ಬುಧವಾರ, ಆಗಸ್ಟ್ 10, 2022
23 °C

‘ರಕ್ತದಾನ ಮಾಡಿ ಜೀವ ಉಳಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಸಂಕಷ್ಟದ ಸಂದರ್ಭದಲ್ಲಿ ರಕ್ತದಾನ ಮಾಡುವುದು ಅತ್ಯಂತ ಶ್ರೇಷ್ಠ ಕಾರ್ಯ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ಸು. ರಾಮಣ್ಣ ಹೇಳಿದರು.

ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ, ನಗರದ ಕೇಶ್ವಾಪುರದ ಎನ್.ಕೆ. ಸಭಾಗೃಹದಲ್ಲಿ ರಾಷ್ಟ್ರೋತ್ಥಾನ ರಕ್ತ ನಿಧಿ ಕೇಂದ್ರ ಹಾಗೂ ‘ಗಿಫ್ಟ್ ಫಾರ್ ಲೈಫ್’ ಸಂಸ್ಥೆ  ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ‘ಯುವಜನರು ಹೆಚ್ಚಾಗಿ ರಕ್ತದಾನ ಮಾಡಬೇಕು. ಜತೆಗೆ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದರು.

‘ಕೋವಿಡ್‌ ವಿರುದ್ಧದ ಹೋರಾಟದಲ್ಲಿ ವೈದ್ಯರು ವಾರಿಯರ್‌ಗಳಾಗಿ ದುಡಿಯುತ್ತಿದ್ದರೆ, ರಕ್ತದಾನಿಗಳು ಸೇವಿಯರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಕೆಲವೆಡೆ ರಕ್ತದ ಕೊರತೆಯಾಗುತ್ತಿದೆ. ಇದನ್ನು ನೀಗಿಸಲು ಎಲ್ಲರೂ ರಕ್ತದಾನ ಮಾಡಿ ಜೀವ ಉಳಿಸುವ ಕಾಯಕದಲ್ಲಿ ಕೈಜೋಡಿಸಬೇಕು’ ಎಂದು ಸಲಹೆ ನೀಡಿದರು.

ಹುಬ್ಬಳ್ಳಿ ಆಯುರ್ವೇದ ಸೇವಾ ಸಮಿತಿ ಅಧ್ಯಕ್ಷ ಗೋವಿಂದ ಜೋಶಿ ಮಾತನಾಡಿ, ‘ರಕ್ತದಾನ ಮಾಡುವುದೆಂದರೆ ವ್ಯಕ್ತಿಯೊಬ್ಬನಿಗೆ ಮರುಜೀವ ಕೊಟ್ಟಂತೆ. ರಕ್ತದಾನ ಮಾಡಿದರೆ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಎಂಬ ಗೊಂದಲ ಹಲವರಲ್ಲಿದೆ. ಆದರೆ, ಆರೋಗ್ಯವಂತರು ರಕ್ತದಾನ ಮಾಡುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಎಂಬುದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕಿದೆ’ ಎಂದರು.

ಶಿಬಿರದಲ್ಲಿ 114 ಮಂದಿ ರಕ್ತದಾನ ಮಾಡಿದರು. ರಾಷ್ಟ್ರೋತ್ಥಾನ ರಕ್ತ ಕೇಂದ್ರದ ದತ್ತಮೂರ್ತಿ ಕುಲಕರ್ಣಿ ಅವರು 56ನೇ ಸಲ ರಕ್ತದಾನ ಮಾಡಿ ಗಮನ ಸೆಳೆದರು.

ಕೇಶ್ವಾಪುರ ಠಾಣೆ ಇನ್‌ಸ್ಪೆಕ್ಟರ್ ಜಗದೀಶ ಹಂಚಿನಾಳ, ಗಿಫ್ಟ್ ಫಾರ್ ಲೈಫ್‌ನ ವಿನೋದಕುಮಾರ್ ಪಟ್ವಾ, ಸಾಮಾಜಿಕ ಕಾರ್ಯಕರ್ತರಾದ ಪ್ರಸಾದ ಶೆಟ್ಟಿ, ಪ್ರಶಾಂತ ಶೆಟ್ಟಿ, ಉದ್ಯಮಿ ಪ್ರಜೇಶ್ ಪಟೇಲ್, ತಿಲಾಲ ಓಸ್ವಾಲ್, ಸಂಜಯ್ ನಾಯಕ, ರವಿ ನಾಯಕ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು