ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾದಾರ ಸಾವು: ಕ್ಲೇಮ್‌ಗೆ ಮೂವರ ಅರ್ಜಿ! ಗ್ರಾಹಕ ಆಯೋಗ ಅಪರೂಪದ ಆದೇಶ

ರಸ್ತೆ ಅಪಘಾತದಲ್ಲಿ ವಿಮಾದಾರ ಮೃತಪಟ್ಟ ಪ್ರಕರಣದಲ್ಲಿ ವಿಮೆ ಮೊತ್ತ ₹ 15 ಲಕ್ಷಕ್ಕಾಗಿ ಕ್ಲೇಮು ಅರ್ಜಿ ಸಲ್ಲಿಸಿರುವ ಮೂವರ ಪೈಕಿ ಹಕ್ಕುದಾರ ಯಾರು ?
Published 20 ನವೆಂಬರ್ 2023, 14:36 IST
Last Updated 20 ನವೆಂಬರ್ 2023, 14:44 IST
ಅಕ್ಷರ ಗಾತ್ರ

ಧಾರವಾಡ: ರಸ್ತೆ ಅಪಘಾತದಲ್ಲಿ ವಿಮಾದಾರ ಮೃತಪಟ್ಟ ಪ್ರಕರಣದಲ್ಲಿ ವಿಮೆ ಮೊತ್ತ ₹ 15 ಲಕ್ಷಕ್ಕಾಗಿ ಕ್ಲೇಮು ಅರ್ಜಿ ಸಲ್ಲಿಸಿರುವ ಮೂವರ ಪೈಕಿ ಹಕ್ಕುದಾರ ಯಾರು ಎಂದು ಇತ್ಯರ್ಥವಾಗುವವರೆಗೆ ಆ ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡುವಂತೆ ಚೋಳ ಮಂಡಲ ವಿಮಾ ಕಂಪೆನಿಗೆ ಜಿಲ್ಲಾ ಗ್ರಾಹಕ ಆಯೋಗ ಆದೇಶಿಸಿದೆ.

ಆಯೋಗದ ಅಧ್ಯಕ್ಷ ಈಶಪ್ಪ. ಭೂತೆ, ಸದಸ್ಯರಾದ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಅವರು ಈ ಆದೇಶ ನೀಡಿದ್ಧಾರೆ. ಒಂದು ತಿಂಗಳೊಳಗೆ ₹15 ಲಕ್ಷ ಹಣವನ್ನು ಠೇವಣಿ ಇಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಏನಿದು ಪ್ರಕರಣ?

ನವಲಗುಂದ ತಾಲ್ಲೂಕಿನ ಹಾಳ ಕುಸುಗಲ್ಲದ ಬಸವರಾಜ ಶಂಕರಪ್ಪ ಸವದಿ ಅವರು ಗೂಡ್ಸ್‌ ವಾಹನದ ಮಾಲೀಕ ಕಂ ಚಾಲಕರಾಗಿದ್ದರು. ಚೋಳಮಂಡಲ ವಿಮಾ ಕಂಪನಿಯ ವಿಮೆ ಮಾಡಿಸಿದ್ದರು, ₹ 15 ಲಕ್ಷದ ವೈಯಕ್ತಿಕ ಅಪಘಾತ ವಿಮೆ ಒಳಗೊಂಡಿತ್ತು.

2021 ಮಾರ್ಚ್‌ 21ರಂದು ವಾಹನ ಅಪಘಾತಕ್ಕೀಡಾಗಿ ಬಸವರಾಜ ಸಾವಿಗೀಡಾಗಿದ್ದರು. ಬಸವರಾಜ ಅವರ ಪುತ್ರ ಬಾಲಕ ಸಿದ್ದಪ್ಪ ಪರವಾಗಿ ಆತನ ತಾಯಿ ಪ್ರಸುತಿ ಅವರು ವಿಮಾ ಮೊತ್ತಕ್ಕಾಗಿ ಕ್ಲೇಮು ಅರ್ಜಿ ಸಲ್ಲಿಸಿದ್ದರು.

ಬಸವರಾಜ ಅವರ ಪತ್ನಿ ಎಂದು ಮತ್ತೊಬ್ಬ ಮಹಿಳೆ ಮಾಲಾಶ್ರೀ ಹಾಗೂ ಬಸವರಾಜ ಅವರ ಅವಿವಾಹಿತ ಸಹೋದರಿ ಎಂದು ಬಸವ್ವ ಸವದಿ ಅವರು ವಿಮಾ ಹಣ ತಮಗೂ ಸಲ್ಲಬೇಕು ಎಂದು ಆಕ್ಷೇಪಣೆ ಅರ್ಜಿ ಸಲ್ಲಿಸಿದ್ದರು. ವಿಮಾ ಮೊತ್ತ ಯಾರಿಗೆ ನೀಡಬೇಕು ಎಂದು ಗೊತ್ತಾಗುತ್ತಿಲ್ಲ ಎಂದು ವಿಮಾ ಕಂಪನಿಯವರು ಕ್ಲೇಮು ತಿರಸ್ಕರಿಸಿದ್ದರು.

ಪ್ರಸುತಿ ಅವರು ಅವರು ವಿಮಾ ಕಂಪನಿ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಬಸವ್ವ ಮತ್ತು ಮಾಲಾಶ್ರೀ ಅವರು ಪರಿಹಾರವನ್ನು ತಮಗೂ ಕೊಡುವಂತೆ ಕೋರಿ ಧಾರವಾಡ ಮತ್ತು ಬೆಳಗಾವಿಯ ಕೋರ್ಟ್‌ಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಆಯೋಗವು ವಿಮಾದಾರನ ಅವಲಂಬಿತರಿಗೆ ವಿಮಾ ಮೊತ್ತ ಪಾವತಿಸುವುದು ವಿಮಾ ಕಂಪನಿಯ ಕರ್ತವ್ಯ. ಮೃತನ ಅವಲಂಬಿತರ ( ಪುತ್ರ, ಸಹೋದರಿ, ಇನ್ನೊಬ್ಬ ಪತ್ನಿ) ವಿಚಾರದಲ್ಲಿ ತಕರಾರು ಇದೆ. ಸಿವಿಲ್‌ ಕೋರ್ಟ್‌ನಲ್ಲಿ ತಕರಾರು ಇತ್ಯರ್ಥಪಡಿಸಿಕೊಂಡು ವಿಮಾ ಮೊತ್ತದ ಹಕ್ಕುದಾರ ಆದೇಶ ತಂದವರು ಬಡ್ಡಿಸಮೇತ ಠೇವಣಿ ಹಣ ಪಡೆಯಲು ಅರ್ಹರು ಎಂದು ಆದೇಶದಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT