ಮಂಗಳವಾರ, ಜನವರಿ 21, 2020
22 °C
ಬಾಲ್ಯದಲ್ಲಿಯೇ ನ್ಯಾಯಕ್ಕಾಗಿ ಹೋರಾಡುತ್ತಿದ್ದ

ಬಾಲ್ಯದಲ್ಲೇ ತಾಯಿ ಕಳೆದುಕೊಂಡಿದ್ದ ತೆಲಂಗಾಣ ಎನ್‌ಕೌಂಟರ್ ಸ್ಪೆಷಲಿಸ್ಟ್ ವಿಶ್ವನಾಥ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಹುಬ್ಬಳ್ಳಿ: ಹೈದರಾಬಾದ್‌ನ ಪಶುವೈದ್ಯೆಯನ್ನು ಅತ್ಯಾಚಾರ ಮಾಡಿ, ಕೊಲೆಗೈದ ಆರೋಪಿಗಳನ್ನು ಶುಕ್ರವಾರ ನಸುಕಿನಲ್ಲಿ ಎನ್‌ಕೌಂಟರ್‌ ಮಾಡಿದ ಸೈಬರಾಬಾದ್‌ ಪೊಲೀಸ್‌ ಕಮಿಷನರ್‌ ವಿಶ್ವನಾಥ ಸಜ್ಜನರ್‌ ಕನ್ನಡಿಗರು.

ಹುಬ್ಬಳ್ಳಿಯ ಸೂರ್ಯನಗರದ ಅವರ ನಿವಾಸದಲ್ಲಿ ಶುಕ್ರವಾರ ಬೆಳಿಗ್ಗೆ ಸಂಭ್ರಮ ಮನೆ ಮಾಡಿದೆ. ಅವರ ಸಹೋದರ ಡಾ. ಮಲ್ಲಿಕಾರ್ಜುನ ಸಜ್ಜನರ್‌ ಅವರಿಗೆ ಅಭಿನಂದನೆಯ ಸುರಿಮಳೆಗಳೇ ಹರಿದು ಬರುತ್ತಿವೆ. ಸ್ನೇಹಿತರು, ವೈದ್ಯರು, ಸಂಬಂಧಿಗಳು ಹಾಗೂ ಅಕ್ಕಪಕ್ಕದ ನಿವಾಸಿಗಳು ಮನೆಗೆ ಬಂದು, ವಿಶ್ವನಾಥ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಡಾ. ಮಲ್ಲಿಕಾರ್ಜುನ, ‘ಬಾಲ್ಯದಿಂದಲೂ ತಮ್ಮ ಸಾಮಾಜಿಕ ಕಾರ್ಯಚಟುವಟಿಕೆಗಳ ಬಗ್ಗೆ ವಿಶೇಷ ಆಸಕ್ತಿ ವಹಿಸುತ್ತಿದ್ದ. ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಹೋರಾಡುತ್ತಲೇ ಇದ್ದ. ಕಾಲೇಜಿನಲ್ಲಿ ವಿದ್ಯಾರ್ಥಿ ನಾಯಕನಾಗಿ ಕೆಲವು ಪ್ರತಿಭಟನೆಯ ಮುಂಚೂಣಿ ವಹಿಸಿದ್ದ. ನನ್ನ ಸಹೋದರ ದೇಶಕ್ಕೆ ಮಾದರಿಯಾಗುವಂತಹ ಕೆಲಸ ಮಾಡಿದ್ದು, ಹೆಮ್ಮೆಯ ಸಂಗತಿ’ ಎಂದರು.

‘ಪಶುವೈದ್ಯೆಯನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಿರುವ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ದೇಶದ ಜನತೆಗೆ ನ್ಯಾಯ ಸಿಕ್ಕಿದೆ’ ಎಂದು ಅಭಿಪ್ರಾಯಪಟ್ಟರು.

‘ವಿಶ್ವನಾಥ ಸಜ್ಜನರ್‌ ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡಿದ್ದರು. ಚಿಕ್ಕಮ್ಮ ಮಲ್ಲಮ್ಮ ಸಜ್ಜನರ್‌ ಅವರ ಮಡಿಲಲ್ಲಿ ಬೆಳೆದ ಅವರು, ಶಿಸ್ತುಬದ್ಧ ಜೀವನ, ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡಿದ್ದರು. ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಂಡಾಗಲೂ ಅವರಿಗೆ ಮನೆಯಿಂದ ತುಂಬು ಸಹಕಾರ ದೊರಕಿತ್ತು. ಕನ್ನಡ ನಾಡು ಮೆಚ್ಚುವ ಕೆಲಸ ಮಾಡಿ, ದೇಶದ ಹೆಮ್ಮೆಯ ಮಗನಾಗುತ್ತೇನೆ ಎಂದು ಹೇಳುತ್ತಿದ್ದರು’ ಎಂದು ಅಕ್ಕಪಕ್ಕದ ನಿವಾಸಿಗಳು ಹೆಮ್ಮೆಯಿಂದ ಹೇಳುತ್ತಾರೆ.

ವಿದ್ಯಾಭ್ಯಾಸ, ಕರ್ತವ್ಯ: ವಿಶ್ವನಾಥ ಸಜ್ಜನರ್‌ ಅವರು ಹುಬ್ಬಳ್ಳಿ ವಿಜಯನಗರದ ಲಯನ್ಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪೂರೈಸಿದ್ದಾರೆ. ವಿದ್ಯಾನಗರದ ಜೆಜಿ ಕಾಮರ್ಸ್‌ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಕರ್ನಾಟಕ ವಿಶ್ವವಿದ್ಯಾಲಯದ ಕೌಸಾಳೆ ಇನ್‌ಸ್ಟಿಟ್ಯೂಟ್‌ನಲ್ಲಿ ಎಂಬಿಎ ಪದವಿ ಪಡೆದಿದ್ದರು. ನಂತರ 1996ರಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಪುಲಿವಂದಲಾದಲ್ಲಿ ಡಿವೈಎಸ್‌ಪಿ ಆಗಿ ವೃತ್ತಿ ಜೀವನ ಆರಂಭಿಸಿದ್ದರು. 2008 ಮಾರ್ಚ್‌ನಲ್ಲಿ ಸೈದರಾಬಾದ್‌ನ ಪೊಲೀಸ್‌ ಕಮಿಷನರ್‌ ಆಗಿ ಅಧಿಕಾರವಹಿಸಿಕೊಂಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು