ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಆಮೆಗತಿಯಲ್ಲಿ ಅಭಿವೃದ್ಧಿ ಕಾರ್ಯ

ವಾರ್ಡ್‌ 50ರ ವೀರಮಾರುತಿನಗರ, ಯಾವಗಲ್ ಪ್ಲಾಟ್‌ ನಿವಾಸಿಗಳ ಪರದಾಟ
ಗೋವರ್ಧನ ಎಸ್‌.ಎನ್‌.
Published 13 ಮಾರ್ಚ್ 2024, 5:13 IST
Last Updated 13 ಮಾರ್ಚ್ 2024, 5:13 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ಬಹುತೇಕ ಭಾಗಗಳಲ್ಲಿ ಅಭಿವೃದ್ಧಿ ಕಾರ್ಯಗಳು ಭರದಿಂದ ನಡೆದಿವೆ. ಆದರೆ, ಕೆಲವು ಕಡೆ ಕುಂಟುತ್ತಾ ಸಾಗಿವೆ. ಇದಕ್ಕೆ ಸ್ಪಷ್ಟ ಉದಾಹರಣೆ ವಾರ್ಡ್‌ 50ರ ವೀರಮಾರುತಿನಗರ ಹಾಗೂ ಯಾವಗಲ್ ಪ್ಲಾಟ್‌.

‘ಸುಮಾರು 500 ಮನೆಗಳಿರುವ ಈ ಕೊಳೆಗೇರಿ, ರಸ್ತೆ ನಿರ್ಮಾಣ, ನೀರಿನ ಪೂರೈಕೆ ವಿಚಾರದಲ್ಲಿ ಈಚೆಗೆ ಸ್ವಲ್ಪ ಸುಧಾರಣೆ ಆಗಿದೆ. ಆದರೆ, ಸ್ವಚ್ಛತೆ, ಶೌಚಾಲಯ, ಕಸ ವಿಲೇವಾರಿ ವಿಷಯದಲ್ಲಿ ಸಾಕಷ್ಟು ಹಿಂದುಳಿದಿದೆ. ಹೊಸೂರು ಪ್ರಾದೇಶಿಕ ಬಸ್‌ ನಿಲ್ದಾಣ ಸೇರಿ ಬೃಹತ್‌ ಆಸ್ಪತ್ರೆಗಳು, ಹೋಟೆಲ್‌ಗಳು ಇದ್ದರೂ ಅಭಿವೃದ್ಧಿ ಮಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ನಿವಾಸಿಗಳ ಆರೋಪ.

‘60 ವರ್ಷಗಳಿಂದ ಇಲ್ಲಿ ವಾಸವಿರುವೆ. ಸಮಸ್ಯೆಗಳು ದಿನದಿಂದ ದಿನಕ್ಕೆ ಬೆಳೆಯುತ್ತಿವೆ. ಒಂದು ಸಮಸ್ಯೆ ಪರಿಹಾರವಾದರೆ, ಮತ್ತೊಂದು ಉದ್ಭವವಾಗುತ್ತದೆ’ ಎಂದು ದುರ್ಗಮ್ಮ ಹೇಳಿದರು. 

‘ಮನೆಯ ಮುಂದಿನ ಚರಂಡಿಯನ್ನು ಸ್ವಚ್ಛಗೊಳಿಸಿಲ್ಲ. ಕಸ ಯತೇಚ್ಛವಾಗಿ ಕಟ್ಟಿಕೊಂಡಿದೆ. ಸೊಳ್ಳೆಗಳು ಉತ್ಪತ್ತಿಯಾಗಿ, ಸಾಂಕ್ರಾಮಿಕ ರೋಗ ಹರಡುತ್ತಿದೆ. ದುರ್ವಾಸನೆ, ಸೊಳ್ಳೆಗಳ ಕಾಟಕ್ಕೆ ಕಂಗೆಟ್ಟಿದ್ದೇವೆ’ ಎಂದು ಕಸ್ತೂರಿ ಕಟಾರಿ ಬೇಸರದಿಂದ ನುಡಿದರು. 

‘ನೀರು ಸಾಲದಿದ್ದಾಗ ಬೋರ್‌ವೆಲ್‌ನಿಂದ ತರಬೇಕು. ಒಳಚರಂಡಿ ಚೇಂಬರ್‌ನಿಂದ ತ್ಯಾಜ್ಯದ ನೀರು ಹೊರಬರುತ್ತಿದೆ. ರಸ್ತೆ ಮೇಲೆ ಹರಿಯುವ ಕೊಳಚೆ ನೀರು ತುಳಿದು ಓಡಾಡಬೇಕಾದ ಸ್ಥಿತಿ ಇದೆ. ಎಲ್ಲ ಮನೆಗಳಲ್ಲಿ ವೈಯಕ್ತಿಕ ಶೌಚಾಲಯಗಳಿಲ್ಲ. ಬಯಲು ಶೌಚಾಲಯ ಅನಿವಾರ್ಯವಾಗಿದೆ. ಹೆಣ್ಣುಮಕ್ಕಳಿಗೆ ಪರಿಸ್ಥಿತಿ ಹೇಳತೀರದು’ ಎಂದು ಮಹಾಲಕ್ಷ್ಮಿ ನೇರಣಿಕಿ ಹೇಳಿದರು.

ಅಮಿತ್ ವಡ್ಡರ್
ಅಮಿತ್ ವಡ್ಡರ್
ಶಾಂತಮ್ಮ ಬೋಜಗಾರ
ಶಾಂತಮ್ಮ ಬೋಜಗಾರ
ರೇಣುಕಾ ಹರಿಜನ
ರೇಣುಕಾ ಹರಿಜನ
ಮೋಹನ ಹಿರೇಮನಿ
ಮೋಹನ ಹಿರೇಮನಿ
ಮಂಗಳಮ್ಮ ಮೋಹನ್ ಹಿರೇಮನಿ
ಮಂಗಳಮ್ಮ ಮೋಹನ್ ಹಿರೇಮನಿ

ಎಂಟು ದಿನಗಳಿಗೊಮ್ಮೆ ನೀರು ಪೂರೈಸಬೇಕಿದ್ದರೂ ಒಮ್ಮೊಮ್ಮೆ ನೀರು ಪೂರೈಕೆ ವಿಳಂಬವಾಗುತ್ತದೆ. ಇದರಿಂದ ದೈನಂದಿನ ಕೆಲಸಗಳಿಗೆ ತೊಡಕು ಆಗುತ್ತಿದೆ.

- ಅಮಿತ್ ವಡ್ಡರ್ ಸ್ಥಳೀಯ ನಿವಾಸಿ

10 ವರ್ಷದಿಂದ ರಸ್ತೆ ಪಕ್ಕದ ಮನೆಯಲ್ಲಿ ವಾಸವಿದ್ದೇನೆ. ವಾಹನಗಳು ಸಾಗಿದಾಗ ದೊಡ್ಡ ಪ್ರಮಾಣದ ದೂಳು ಏಳುತ್ತದೆ. ಅನಾರೋಗ್ಯ ಸಮಸ್ಯೆ ಕಾಡುತ್ತದೆ.

- ಶಾಂತಮ್ಮ ಬೋಜಗಾರ ಸ್ಥಳೀಯರು

ಸಮರ್ಪಕವಾಗಿ ಕಸ ವಿಲೇವಾರಿ ಆಗದ ಕಾರಣ ಶುಚಿತ್ವದ ಕೊರತೆ ಇದೆ. ಅಧಿಕಾರಿಗಳು ಈಗಲಾದರೂ ಕ್ರಮ ವಹಿಸಿ ಬಡಾವಣೆಯಲ್ಲಿನ ಸಮಸ್ಯೆ ಪರಿಹರಿಸಬೇಕು.

- ರೇಣುಕಾ ಹರಿಜನ ಸ್ಥಳೀಯ ನಿವಾಸಿ

ಮೂಲಸೌಲಭ್ಯ ಅಭಿವೃದ್ಧಿಗಾಗಿ ಈಗಾಗಲೇ ಹಲವು ಬಾರಿ ಹೋರಾಟ ನಡೆಸಲಾಗಿದೆ. ಸೌಲಭ್ಯ ಸಿಗುವವರಿಗೆ ಹೋರಾಟ ನಡೆಸಲಾಗುವುದು - ಮೋಹನ ಹಿರೇಮನಿ ಮುಖಂಡ

‘ಅಧಿಕಾರಿಗಳ ನಿರ್ಲಕ್ಷ್ಯ’ (ಫೋಟೊ ಇದೆ) ‘ಹೊಸೂರು ಭಾಗದಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿ ನಡೆಯುತ್ತಿದ್ದು ಅವ್ಯವಸ್ಥೆಯಾಗಿದೆ. ಸ್ವಚ್ಛತೆ ಕಾಪಾಡಲು ಅಧಿಕಾರಿಗಳು ಒಂದೆಡೆ ನಿರ್ಲಕ್ಷ್ಯ ವಹಿಸಿದರೆ ಮತ್ತೊಂದೆಡೆ ಜನರು ತ್ಯಾಜ್ಯವನ್ನು ಎಲ್ಲಿ ಬೇಕೆಂದಲ್ಲಿ ಎಸೆಯುತ್ತಾರೆ’ ಎಂದು ವಾರ್ಡ್‌ ಸಂಖ್ಯೆ 50ರ ಸದಸ್ಯೆ ಮಂಗಳಮ್ಮ ಮೋಹನ್ ಹಿರೇಮನಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಅಧಿಕಾರಿಗಳನ್ನು ಕೇಳಿದರೆ ಪೌರಕಾರ್ಮಿಕರು ಮತ್ತು ಸಿಬ್ಬಂದಿ ಕೊರತೆ ಇದೆ ಎನ್ನುತ್ತಾರೆ. ವಾರ್ಡ್‌ಗೊಬ್ಬರು ಪಾಲಿಕೆಯ ಜ್ಯೂನಿಯರ್‌ ಎಂಜಿನಿಯರ್‌ (ಜೆಇ) ನೇಮಿಸಬೇಕು ಎಂಬ ನಿಯಮವಿದ್ದರೂ ನಮ್ಮಲ್ಲಿ ನಾಲ್ಕು ವಾರ್ಡ್‌ಗೆ ಒಬ್ಬರು ಜೆಇ ಇದ್ದಾರೆ. ಒಳಚರಂಡಿ ಕಾಮಗಾರಿಗಾಗಿ ₹28 ಲಕ್ಷದ ಮೊತ್ತದ ಟೆಂಡರ್‌ ಅನ್ನು ಮೂರು–ನಾಲ್ಕು ಸಲ ಕರೆಯಲಾಗಿದೆ’ ಎಂದರು.  ‘ಇಲ್ಲಿನ ನಿವಾಸಿಗಳಿಗೆ ಜಾಗದ ಹಕ್ಕುಪತ್ರ ವಿತರಣೆ ಕಾರ್ಯ ವಿಳಂಬವಾಗುತ್ತಿದೆ. ಪಾಳುಬಿದ್ದ ಸಾರ್ವಜನಿಕ ಶೌಚಾಲಯ ಮರು ನಿರ್ಮಾಣಕ್ಕೆ ಯತ್ನಿಸಿದ್ದರೂ ಸದ್ಯಕ್ಕೆ ಕಾಮಗಾರಿ ಅರ್ಧಕ್ಕೆ ನಿಂತಿದೆ’ ಎಂದು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT