ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿನ ಸಮಸ್ಯೆಗೆ ಸಿಗದ ಮುಕ್ತಿ; ರೊಚ್ಚಿಗೆದ್ದ ಹುಬ್ಬಳ್ಳಿ–ಧಾರವಾಡ ಜನ

Last Updated 21 ಡಿಸೆಂಬರ್ 2022, 5:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಹುಬ್ಬಳ್ಳಿಯಲ್ಲಿ ಎಲ್ಲಾ ಇದ್ದರೂ, ಬದುಕಿನ ಜೀವದ್ರವ್ಯವಾದ ನೀರಿಲ್ಲ. ಅದಕ್ಕಾಗಿ ಜಾಗರಣೆ ಮಾಡ
ಬೇಕಾದ, ಕೆಲಸ–ಕಾರ್ಯ ಎಲ್ಲವನ್ನೂ ಬಿಟ್ಟು ಮನೆಯಲ್ಲಿ ಕಾಯಬೇಕಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ದೈನಂದಿನ ಜೀವನವೇ ಅಸ್ತವ್ಯಸ್ಥವಾಗಿದೆ.ನೀರಿಗಾಗಿ ಮನೆ ಬಿಡಬೇಕಾದ ಸ್ಥಿತಿ ಬಂದೈತ್ರಿ. ಇಂತಹ ಸ್ಥಿತಿ ಯಾರಿಗೂ ಬಾರದಿರಲಿ...’

- ತಮ್ಮ ಓಣಿಗೆ ಎಂಟು ದಿನಗಳಾದರೂ ನೀರು ಪೂರೈಕೆಯಾಗದಿರುವುದರಿಂದ ಬೇಸತ್ತಿರುವ ವಿದ್ಯಾನಗರದ ತಿಮ್ಮಸಾಗರ ಕಾಲೊನಿ ನಿವಾಸಿ ಸಾವಿತ್ರಿ ವಿ. ನಾಯಕ್ ಅವರ ಹತಾಶೆಯ ನುಡಿಗಳಿವು. ನೀರಿಲ್ಲದೆ ಅನುಭವಿಸುತ್ತಿರುವ ಸಂಕಷ್ಟದ ಸ್ಥಿತಿ ಕುರಿತು ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿರುವ ಕಾಲೊನಿ ನಿವಾಸಿಗಳು, ನಾವು ಬೀದಿಗಳಿಯುವುದಕ್ಕೆ ಮುಂಚೆಯೇ ನೀರು ಪೂರೈಸಿ ಎಂದು ಎಚ್ಚರಿಕೆ ಕೂಡ ನೀಡಿದ್ದಾರೆ.

ನೀರು ಪೂರೈಕೆ, 24X7 ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನ ಮತ್ತು ನಿರ್ವಹಣೆ ಹೊಣೆಯು ಎಂಟು ತಿಂಗಳ ಹಿಂದೆ ಜಲಮಂಡಳಿಯಿಂದ, ಖಾಸಗಿ ಎಲ್‌ ಆ್ಯಂಡ್ ಟಿ ಕಂಪನಿಗೆ ಹಸ್ತಾಂತರವಾದಾಗ ಅವಳಿನಗರದಲ್ಲಿ ಉದ್ಭವಿಸಿದ ನೀರಿನ ಸಮಸ್ಯೆ, ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಇದೆ. ಹಳಿ ತಪ್ಪಿರುವ ನೀರು ಪೂರೈಕೆಯ ಜಾಲವನ್ನು ತಹಬದಿಗೆ ತರುವ ಪ್ರಯತ್ನಗಳು ನಿರೀಕ್ಷಿತ ಪ್ರಮಾಣದಲ್ಲಿ ಫಲ ಕೊಡದಿರುವುದು ಪಾಲಿಕೆಗೆ ತಲೆನೋವಾಗಿ ಪರಿಣಮಿಸಿದೆ.

‘ಮನೆಯಲ್ಲಿ ಏನಿಲ್ಲದಿದ್ದರೂ ಅಡ್ಜೆಸ್ಟ್ ಮಾಡಿಕೊಂಡು ಹೋಗಬಹುದು. ನೀರಿಲ್ಲದಿದ್ದರೆ ಹೇಗೆ? ಅದೂ 10–12 ದಿನ ನೀರಿಲ್ಲದ ಬದುಕನ್ನು ಊಹಿಸಿಕೊಳ್ಳುವುದು ಕಷ್ಟ. ತಿಂಗಳ ಸಂಪಾದನೆಯಲ್ಲಿ ಬದುಕುವವರೇ ಇಷ್ಟು ಸಂಕಷ್ಟದಲ್ಲಿರುವಾಗ, ಕೂಲಿ ಮಾಡಿ ಬದುಕುವವರ ಪಾಡು ಇನ್ನೆಷ್ಟು ಘೋರವಾಗಿರಬೇಕು. ನೀರಿನ ಸಮಸ್ಯೆ ಈ ಮಟ್ಟಕ್ಕೆ ಬಂದಿದೆ ಎಂದರೆ, ಅದಕ್ಕೆ ನಮ್ಮ ಜನಪ್ರತಿನಿಧಿಗಳು ಹಾಗೂ ಆಡಳಿತ ವ್ಯವಸ್ಥೆಯ ವೈಫಲ್ಯವೇ ಕಾರಣ’ ಎಂದು ನವನಗರದ ಪ್ರದೀಪ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ಬೀದಿಗಿಳಿದ ಜನ: 24X7 ನೀರಿನ ವ್ಯಾಪ್ತಿ ಹೊರತುಪಡಿಸಿದ ಎಲ್ಲಾ ಪ್ರದೇಶಗಳಲ್ಲಿ ನೀರಿನ ಹಾಹಾಕಾರ ಎದ್ದಿದ್ದು, ಜನ ವ್ಯವಸ್ಥೆ ವಿರುದ್ದ ಭ್ರಮನಿರಸನಗೊಂಡು ಬೀದಿಗಿಳಿದಿದ್ದಾರೆ. ಅವಳಿನಗರದಲ್ಲಿ ವಾರದಲ್ಲಿ ನಾಲ್ಕೈದು ಕಡೆ ನೀರಿಗಾಗಿ ಜನ ಖಾಲಿ ಕೊಡಗಳೊಂದಿಗೆ ರಸ್ತೆಗಿಳಿಯುವುದು ಸಾಮಾನ್ಯವಾಗಿದೆ. ನೀರು ಕೇಳುತ್ತಿರುವ ಜನರಿಗೆ ಉತ್ತರಿಸಲಾಗದೆ, ಮುಖ ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ಪಾಲಿಕೆ ಸದಸ್ಯರಿಗೆ ಬಂದಿದೆ.

ನೀರು ಪೂರೈಕೆಯಲ್ಲಾಗಿರುವ ವ್ಯತ್ಯಯ ಸರಿಪಡಿಸಲು ಎಲ್‌ ಆ್ಯಂಡ್ ಟಿ ಕಂಪನಿ ಜೊತೆ ಸ್ಥಳೀಯವಾಗಷ್ಟೇ ಅಲ್ಲದೆ, ಬೆಂಗಳೂರಿನಲ್ಲಿ ಸಚಿವರು ಹಾಗೂ ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಸಭೆ ನಡೆದಿದೆ. ವಾರದ ಹಿಂದೆ ಕಂಪನಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಮೇಯರ್ ಮತ್ತು ಆಯುಕ್ತರು, ವಲಯ ಸಹಾಯಕ ಆಯುಕ್ತರನ್ನೇ ನೀರು ಪೂರೈಕೆಗೆ ಸಂಬಂಧಿಸಿದ ನೋಡಲ್ ಅಧಿಕಾರಿಗಳನ್ನಾಗಿ ಮಾಡಿದರು. ಆದರೂ ಪರಿಸ್ಥಿತಿ ಸುಧಾರಿಸಿಲ್ಲ.

‘ವಾರದೊಳಗೆ ಸಮಸ್ಯೆ ಇತ್ಯರ್ಥ’
‘ಅವಳಿನಗರದಲ್ಲಿ ಬಿಗಡಾಯಿಸಿರುವ ನೀರಿನ ಪೂರೈಕೆಯಲ್ಲಾಗಿರುವ ಸಮಸ್ಯೆಯ ಪರಿಹಾರಕ್ಕೆ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ವಾರಕ್ಕಿಂತ ಹೆಚ್ಚು ದಿನ ನೀರು ಬಾರದ ಕಡೆಗೆ, ಟ್ಯಾಂಕರ್‌ ನೀರು ಕಳಿಸಲಾಗುತ್ತಿದೆ. ಬಹುತೇಕ ಕೊಳವೆ ಬಾವಿಗಳನ್ನು ದುರಸ್ತಿಗೊಳಿಸಿದ್ದೇವೆ. ನೀರು ಪೂರೈಕೆಯ ಮೇಲ್ವಿಚಾರಣೆಗಾಗಿ ವಲಯ ಸಹಾಯಕ ಆಯುಕ್ತರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಅಗತ್ಯ ಸಿಬ್ಬಂದಿ ನೇಮಕ ಮಾಡಿಕೊಂಡು ಕಾರ್ಯಾಚರಣೆ ಮಾಡುವಂತೆ ಎಲ್‌ ಆ್ಯಂಡ್ ಟಿ ಕಂಪನಿಗೂ ಸೂಚನೆ ನೀಡಲಾಗಿದೆ. ವಾರದೊಳಗೆ ಸಮಸ್ಯೆ ತಹಬದಿಗೆ ಬರಲಿದೆ’ ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ‘ಪ್ರಜಾವಾಣಿ’ಗೆ ತಿಳಿಸಿದರು.

*
ನೀರಿಲ್ಲದೆ ಅಸಹಾಯಕ ಸ್ಥಿತಿ ತಲುಪಿದ್ದೇವೆ. ಮಹಾನಗರ ಪಾಲಿಕೆ, ಎಲ್‌ ಆ್ಯಂಡ್ ಟಿ ಕಂಪನಿಯವರು ಏನಾದರೂ ಮಾಡಿ, ಮೂರು ದಿನಕ್ಕೊಮ್ಮೆ ನೀರು ಕೊಡಬೇಕು.

-ಸಾವಿತ್ರಿ ವಿ. ನಾಯಕ್, ತಿಮ್ಮಸಾಗರ ಕಾಲೊನಿ

*
ಜನರಿಗೆ ನೀರು ಕೊಡುವುದು ಪಾಲಿಕೆಯ ಕರ್ತವ್ಯ. ಆದಷ್ಟು ಬೇಗ ಸಮಸ್ಯೆ ಪರಿಹರಿಸದಿದ್ದರೆ, ಪಾಲಿಕೆ ವಿರುದ್ದ ಬೃಹತ್ ಜನಾಂದೋಲನ ರೂಪಿಸಲಾಗುವುದು.
-ಗಂಗಾಧರ ದೊಡ್ಡವಾಡ, ಉಣಕಲ್ಲ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT