ಗುರುವಾರ , ಏಪ್ರಿಲ್ 22, 2021
22 °C
ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಾಹಕಾಧಿಕಾರಿ ಡಾ. ಬಿ.ಸಿ. ಸತೀಶ

ಪ್ರತಿ ಪಂಚಾಯ್ತಿಯಲ್ಲಿ 500 ಸಸಿ ನೆಡುವ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಜಿಲ್ಲೆಯ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ತಲಾ 500 ಸಸಿಗಳನ್ನು ನೆಡಲಾಗುವುದು. ಶಾಲಾ–ಕಾಲೇಜು ಹಾಗೂ ಸರ್ಕಾರಿ ಕಚೇರಿಗಳ ಆವರಣಗಳಲ್ಲಿ ಗಿಡ ನೆಟ್ಟು ಪೋಷಿಸಲಾಗುವುದು’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಬಿ.ಸಿ. ಸತೀಶ ಹೇಳಿದರು.

ತಾಲ್ಲೂಕಿನ ಅಂಚಟಗೇರಿ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಹಮ್ಮಿಕೊಂಡಿದ್ದ ‘ಸ್ವಚ್ಛಮೇವ ಜಯತೆ –2019’ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಸ್ವಚ್ಛತಾ ಕಾರ್ಯಕ್ರಮಗಳು ಕೇವಲ ನಗರ ಮತ್ತು ಪಟ್ಟಣಗಳಿಗಷ್ಟೇ ಸೀಮಿತವಾಗಬಾರದು. ಗ್ರಾಮ ಮಟ್ಟದಲ್ಲೂ ನಡೆಯಬೇಕು ಎಂಬುದು ಈ ಆಂದೋಲನದ ಉದ್ದೇಶ’ ಎಂದರು.

‘ಸದ್ಯ 25 ಗ್ರಾಮ ಪಂಚಾಯ್ತಿಗಳಲ್ಲಿ ಆಂದೋಲನ ಹಮ್ಮಿಕೊಳ್ಳಲಾಗಿದ್ದು, ಮುಂದೆ ಉಳಿದ ಪಂಚಾಯ್ತಿಗಳಿಗೂ ವಿಸ್ತರಿಸಲಾಗುವುದು. ಗ್ರಾಮ ಮಟ್ಟದಲ್ಲಿ ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಬಳಕೆ ವಿರುದ್ಧ ಜಾಗೃತಿ ಮೂಡಿಸಲಾಗುವುದು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಚೆಕ್ ಡ್ಯಾಂ ಮತ್ತು ಕೃಷಿ ಹೊಂಡಗಳನ್ನು ನಿರ್ಮಿಸುವ ಮೂಲಕ, ಅಂತರ್ಜಲ ವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ರಸ್ತೆ ಬದಿ ಸೇರಿದಂತೆ ಬಯಲು ಪ್ರದೇಶಗಳನ್ನು ಹಸಿರುಮಯಗೊಳಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವಿಜಯಲಕ್ಷ್ಮಿ ಪಾಟೀಲ ಮಾತನಾಡಿ, ‘ಸ್ವಚ್ಛತೆ ಬಗ್ಗೆ ಶಾಲಾ ಹಂತದಲ್ಲೇ ಮಕ್ಕಳಿಗೆ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.

ಜಿ.ಪಂ. ಉಪಾಧ್ಯಕ್ಷ ಶಿವಾನಂದ ಕರಿಗಾರ, ‘ಪರಿಸರ ರಕ್ಷಣೆಗೆ ಸರ್ಕಾರ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಜತೆಗೆ, ಜನರೂ ಸ್ವಯಂಪ್ರೇರಿತರಾಗಿ ಸಸಿಗಳನ್ನು ನೆಟ್ಟು ಪೋಷಿಸಬೇಕು’ ಎಂದು ಹೇಳಿದರು.

150 ಸಸಿ ನೆಟ್ಟರು:

ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ವಿವಿಧೆಡೆ ಜಿ.ಪಂ ಸಿಇಒ ಡಾ.ಬಿ.ಸಿ. ಸತೀಶ್ ಹಾಗೂ ಗಣ್ಯರು 150 ಸಸಿಗಳನ್ನು ನೆಟ್ಟರು.

ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ ಅಧ್ಯಕ್ಷತೆ ವಹಿಸಿದ್ದರು. ಹುಬ್ಬಳ್ಳಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಚನ್ನಮ್ಮ ಗೊರ್ಲ, ಉಪಾಧ್ಯಕ್ಷ ಗುರುಪಾದಪ್ಪ ಬಸಪ್ಪ ಕಮಡೊಳ್ಳಿ, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಎ.ಎಂ. ಪಾಟೀಲ, ಯೋಜನಾ ನಿರ್ದೇಶಕ ಗಿರೀಶ ಕೋರೆ, ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗಜಾನನ ಮನ್ನಿಕೇರಿ, ಜಿಲ್ಲಾ ಪಚಾಯ್ತಿ ಸದಸ್ಯ ಸುರೇಶಗೌಡ ಪಾಟೀಲ ತಾ.ಪಂ. ಮಾಜಿ ಅಧ್ಯಕ್ಷ ರುದ್ರಪ್ಪ ಬಿಡ್ನಾಳ ಹಾಗೂ ಗ್ರಾ.ಪಂ. ಉಪಾಧ್ಯಕ್ಷೆ ನೀಲವ್ವ ಗಾಣಿಗೇರ ಇದ್ದರು.

ಗಮನ ಸೆಳೆದ ಮೆರವಣಿಗೆ

ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಬಿ.ಸಿ. ಸತೀಶ್ ಹಾಗೂ ಇತರ ಗಣ್ಯರನ್ನು ಕಾರ್ಯಕ್ರಮದ ಸ್ಥಳವಾದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಚಕ್ಕಡಿಯಲ್ಲಿ ಸಕಲ ವಾದ್ಯದೊಂದಿಗೆ ಮೆರವಣಿಗೆಯಲ್ಲಿ ಕರೆ ತರಲಾಯಿತು. ಅವರೊಂದಿಗೆ ವಿದ್ಯಾರ್ಥಿಗಳು ಪರಿಸರ ಜಾಗೃತಿ ಘೋಷಣೆಯೊಂದಿಗೆ ಹೆಜ್ಜೆ ಹಾಕಿದರು. ಪರಿಸರ ರಕ್ಷಣೆಯ ಭಿತ್ತಿಪತ್ರಗಳಿಂದ ತುಂಬಿದ್ದ ಚಕ್ಕಡಿಗಳು ಗಮನ ಸೆಳೆದವು.

ದಾರಿಯಲ್ಲಿ ಮಕ್ಕಳು ಗುಲಾಬಿ ಹಿಡಿದು ಗಣ್ಯರನ್ನು ಸ್ವಾಗತಿಸಿದರು. ಊರಿನ ಹಿರಿಯರು, ಸ್ವಸಹಾಯ ಸಂಘಗಳ ಮಹಿಳೆಯರು, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು