ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕರ್ನಾಟಕಕ್ಕೆ ಅಸ್ಸಾಂ ಕೈಗಾರಿಕೆಗಳನ್ನು ತರುವ ಪ್ರಯತ್ನ: ಜಗದೀಶ ಶೆಟ್ಟರ್

ಟೈ ಉದ್ಯಮ ಸಮ್ಮೇಳನ
Last Updated 1 ಫೆಬ್ರುವರಿ 2020, 11:03 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅಸ್ಸಾಂನಲ್ಲಿರುವ ಕೈಗಾರಿಕೆಗಳನ್ನು ಉತ್ತರ ಕರ್ನಾಟಕಕ್ಕೆ ತರುವ ಪ್ರಯತ್ನ ನಡೆದಿದೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ನಗರದಲ್ಲಿ ಶನಿವಾರ ನಡೆದ ಟೈ ಉದ್ಯಮ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಈ ಹಿಂದೆ ಅಸ್ಸಾಂ ಸರ್ಕಾರ ಕೈಗಾರಿಕೆಗಳಿಗೆ ಶೂನ್ಯ ತೆರಿಗೆ ದರ ಘೋಷಿಸಿದ ಪರಿಣಾಮ ನೂರಾರು ಕೈಗಾರಿಕೆಗಳು ಆರಂಭವಾಗಿದ್ದವು. ಆದರೆ ವಿನಾಯಿತಿ ಅವಧಿ ಮುಗಿಯುತ್ತಿದ್ದು, ಅಲ್ಲಿನ ಕೈಗಾರಿಕೆಗಳನ್ನು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ತರಲು ಪ್ರಯತ್ನಿಸಲಾಗುತ್ತಿದೆ. ಫೆಬ್ರುವರಿ 4ರಂದು ಗುವಾಹಟಿಗೆ ತೆರಳಿ ಅಲ್ಲಿನ ಕೈಗಾರಿಕೋದ್ಯಮಿಗಳೊಂದಿಗೆ ಮಾತುಕತೆ ನಡೆಸಲಾಗುತ್ತದೆ. ಗರಿಷ್ಠ ವಿನಾಯಿತಿಯ ಭರವಸೆ ನೀಡಲಾಗುತ್ತದೆ ಎಂದರು.

ಬೆಂಗಳೂರು ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿರುವ ಕೈಗಾರಿಕೆಗಳನ್ನು, ಎರಡನೇ ಹಂತದ ನಗರಗಳಿಗೆ ತರುವುದಕ್ಕೆ ಆದ್ಯತೆ ನೀಡಲಾಗಿದೆ. ದೊಡ್ಡ ಕೈಗಾರಿಕೆಗಳನ್ನು ತರುವ ಪ್ರಯತ್ನ ನಡೆದಿದೆ. ಫೆಬ್ರುವರಿ 14ರಂದು ಹುಬ್ಬಳ್ಳಿಯಲ್ಲಿ ಇನ್ವೆಸ್ಟ್‌ ಕರ್ನಾಟಕ ಕಾರ್ಯಕ್ರಮ ಆಯೋಜಿಸಲಾಗಿದೆ. ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಗೆ ಕೈಗಾರಿಕೆಗಳು ಬರಬೇಕು, ಇಲ್ಲಿ ಹೂಡಿಕೆ ಮಾಡಬೇಕು ಎಂಬುದು ಇದರ ಉದ್ದೇಶವಾಗಿದೆ. ಬೀದರ್‌ನಿಂದ ಬೆಂಗಳೂರಿಗೆ ಸಹ ವಿಮಾನ ಸೇವೆ ಸದ್ಯದಲ್ಲೇ ಆರಂಭವಾಗಲಿದೆ ಎಂದರು.

ಕೈಗಾರಿಕೆಗಳು ಬರುವುದಕ್ಕೆ ಇರುವ ಅಡೆತಡೆಗಳನ್ನು ನಿವಾರಿಸಲು ಪ್ರಯತ್ನಿಸಲಾಗುತ್ತಿದೆ. ಮುಖ್ಯಮಂತ್ರಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಭೂ ಮಂಜೂರಾತಿ ಹಾಗೂ ಪರಿವರ್ತನೆಗೆ ಒಪ್ಪಿಗೆ ನೀಡಿದ ನಂತರವೂ ಅದು ಜಾರಿಗೆ ಬರುತ್ತಿರಲಿಲ್ಲ. ಆದೇಶ ನೀಡಿದ 30 ದಿನಗಳ ಒಳಗೆ ಅಧಿಕಾರಿಗಳು ಮಂಜೂರು ಮಾಡಬೇಕು. ಇಲ್ಲವಾದರೆ ಒಪ್ಪಿಗೆ ಎಂದು ಪರಿಭಾವಿಸುವಂತೆ ನಿಯಮಕ್ಕೆ ತಿದ್ದುಪಡಿ ಮಾಡಲಾಗಿದೆ ಎಂದು ತಿಳಿಸಿದರು.

ಮಹಿಳಾ ಕೈಗಾರಿಕೋದ್ಯಮಿಗಳಿಗೆ ಹೆಚ್ಚಿನ ಅವಕಾಶ ನೀಡಲು ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ 25 ಎಕರೆ ಜಮೀನು ಮೀಸಲಿಡಲಾಗಿದೆ. ಈಗಾಗಲೇ 300ಕ್ಕಿಂತ ಅಧಿಕ ಅರ್ಜಿಗಳು ಬಂದಿವೆ. ಜಮೀನು ಪಡೆಯುವುದೇ ಉದ್ದೇಶವಾಗಬಾರದು. ಕೈಗಾರಿಕೆ ಆರಂಭಿಸಬೇಕು ಎಂದು ಅವರು ಹೇಳಿದರು.

ಶಾಸಕ ಅರವಿಂದ ಬೆಲ್ಲದ, ವಿಧಾನಪರಿಷತ್ ಸದಸ್ಯ ಎಸ್‌.ವಿ. ಸಂಕನೂರ, ಟೈ ಸಂಸ್ಥೆ ಅಧ್ಯಕ್ಷ ಶಶಿಧರ ಶೆಟ್ಟರ್, ಸಂಚಾಲಕರಾದ ಶ್ರಾವಣಿ ಪವಾರ್, ವಿಜೇಶ್ ಸೆಹಗಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT