ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಹಗುರವಾಗಿ ಪರಿಗಣಿಸಬೇಡಿ

Last Updated 12 ಆಗಸ್ಟ್ 2020, 15:12 IST
ಅಕ್ಷರ ಗಾತ್ರ

ಹುಬ್ಬಳ್ಳಿ: ’ಪ್ರಕರಣಗಳ ಸಂಖ್ಯೆ ಹೆಚ್ಚಿದಂತೆಲ್ಲ ಜನ ಕೋವಿಡ್‌ ಅನ್ನು ಹಗುರವಾಗಿ ಪರಿಗಣಿಸುತ್ತಿದ್ದಾರೆ. ಸ್ವಲ್ಪ ನಿರ್ಲಕ್ಷ್ಯಿಸಿದರೂ ಅಪಾಯ ತಪ್ಪಿದ್ದಲ್ಲ. ಧೈರ್ಯದಿಂದ ಸೋಂಕು ಎದುರಿಸಿ, ಬಹಳಷ್ಟು ಜಾಗರೂಕರಾಗಿರಿ...’

ಕೋವಿಡ್‌ನಿಂದ ಗುಣಮುಖರಾಗಿ ಮಂಗಳವಾರ ಪ್ಲಾಸ್ಮಾ ನೀಡಿರುವ ಹೊಸೂರಿನ ಗಜಾನನ ಹಬೀಬ್‌ ಅವರ ಅನುಭವದ ಮಾತುಗಳಿವು.

’ಜುಲೈನಲ್ಲಿ ನನಗೆ ವಿಪರೀತ ಕೆಮ್ಮು, ಕಫವಿತ್ತು, ಕೆಮ್ಮಿದರೆ ದೇಹಪೂರ್ತಿ ನೋವಾಗುತ್ತಿತ್ತು. ನೋವು ತಡೆಯಲಾಗದೆ ಗೋಡೆಗೆ ತಲೆ ಚಚ್ಚಿಕೊಳ್ಳಬೇಕು ಎನ್ನುವಂತಾಗುತ್ತಿತ್ತು. ಆಗ ಎಸ್‌ಡಿಎಂನಲ್ಲಿ ಸೋಂಕು ಪರೀಕ್ಷೆಗೆ ಒಳಗಾದಾಗ ಕೋವಿಡ್‌ ಖಚಿತವಾಗಿತ್ತು. ಕಿಮ್ಸ್‌ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖನಾಗಿದ್ದೇನೆ’ ಎಂದರು.

’ಸೋಂಕಿನ ಲಕ್ಷಣಗಳು ಇಲ್ಲ ಎನ್ನುವ ಕಾರಣಕ್ಕೆ ನಿರ್ಲಕ್ಷ್ಯಿಸಿದ್ದರಿಂದ ಬಹಳಷ್ಟು ಗಂಭೀರ ಸಮಸ್ಯೆ ಎದುರಿಸಿ ಮೃತಪಟ್ಟವರನ್ನು ಆಸ್ಪತ್ರೆಯಲ್ಲಿ ನೋಡಿದ್ದೇನೆ. ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯವಾಗ ನನ್ನ ಬೆಡ್‌ನ ಪಕ್ಕದಲ್ಲಿದ್ದ 45 ವರ್ಷದ ಆಸುಪಾಸಿನ ವ್ಯಕ್ತಿಗಳು ಮೃತಪಟ್ಟರು. ಎಲ್ಲಿಯೇ ಹೋದರೂ ಬಹಳಷ್ಟು ಎಚ್ಚರಿಕೆಯಿಂದ ಇರಬೇಕು. ಸೋಂಕಿನಿಂದ ಚೇತರಿಸಿಕೊಂಡವರು ಪ್ಲಾಸ್ಮಾ ನೀಡಲು ಸ್ವಯಂ ಪ್ರೇರಿತರಾಗಿ ಮುಂದೆ ಬರಬೇಕು. ಕೊರೊನಾ ಕಷ್ಟದ ಕಾಲದಲ್ಲಿಯೂ ದಿಟ್ಟತನದಿಂದ ಕೆಲಸ ಮಾಡುತ್ತಿರುವ ಕಿಮ್ಸ್‌ ಸೇರಿದಂತೆ ಎಲ್ಲ ವೈದ್ಯರು ನನಗೆ ನಿಜವಾದ ದೇವರಂತೆ ಕಂಡರು’ ಎಂದು ಭಾವುಕರಾದರು.

‘ಕೋವಿಡ್‌ನಿಂದ ಗುಣಮುಖನಾಗಿ 16 ದಿನಗಳಾಯಿತು. ತುರ್ತು ಸಂದರ್ಭದಲ್ಲಿ ವ್ಯಕ್ತಿಯೊಬ್ಬರಿಗೆ ಪ್ಲಾಸ್ಮಾ ನೀಡಿದ್ದೇನೆ. ಪ್ಲಾಸ್ಮಾ ನೀಡುವುದರಿಂದ ಯಾವುದೇ ಆರೋಗ್ಯ ಸಮಸ್ಯೆಯಾಗುವುದಿಲ್ಲ. ಇದರಿಂದ 7ರಿಂದ 8 ಜನ ಸೋಂಕಿತರ ಪ್ರಾಣ ಉಳಿಸಬಹುದು. ಸೋಂಕಿತರನ್ನು ಗುಣಮುಖರನ್ನಾಗಿ ಮಾಡಲು ವೈದ್ಯರು ಪಡುತ್ತಿರುವ ಶ್ರಮದ ಮುಂದೆ ನಾವು ಪ್ಲಾಸ್ಮಾ ನೀಡುವುದು ದೊಡ್ಡ ವಿಷಯವೇ ಅಲ್ಲ. ದಯವಿಟ್ಟು ಹಗುರವಾಗಿ ಪರಿಗಣಿಸಬೇಡಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT