ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರೆಗೆ ಗ್ರಾಮದೇವಿಯರ ಸೊಬಗು

ವಿಜಯದಶಮಿ ನಂತರ ಭಂಡಾರ ಪೂಜೆ, ವಿಶೇಷ ಭೋಜನ
Last Updated 8 ಅಕ್ಟೋಬರ್ 2022, 6:28 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ದಾಜಿಬಾನಪೇಟೆಯಲ್ಲಿರುವ ದ್ಯಾಮವ್ವ, ದುರ್ಗವ್ವ ದೇವಸ್ಥಾನವು ದಸರಾ ಅಂಗವಾಗಿ ನಡೆಯುತ್ತಿರುವ ವಿಶೇಷ ಪೂಜೆ, ವಿದ್ಯುತ್‍ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.

ಎಸ್‍ಎಸ್‍ಕೆ ಪಂಚ ಟ್ರಸ್ಟ್‌ನಿಂದ ಗ್ರಾಮದೇವತೆಯರಿಗೆ ಧಾರ್ಮಿಕ ವಿಧಿ ವಿಧಾನದಂತೆ ಪೂಜೆಗಳು ನೆರವೇರುತ್ತಿವೆ. ಭಕ್ತಗಣ ನಿತ್ಯ ದೇಗುಲಕ್ಕೆ ಬಂದು ದೇವಿಯರನ್ನು ಕಣ್ತುಂಬಿಕೊಳ್ಳುತ್ತಿದೆ. ಮಹಾಲಯ ಅಮಾವಾಸ್ಯೆ ನಂತರ ಘಟಸ್ಥಾಪನೆ ನಡೆದಿದೆ. ಕಳೆದ ಶುಕ್ರವಾರ ಲಲಿತ ಪಂಚಮಿ ಅಂಗವಾಗಿ, ಘಟಸ್ಥಾಪನೆ ಮಾಡಿದ ಜಗುಲಿಗೆ ಪುರಿ-ಕಡುಬು ಕಟ್ಟಿ, ಸಿಹಿ ಖಾದ್ಯಗಳ ನೈವೇದ್ಯ ಅರ್ಪಿಸಲಾಯಿತು.

ಸೋಮವಾರ ದುರ್ಗಾಷ್ಠಮಿ, ಮಂಗಳವಾರ ಮಹಾನವಮಿ ಅಂಗವಾಗಿ ಖಂಡೆ ಪೂಜೆ ಹಾಗೂ ಬುಧವಾರ ವಿಜಯದಶಮಿ ಅಂಗವಾಗಿ ಬನ್ನಿಪೂಜೆ ನಡೆಯಲಿದೆ. ಅಂದು ಮಧ್ಯಾಹ್ನ 4 ಗಂಟೆಗೆ ದೇವಿಯರ ಉತ್ಸವ ಮೂರ್ತಿಯನ್ನು ಊರ ಹೊರಗೆ ಮೆರವಣಿಗೆಯಲ್ಲಿ ಕರೆದೊಯ್ದು, ಪೂಜೆ ಸಲ್ಲಿಸಿ, ಬನ್ನಿಪತ್ರೆಯೊಂದಿಗೆ ರಾತ್ರಿ 8ರ ಸುಮಾರಿಗೆ ದೇವಸ್ಥಾನಕ್ಕೆ ಹಿಂದಿರುಗುತ್ತದೆ. ನೂರಾರು ಭಕ್ತರು ಈ ಸಂದರ್ಭದಲ್ಲಿ ಹಾಜರಿದ್ದು, ದೇವಿಯರಿಗೆ ಪೂಜೆ ಸಲ್ಲಿಸುವುದು ಹಿಂದಿನಿಂದ ನಡೆದುಬಂದ ಸಂಪ್ರದಾಯವಾಗಿದೆ.

ಭಂಡಾರ ಪೂಜೆ: ‘ಎಸ್ಎಸ್‍ಕೆ ಸಮಾಜದ ಶಕ್ತಿ ಪೀಠಗಳಲ್ಲಿ ದಸರಾ ನಂತರ, ದೀಪಾವಳಿವರೆಗಿನ ನಡುವಿನ 2ನೇ ಅಥವಾ 3ನೇ ಶುಕ್ರವಾರ ಭಂಡಾರ ಪೂಜೆ ಹಮ್ಮಿಕೊಳ್ಳಲಾಗುತ್ತದೆ. ಉಗ್ರಗೊಂಡ ದೇವಿ ಶಾಂತಳಾಗಲೆಂದು ಪೂಜೆ ಮಾಡಿ, ನೈವೇದ್ಯ ಸಮರ್ಪಿಸಲಾಗುತ್ತದೆ. ಒಂದು ತಟ್ಟೆಯಲ್ಲಿ ಐವರು ಮುತ್ತೈದೆಯರಂತೆ ಒಟ್ಟು 100 ತಟ್ಟೆಗಳಲ್ಲಿ 500 ಮುತ್ತೈದೆಯರಿಗೆ ಮೊದಲು ಊಟದ ವ್ಯವಸ್ಥೆ ಮಾಡಲಾಗುತ್ತದೆ. ಬಳಿಕ ಸಾವಿರಾರು ಭಕ್ತರು ಮಾಂಸಾಹಾರ ಸವಿಯುತ್ತಾರೆ’ ಎಂದು ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಭಾಸ್ಕರ ಜಿತೂರಿ ಹೇಳಿದರು.

‘ಅ. 14ರಂದು ಈ ಸಲದ ಭಂಡಾರ ಪೂಜೆ ಹಮ್ಮಿಕೊಳ್ಳಲಾಗಿದೆ. ಮಾರನೇ ದಿನ ಬುತ್ತಿಪೂಜೆ ನಡೆಯಲಿದ್ದು, ಅಲ್ಲಿಗೆ ಸಮಾಜದವರ ದಸರಾ ಆಚರಣೆ ಪೂರ್ಣಗೊಳ್ಳುತ್ತದೆ. ದೇಗುಲದ ಕುರಿತು ಈಗೀಗ ಹೆಚ್ಚು ಜಾಗೃತಿ ಮೂಡುತ್ತಿದೆ. ಶೀಘ್ರದಲ್ಲೇ ಕಲ್ಯಾಣ ಮಂಟಪ ಉದ್ಘಾಟನೆಯಾಗಲಿದ್ದು, ಅಂದು ಚಂಡಿಕಾಯಾಗ ಸಹ ಆಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT