ಗುರುವಾರ , ಮೇ 6, 2021
23 °C
ಎರಡನೇ ಅಲೆ ಆತಂಕ: ಪ್ರೇಕ್ಷಕರ ಸಂಖ್ಯೆಯಲ್ಲಿ ಇಳಿಕೆ; ನಾಟಕ ಕಂಪನಿ ಮಾಲೀಕರು ಹೈರಾಣ

ನಾಟಕ ಕಲಾವಿದರಿಗೆ ಕೋವಿಡ್‌ ಕಂಟಕ

ಗೋವರ್ಧನ ಎಸ್‌.ಎನ್‌. Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕಳೆದ ವರ್ಷ ಕೋವಿಡ್‌ನಿಂದಾಗಿ ನಾಟಕ ಪ್ರದರ್ಶನಗಳು ನಡೆಯದೆ ಕಲಾವಿದರು, ಮಾಲೀಕರು ತೀವ್ರ ಸಂಕಷ್ಟ ಎದುರಿಸಿದ್ದರು. ಇದೀಗ ಕೋವಿಡ್‌ ಎರಡನೇ ಅಲೆ ಮತ್ತೆ ಕಲಾವಿದರ ಬದುಕನ್ನು ತಲ್ಲಣಗೊಳಿಸಿದೆ.

ಕಳೆದ ವರ್ಷ 8 ತಿಂಗಳವರೆಗೆ ನಾಟಕ ಪ್ರದರ್ಶನ ನಡೆಯಲಿಲ್ಲ. ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದ ಕಾರಣ ಪ್ರದರ್ಶನಕ್ಕೆ ಸರ್ಕಾರ ಅವಕಾಶ ನೀಡಿದರೂ, ಪ್ರೇಕ್ಷಕರಿಲ್ಲದೆ ನಷ್ಟ ಅನುಭವಿಸುವಂತಾಯಿತು. ಕ್ರಮೇಣ ನಾಟಕಗಳು ಉತ್ತಮ ಪ್ರದರ್ಶನ ಕಂಡು, ನಿರೀಕ್ಷಿತ ಆದಾಯ ಕಾಣುತ್ತಿರುವಾಗಲೇ ಎರಡನೇ ಅಲೆ ಆಘಾತ ನೀಡಿದೆ. ಕೆಲ ತಿಂಗಳಿಂದ ಹುಬ್ಬಳ್ಳಿಯಲ್ಲಿ ನಾಟಕ ಪ್ರದರ್ಶನ ಸ್ಥಗಿತಗೊಂಡಿದೆ.

‘ಕೆಲವು ತಿಂಗಳಿಂದಷ್ಟೇ ಹೆಚ್ಚು ಪ್ರೇಕ್ಷಕರು ಆಗಮಿಸಿ, ಆದಾಯವೂ ಹೆಚ್ಚುತ್ತಿತ್ತು. ಹುಬ್ಬಳ್ಳಿಯಲ್ಲಿ ನಾಲ್ಕು ತಿಂಗಳು ಪ್ರದರ್ಶನ ನೀಡಿದ್ದೆವು. ಕೋವಿಡ್‌ ಪರಿಷ್ಕೃತ ಮಾರ್ಗಸೂಚಿಯಿಂದಾಗಿ ಚಿತ್ರಮಂದಿರಗಳಂತೆ ನಾಟಕ ಪ್ರದರ್ಶನಗಳಿಗೂ ಶೇ50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬರುತ್ತಿಲ್ಲ’ ಎಂದು ದಾವಣಗೆರೆಯ ಕೆ.ಬಿ.ಆರ್‌ ನಾಟಕ ಕಂಪನಿಯ ಸಂಚಾಲಕ, ಕಲಾವಿದ ಚಿಂದೋಡಿ ವಿಜಯಕುಮಾರ ತಿಳಿಸಿದರು.

‘ನಮ್ಮ ನಾಟಕ ಕಂಪನಿಯಲ್ಲಿ ಕಲಾವಿದರು ಸೇರಿ 50 ಮಂದಿ ಕೆಲಸ ಮಾಡುತ್ತಾರೆ. ಪ್ರತಿದಿನ 2 ಪ್ರದರ್ಶನಗಳು ನಡೆಯುತ್ತಿವೆ. 400 ಆಸನಗಳ ವ್ಯವಸ್ಥೆ ಇದ್ದು, 200 ಪ್ರೇಕ್ಷಕರಿಗಷ್ಟೇ ಅವಕಾಶ ನೀಡಬೇಕಿದೆ. ಅಷ್ಟು ಪ್ರಮಾಣದಲ್ಲೂ ಪ್ರೇಕ್ಷಕರು ಬರುವುದಿಲ್ಲ. ನಿತ್ಯ ನಷ್ಟ ಉಂಟಾಗುತ್ತಿದೆ. ಬಂದ ಹಣದಲ್ಲೇ ಕಲಾವಿದರು ಹಾಗೂ ಸಿಬ್ಬಂದಿಗೆ ವೇತನ ನೀಡಬೇಕಿದೆ. ಎಲ್ಲರೂ ವೃತ್ತಿಪರ ಕಲಾವಿದರಾಗಿರುವುದರಿಂದ ಬೇರೆ ಕೆಲಸ ಗೊತ್ತಿಲ್ಲ. ಒಂದು ವೇಳೆ ಮತ್ತೆ ಲಾಕ್‌ಡೌನ್ ಆದರೆ ನಮ್ಮ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ನಾಟಕ ಪ್ರದರ್ಶನದಿಂದ ಬರುತ್ತಿದ್ದ ಆದಾಯ ಕುಸಿದಿದ್ದು, ನಮ್ಮ ಕಂಪನಿಯಲ್ಲಿರುವ 30 ಕಲಾವಿದರಿಗೆ ವೇತನ ನೀಡುವುದೇ ಕಷ್ಟವಾಗಿದೆ. ಆದಾಯಕ್ಕಿಂತ ಖರ್ಚು ಹೆಚ್ಚಾಗಿ, ಬೇರೆ ಕಡೆಯಿಂದ ಹಣ ಹೊಂದಿಸುತ್ತಿದ್ದೇನೆ. ಲಾಕ್‌ಡೌನ್‌ನಿಂದ ತೊಂದರೆಗೀಡಾದ ಕಲಾವಿದರಿಗೆ ಸರ್ಕಾರದಿಂದ ಸರಿಯಾಗಿ ನೆರವು ಸಿಕ್ಕಿಲ್ಲ. ಬಡ ಕಲಾವಿದರು, ಮಾಲೀಕರು ಬೀದಿಗೆ ಬೀಳುವ ಪರಿಸ್ಥಿತಿಯಲ್ಲಿದ್ದಾರೆ’ ಎಂದು ಹಾವೇರಿಯ ಶ್ರೀ ಸಂತ ಶರೀಫ ಶಿವಯೋಗಿ ನಾಟ್ಯ ಸಂಘದ ಖತಾಲ್ ಸಾಬ್ ರಾಜಾ ಸಾಬ್‌ ಬಣಕಾರ ಅಲವತ್ತುಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು