ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರದಿಂದ ಸಾಹಿತ್ಯ ಪರಿಷತ್ ಮುಕ್ತಗೊಳಿಸಲು ಒತ್ತು: ಮುಲಾಲಿ

Last Updated 25 ಮಾರ್ಚ್ 2021, 12:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷನಾಗಿ ಆಯ್ಕೆಯಾದರೆ, ಅಲ್ಲಿ ಬೇರು ಬಿಟ್ಟಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಪಾರದರ್ಶಕ ಆಡಳಿತ ನೀಡಲಾಗುವುದು’ ಎಂದು ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ರಾಜಶೇಖರ ಮುಲಾಲಿ ಹೇಳಿದರು.

‘‍ಪರಿಷತ್‌ ಬೈಲಾವನ್ನು ಮನಸೋ ಇಚ್ಛೆ ತಿದ್ದುಪಡಿ ಮಾಡಲಾಗುತ್ತಿದೆ. ಅಧ್ಯಕ್ಷರೇ ತಮ್ಮ ಅವಧಿಯನ್ನು ಹೆಚ್ಚಳ ಮಾಡಿಕೊಂಡಿದ್ದಾರೆ. ಜಡ ಹಿಡಿದಿರುವ ಪರಿಷತ್‌ಗೆ ಹೊಸ ಕಾಯಕಲ್ಪ ನೀಡಬೇಕಾಗಿದೆ. ಅದಕ್ಕಾಗಿ ಪರಿಷತ್‌ ಯುವಜನ ಸೇರಿದಂತೆ, ಎಲ್ಲಾ ಸ್ತರದ ಜನರನ್ನು ಒಳಗೊಳ್ಳಬೇಕಿದೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಎಲ್ಲರನ್ನೂ ಒಳಗೊಳ್ಳುವುದಕ್ಕಾಗಿ ಪರಿಷತ್‌ನಲ್ಲಿ ಮಹಿಳಾ ಘಟಕ, ರೈತ ಹಾಗೂ ವಿದ್ಯಾರ್ಥಿ ಘಟಕಗಳನ್ನು ಆರಂಭಿಸಲಾಗುವುದು. ಸದಸ್ಯರಿಗೆ ಸ್ಮಾರ್ಟ್‌ ಗುರುತಿನ ಚೀಟಿ ವಿತರಣೆ, ಸಮ್ಮೇಳನಕ್ಕೆ ಬರುವ ವಾಹನಗಳಿಗೆ ಟೋಲ್‌ ಕೇಂದ್ರಗಳಲ್ಲಿ ಉಚಿತ ಪ್ರವೇಶ, ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣ ಹಾಗೂ ಕೇಂದ್ರ ಕಚೇರಿಯಲ್ಲಿ ಆಜೀವ ಸದಸ್ಯರಿಗೆ ರಿಫ್ರೇಶ್‌ಮೆಂಟ್ ವ್ಯವಸ್ಥೆ ಮಾಡಲಾಗುವುದು’ ಎಂದರು.

‘ನಿಕಟಪೂರ್ವ ಅಧ್ಯಕ್ಷರು, ಪದಾಧಿಕಾರಿಗಳು, ಹಿರಿಯ ಸದಸ್ಯರನ್ನೊಳಗೊಂಡ ಸಲಹಾ ಸಮಿತಿಯನ್ನು ಕೇಂದ್ರ ಮತ್ತು ಜಿಲ್ಲಾ ಮಟ್ಟದಲ್ಲಿ ರಚಿಸಲಾಗುವುದು. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಳ ಹಾಗೂ ಖಾಸಗಿ ವಲಯದಲ್ಲೂ ಮೀಸಲಾತಿ ನೀಡಲು ಸರ್ಕಾರವನ್ನು ಒತ್ತಾಯಿಸಲಾಗುವುದು’ ಎಂದು ಹೇಳಿದರು.

‘ವಲಯವಾರು ಗೌರವ ಕಾರ್ಯದರ್ಶಿಗಳ ನೇಮಕ, ಕನ್ನಡ ಸಾಹಿತ್ಯ ಪುಸ್ತಕಗಳ ಮುದ್ರಣಕ್ಕೆ ಉತ್ತೇಜನ, ಗಡಿ ಭಾಗಗಳ ಹಾಗೂ ಏಕೀಕರಣಕ್ಕಾಗಿ ಹೋರಾಡಿದವರ ಸ್ಮರಣಾರ್ಥಕವಾಗಿ ಕಿರು ಪುಸ್ತಕಮಾಲೆ ಪ್ರಕಟಿಸಲಾಗುವುದು. ಜಿಲ್ಲಾ ಹಾಗೂ ತಾಲ್ಲೂಕು ಪ್ರವಾಸ ಕೈಗೊಂಡು ಪರಿಷತ್‌ನ ಅಭಿವೃದ್ಧಿಗೆ ಶ್ರಮಿಸುವೆ. ವೈಯಕ್ತಿಕ ಪ್ರವಾಸಕ್ಕೆ ಪರಿಷತ್ತಿನ ಹಣ ಹಾಗೂ ವಾಹನವನ್ನು ಬಳಸುವುದಿಲ್ಲ’ ಎಂದು ತಿಳಿಸಿದರು.

ಮೋಹನ ಪಾಟೀಲ, ಡಾ. ರವಿಕುಮಾರ, ಶಿವನಗೌಡ ಪಾಟೀಲ, ದುರುಗೇಶ ಉಪ್ಪಾರ ಹಾಗೂ ತರುಣಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT