ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | ಮತ್ತೊಂದು ಚಿತಾಗಾರ; ₹4ಕೋಟಿ ವೆಚ್ಚ!

ಎರಡು ವರ್ಷವಾದರೂ ಪೂರ್ಣವಾಗದ ಅನಿಲ ಚಿತಾಗಾರ; ತುಕ್ಕು ಹಿಡಿದ ಕಬ್ಬಿಣದ ಸಾಮಗ್ರಿಗಳು
Published 18 ಜೂನ್ 2024, 5:50 IST
Last Updated 18 ಜೂನ್ 2024, 5:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಒಂದು ಅನಿಲ ಚಿತಾಗಾರ ಸೇರಿ ಒಟ್ಟು ಮೂರು ವಿದ್ಯುತ್‌ ಚಿತಾಗಾರಗಳಿವೆ. ಆದರೆ, ಬಳಕೆಯಾಗದೇ ಪಾಳು ಬಿದ್ದಿವೆ.

ಇದರ ಮಧ್ಯೆ ಹುಬ್ಬಳ್ಳಿ–ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಎಸ್‌.ಎಂ. ಕೃಷ್ಣನಗರದಲ್ಲಿ ₹4 ಕೋಟಿ ವೆಚ್ಚದಲ್ಲಿ ಮತ್ತೊಂದು ಆಧುನಿಕ ಚಿತಾಗಾರ ನಿರ್ಮಿಸಲು ಪಾಲಿಕೆ ಉದ್ದೇಶಿಸಿದೆ. ಜೂನ್‌ 19ರಂದು ನಡೆಯುವ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಇದಕ್ಕೆ ಆಡಳಿತಾತ್ಮಕ ಅನುಮೋದನೆ ಸಿಗುವ ಸಾಧ್ಯತೆ ಇದೆ.

‘ಕಾಮಾಗಾರಿಯ ಗುತ್ತಿಗೆ ಪಡೆದ ಕಂಪನಿ/ಗುತ್ತಿಗೆದಾರ ಒಂದು ವರ್ಷದೊಳಗೆ ಯೋಜನೆ ಅನುಷ್ಠಾನಗೊಳಿಸಬೇಕು.  ಒಂದೂವರೆ ವರ್ಷದ ಒಳಗೂ ಅನುಷ್ಠಾನ ಆಗದಿದ್ದರೆ ಮಂಜೂರಾತಿ ರದ್ದಾಗಲಿದೆ’ ಎಂಬ ಸರ್ಕಾರದ ಷರತ್ತಿನ ಅನ್ವಯ ಪಾಲಿಕೆಯು ಅನಿಲ ಚಿತಾಗಾರದ ವಿಸ್ತ್ರದ ಯೋಜನಾ ವರದಿ(ಡಿಪಿಆರ್‌) ಸಿದ್ಧಪಡಿಸಿ ಪೌರಾಡಳಿತಕ್ಕೆ ಸಲ್ಲಿಸಿದೆ.

ಹುಬ್ಬಳ್ಳಿಯ ಮಂಟೂರು ರಸ್ತೆ, ಆನಂದನಗರದ ಸ್ಮಶಾನದಲ್ಲಿ ವಿದ್ಯುತ್‌ ಚಿತಾಗಾರ ಆರಂಭಗೊಂಡು ಎರಡು ವರ್ಷಗಳಾಗಿವೆ. ವಿದ್ಯಾನಗರದಲ್ಲಿ ಅನಿಲ ಚಿತಾಗಾರದ ಕಾಮಗಾರಿ ಎರಡು ವರ್ಷಗಳಿಂದ ನಡೆಯುತ್ತಿದ್ದು, ಇನ್ನೂ ಪೂರ್ಣಗೊಂಡಿಲ್ಲ.ಗ್ಯಾಸ್‌ ಟ್ಯಾಂಕ್‌ ಅಳವಡಿಕೆ ಕಾಮಗಾರಿ ನಿಧಾನಗತಿಯಲ್ಲಿದ್ದು, ಕಬ್ಬಿಣದ ಸಾಮಗ್ರಿಗಳು ತುಕ್ಕು ಹಿಡಿದಿವೆ.

‘ಕಟ್ಟಿಗೆಯಲ್ಲಿ ಶವ ದಹನ ಮಾಡಿದರೆ ಮಾತ್ರ ಪುಣ್ಯಪ್ರಾಪ್ತಿ ಎಂಬ ಮನಸ್ಥಿತಿ ಜನರಲ್ಲಿ ಇದೆ. ಹೀಗಾಗಿ ವಿದ್ಯುತ್‌ ಚಿತಾಗಾರದಲ್ಲಿ ಶವ ದಹನಕ್ಕೆ ಬಹುತೇಕ ಕುಟುಂಬದವರು ಹಿಂಜರಿಯುತ್ತಾರೆ. ಇದರ ಬಗ್ಗೆ ಪಾಲಿಕೆಯು ಜನರಲ್ಲಿ ಜಾಗೃತಿ ಮೂಡಿಸಬೇಕು. ಈಗಿರುವ ವಿದ್ಯುತ್‌, ಅನಿಲ ಚಿತಾಗಾರಗಳನ್ನು ಸರಿಯಾಗಿ ನಿರ್ವಹಿಸಬೇಕು’ ಎಂದು ವಾರ್ಡ್‌ ಸಮಿತಿ ಬಳಗದ ಸಂಚಾಲಕ ಲಿಂಗರಾಜ ಧಾರವಾಡಶೆಟ್ಟರ್‌ ತಿಳಿಸಿದರು.

15 ದಿನಗಳಲ್ಲಿ ಪೂರ್ಣ: ‘ವಿದ್ಯಾನಗರದ ಸ್ಮಶಾನದಲ್ಲಿ ನಿರ್ಮಾಣ ಹಂತದಲ್ಲಿರುವ ಅನಿಲ ಚಿತಾಗಾರದ ಕಾಮಗಾರಿ 15 ದಿನಗಳಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ತಿಳಿಸಿದರು. 

‘ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿ(ಯುಐಡಿಎಫ್‌) ಅಡಿ ತುರ್ತಾಗಿ ಅನಿಲ ಚಿತಾಗಾರ ನಿರ್ಮಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಎಸ್‌.ಎಂ. ಕೃಷ್ಣನಗರದ ಸ್ಮಶಾನ ಆಯ್ಕೆ ಮಾಡಿಕೊಂಡಿದ್ದೇವೆ. ಅಲ್ಲಿಯ ಸುತ್ತಮುತ್ತಲಿನ ಬಹುಸಂಖ್ಯಾತ ಜನ ಶವ ಸಂಸ್ಕಾರಕ್ಕೆ ಕಟ್ಟಿಗೆ ಬಳಸುತ್ತಿದ್ದು, ನಗರದಲ್ಲಿ ಕಟ್ಟಿಗೆ ಕೊರತೆ ಉಂಟಾಗುತ್ತಿದೆ. ಅದಕ್ಕೆ ತಗುಲುವ ವೆಚ್ಚವೂ ಹೆಚ್ಚಾಗುತ್ತಿದೆ. ಕಟ್ಟಿಗೆಯಲ್ಲಿ ಶವ ದಹನ ಮಾಡುವುದರಿಂದ ವಾತಾವರಣದ ಮಲೀನತೆಯೂ ಆಗುತ್ತದೆ. ಈ ಸ್ಮಶಾನದಲ್ಲಿ ಪ್ರತಿದಿನ ಐದರಿಂದ ಎಂಟು ಶವಗಳನ್ನು ದಹಿಸಲಾಗುತ್ತದೆ. ಈ ನಿಟ್ಟಿನಲ್ಲಿ ಸ್ಥಳೀಯ ಶಾಸಕರ ಕೋರಿಕೆ ಮೇರೆಗೆ ಅಲ್ಲಿ ಅನಿಲ ಚಿತಾಗಾರ ನಿರ್ಮಿಸಲು ಯೋಜನೆ ಸಿದ್ಧಪಡಿಸಲಾಗಿದೆ’ ಎಂದು ಹೇಳಿದರು.

‘ನ್ಯಾಷನಲ್‌ ಹೌಸಿಂಗ್‌ ಬ್ಯಾಂಕ್‌ನಿಂದ ₹3.60 ಕೋಟಿ ಸಾಲ ಹಾಗೂ ಪಾಲಿಕೆಯಿಂದ ₹40 ಲಕ್ಷ ವಿನಿಯೋಗಿಸಿ ಆಧುನಿಕ ಸೌಲಭ್ಯಗಳಿರುವ ಚಿತಾಗಾರ ನಿರ್ಮಿಸಲಾಗುವುದು. ಬ್ಯಾಂಕ್‌ನಿಂದ ಪಡೆದ ಸಾಲವನ್ನು ಏಳು ವರ್ಷಗಳ ಅವಧಿಯಲ್ಲಿ ಪಾವತಿಸಬೇಕು. ಪಾಲಿಕೆಯ ಆಡಳಿತಾತ್ಮಕ ಒಪ್ಪಿಗೆ ನಂತರ ಕೇಂದ್ರ ಸರ್ಕಾರದ ಅನುಮೋದನೆ ಪಡೆದು, ಟೆಂಡರ್‌ ಕರೆಯಬೇಕಾಗುತ್ತದೆ. ಕಾಮಗಾರಿಯ ಹಾಗೂ ಚಿತಾಗಾರದ ಬಳಕೆಯ ವರದಿಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪೌರಾಡಳಿತ ನಿರ್ದೇಶನಾಲಯಕ್ಕೆ ಸಲ್ಲಿಸಬೇಕು. ಬಳಕೆದಾರರ ಶುಲ್ಕ, ಕಾರ್ಯಾಚರಣೆ ಮತ್ತು ನಿರ್ವಹಣೆ ವೆಚ್ಚವನ್ನು ಸಹ ನಿಗದಿಪಡಿಸಬೇಕು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT