮುಕ್ತರಾಗಲು ಬೌದ್ಧ ಧಮ್ಮ ದೀಕ್ಷೆಯೊಂದೇ ಪರಿಹಾರ’ ಎಂದು ವಿಶ್ವ ಬುದ್ಧ ಧಮ್ಮ ಸಂಘದ ಪ್ರಧಾನ ಸಂಚಾಲಕ ಹಾಗೂ ಬೆಂಗಳೂರಿನ ನಾಗಸೇನಾ ಬುದ್ಧ ವಿಹಾರದ ಅಧ್ಯಕ್ಷ ಡಾ.ಎಂ. ವೆಂಕಟಸ್ವಾಮಿ ಹೇಳಿದರು.

ನಗರದ ರೈಲ್ವೆ ಆಫೀಸರ್ಸ್‌ ಕಾಲೊನಿಯಲ್ಲಿರುವ ಬುದ್ಧ ವಿಹಾರದಲ್ಲಿ ಸಂಘದ ವತಿಯಿಂದ ಭಾನುವಾರ ನಡೆದ ಉತ್ತರ ಕರ್ನಾಟಕ ವಿಭಾಗ ಮಟ್ಟದ ಧಮ್ಮ ದೀಕ್ಷಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಭೌದ್ಧ ಧಮ್ಮ ಭಾರತದ ಅತ್ಯಂತ ಹಳೆಯ ಧರ್ಮವಾಗಿದೆ. ಸಾಮ್ರಾಟ್ ಅಶೋಕನ ಕಾಲ ಧಮ್ಮದ ಸುವರ್ಣ ಯುಗವಾಗಿತ್ತು. ಶ್ರೀಲಂಕಾದಿಂದ ಆಫ್ಘಾನಿಸ್ತಾನದವರೆಗೆ ಧಮ್ಮ ಹರಡಿತ್ತು. ಭಾರತದ ಬಹುಸಂಖ್ಯಾತರು ಹಿಂದೆ ಬೌದ್ಧರಾಗಿದ್ದರು’ ಎಂದರು.

‘ಚರಿತ್ರೆಯಲ್ಲಿ ಹುದುಗಿದ್ದ ಸತ್ಯವನ್ನು ಹೊರತೆಗೆದ ಅಂಬೇಡ್ಕರ್, 1956 ಅಕ್ಟೋಬರ್ 14ರಂದು ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧಮ್ಮ ಸ್ವೀಕರಿಸಿದರು. ಧಮ್ಮ ಸ್ವೀಕಾರವೆಂದರೆ, ಮರಳಿ ನಮ್ಮ ಮನೆಗೆ ಹೋಗುವುದು ಎಂದು ತೋರಿಸಿ ಕೊಟ್ಟರು. ಬುದ್ಧ ದೇವರಲ್ಲ. ವಿಶ್ವ ಕಂಡ ಶ್ರೇಷ್ಠ ಸಮಾಜ ಸುಧಾರಕ’ ಎಂದು ಹೇಳಿದರು.

‘ಬೌದ್ಧ ಧಮ್ಮವನ್ನು ಮೇಲ್ಜಾತಿ ಜನರೂ ಅಪ್ಪಿಕೊಳ್ಳುತ್ತಿದ್ದಾರೆ. ಶೋಷಿತ ಸಮುದಾಯದವರು ತಮ್ಮ ಜಾತಿ ಮೇಲರಿಮೆ ಬದಿಗೊತ್ತಿ ಧಮ್ಮವನ್ನು ಸ್ವೀಕರಿಸಬೇಕು. ದಮ್ಮ ಕ್ರಾಂತಿಯು ಶೋಷಿತರನ್ನು ಅನೇಕ ಸಮಸ್ಯೆಗಳಿಂದ ವಿಮೋಚನೆಗೊಳಿಸಬಲ್ಲದು’ ಎಂದು ಅಭಿಪ್ರಾಯಪಟ್ಟರು.

ಮುಖಂಡ ಲಕ್ಷ್ಮಣ ಬಕ್ಕಾಯಿ ಮಾತನಾಡಿ, ‘ಜಾತಿ ಗಣತಿಯಲ್ಲಿ ಶೋಷಿತ ಸಮುದಾಯದವರು ಧರ್ಮದ ಕಾಲಂನಲ್ಲಿ ಹಿಂದೂ ಧರ್ಮದ ಬದಲಿಗೆ, ಬೌದ್ಧ ಧರ್ಮದ ಹೆಸರನ್ನು ಹಾಗೂ ಜಾತಿ ಕಾಲಂನಲ್ಲಿ ಉಪ ಜಾತಿಯನ್ನು ನಮೂದಿಸಬೇಕು’ ಎಂದು ಸಲಹೆ ನೀಡಿದರು.

‘ಹಿಂದೆ ನಡೆದ ಗಣತಿಯಲ್ಲಿ ಬೌದ್ಧ ಧರ್ಮದ ಹೆಸರು ನಮೂದಿಸಿದ್ದರೂ, ಜಾತಿ ಪ್ರಮಾಣಪತ್ರದಲ್ಲಿ ಇಂದಿಗೂ ಬೌದ್ಧ ಧರ್ಮದ ಹೆಸರನ್ನು ಸೇರಿಸಲು ಆಗುತ್ತಿಲ್ಲ. ಪ್ರಮಾಣಪತ್ರ ಮಾಡಿಸುವಾಗ ಬೌದ್ಧ ಧರ್ಮದ ಕಾಲಂ ತೋರಿಸುತ್ತಿಲ್ಲ. ಇದನ್ನು ಸರಿಪಡಿಸಲು ಸರ್ಕಾರದ ಗಮನ ಸೆಳೆಯಬೇಕಿದೆ’ ಎಂದರು.

ಮಳೆ ಅವಾಂತರ:

ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಧಾರಾಕಾರ ಮಳೆ ಆರಂಭವಾಯಿತು. ಶಾಮಿಯಾನ ಒದ್ದೆಯಾಗಿ ನೀರು ಸೋರತೊಡಗಿತು. ಕೆಲವರು ಕುರ್ಚಿಯನ್ನು ತಲೆ ಮೇಲೆ ಹಿಡಿದುಕೊಂಡು ರಕ್ಷಣೆ ಪಡೆದರೆ, ಉಳಿದವರು ಚೆಲ್ಲಾಪಿಲ್ಲಿಯಾದರು. ಇದರಿಂದಾಗಿ, ಆಯೋಜಕರು ಸಮಾರಂಭವನ್ನು ಸರಳವಾಗಿ ಮುಗಿಸಿದರು.

‘ಕಾರ್ಯಕ್ರಮಕ್ಕೆ ಬರುವುದಾಗಿ ಭರವಸೆ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರು, ಮಳೆಯಿಂದಾಗಿ ಕಡೆ ಗಳಿಗೆಯಲ್ಲಿ ತಮ್ಮ ಭೇಟಿ ರದ್ದುಗೊಳಿಸಿದರು’ ಎಂದು ಆಯೋಜಕರು ತಿಳಿಸಿದರು.

ಬೀದರ್‌ನ ಧಮ್ಮದೀಪ ಭಂತೇಜಿ ಹಾಗೂ ಸಂಗಡಿಗರ ನೇತೃತ್ವದಲ್ಲಿ ದೀಕ್ಷೆ ವಿಧಿವಿಧಾನಗಳು ನೆರವೇರಿದವು. ಸಮತಾ ಸೈನಿಕ ದಳದ ಶಂಕರ ಅಜಮನಿ ಆಶಯ ನುಡಿಗಳನ್ನಾಡಿದರು.

ರೈಲ್ವೆ ನೌಕರರ ಬುದ್ಧ ವಿಹಾರದ ಅಧ್ಯಕ್ಷ ರಾಹುಲ್ ವಾಘ್ಮೋರೆ, ಭೀಮ್ ಆರ್ಮಿಯ ವಿನೋದ ನಾರಾಯಣಪುರ, ಮುಖಂಡರಾದ ನಿಂಗಪ್ಪ ಸಿಂದಗಿ, ಗಂಗಾಧರ ಪೆರೂರ, ಬಸವರಾಜ ಬಮ್ಮನಾಳ, ನಿಂಗಪ್ಪ ಪಾವಗಡ ಶ್ರೀರಾಮ್, ಶ್ರೀಕಾಂತ ತಲಕೇರಿ ಸಿದ್ದಪ್ಪ ಹೊಸಮನಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು