ಮಂಗಳವಾರ, ಏಪ್ರಿಲ್ 13, 2021
22 °C
ಪ್ರತಿ ವರ್ಷದಷ್ಟು ಕಾಣದ ಸಂಭ್ರಮ ‘ಮಳೆಯ ನೃತ್ಯ’ಕ್ಕೆ, ಜನಸಂದಣಿಗೆ ಕಡಿವಾಣ

ಕೋವಿಡ್‌ ಭೀತಿ: ‘ರಂಗಾ’ಗದ ಪಂಚಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕೋವಿಡ್‌ ಸೋಂಕು ಹರಡುವ ಭೀತಿಯ ಕಾರಣ ನಗರದ ಕೆಲ ಪ್ರದೇಶಗಳಲ್ಲಿ ನಿಷೇಧಾಜ್ಞೆ ಹೇರಲಾಗಿತ್ತು. ಇದರ ನಡುವೆಯೂ ಜನ ಗುರುವಾರ ರಂಗಪಂಚಮಿ ಆಚರಿಸಿ ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮ ಪಟ್ಟರು.

ವಾಣಿಜ್ಯ ನಗರಿಯ ರಂಗಪಂಚಮಿಯೆಂದರೆ ಅದಕ್ಕೆ ವಿಶೇಷ ಸ್ಥಾನವಿದೆ. ಪ್ರತಿ ವರ್ಷ ನಗರದ ಪ್ರಮುಖ ಪ್ರದೇಶಗಳಲ್ಲಿ ‘ಮಳೆಯ ನೃತ್ಯ’ದ ಕೃತಕ ವ್ಯವಸ್ಥೆ ಮಾಡಲಾಗುತ್ತಿತ್ತು. ಪೆಂಡಾರಗಲ್ಲಿ, ನ್ಯೂ ಮೇದಾರ ಓಣಿ, ಮರಾಠ ಗಲ್ಲಿ, ಕಮರಿಪೇಟೆ, ದೇಶಪಾಂಡೆ ನಗರ, ನವನಗರ ಸೇರಿದಂತೆ ಹಲವೆಡೆ ‘ಮಳೆಯ ನೃತ್ಯಕ್ಕೆ’ ಸಾವಿರಾರು ಜನ ಯುವಕ, ಯುವತಿಯರು ಹುಚ್ಚೆದ್ದು ಕುಣಿದು ಸಂಭ್ರಮಿಸುತ್ತಿದ್ದರು. ಡಿ.ಜೆ. ಶಬ್ದ ಅಬ್ಬರಿಸುತ್ತಿತ್ತು. ಆದರೆ, ಈ ವರ್ಷ ಯುವಜನತೆ ಬಹಳಷ್ಟು ಕಡೆ ಹೋಳಿ ಆಡಿದರೂ ಒಂದೇ ಕಡೆ ಹೆಚ್ಚು ಗುಂಪುಗೂಡಿದ್ದು ಕಂಡುಬರಲಿಲ್ಲ. ಇದಕ್ಕೆ ಪೊಲೀಸರೂ ಅವಕಾಶ ಕೊಡಲಿಲ್ಲ.ಹುಬ್ಬಳ್ಳಿಯ ಬಳಿ ಗುರುವಾರ ಹೋಳಿ ಹಬ್ಬದ ಅಂಗವಾಗಿ ಯುವಕರು ಪರಸ್ಪರ ಬಣ್ಣ ಹಚ್ಚಿ ಹೋಳಿ ಹಬ್ಬವನ್ನು ಸಂಭ್ರಮಿಸಿದರು –ಪ್ರಜಾವಾಣಿ ಚಿತ್ರ/ತಾಜುದ್ಧೀನ್‌ ಆಜಾದ್‌

ವಿದ್ಯಾನಗರ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ದೇಶಪಾಂಡೆ ನಗರ, ಸಿಬಿಟಿ, ಕೇಶ್ವಾಪುರ, ಗೋಕುಲ ರಸ್ತೆ, ಬೈರಿದೇವರಕೊಪ್ಪ, ನವನಗರ ಹಾಗೂ ಹಳೇ ಹುಬ್ಬಳ್ಳಿ ಸೇರಿದಂತೆ ನಗರದ ಬಹುತೇಕ ಕಡೆ ಜನ ತಮ್ಮ ಮನೆಯ ಮುಂಭಾಗದಲ್ಲಿ ಮತ್ತು ಓಣಿಯಲ್ಲಿ ಹೋಳಿ ಆಡಿದರು. ಕೆಲವರು ಹಲಗೆ ಬಾರಿಸುತ್ತಾ ಬಣ್ಣ ಎರಚಿಕೊಂಡು ಸಂಭ್ರಮಿಸಿದರೆ; ಇನ್ನೂ ಕೆಲವರು ಮನೆಯ ಮುಂದೆಯೇ ಹಾಡಿಗೆ ಹೆಜ್ಜೆ ಹಾಕಿದ್ದು ಕಂಡು ಬಂತು. ಚಿಕ್ಕಮಕ್ಕಳ ಆಟಕ್ಕೆ ಪೋಷಕರು ನೆರವಾದರು. ಮಕ್ಕಳಿಗೆ ‘ಪಿಚಕಾರಿ’ ಸಂಭ್ರಮ ಹೆಚ್ಚಿಸಿತ್ತು.

ದಾಜೀಬಾನ್‌ ಪೇಟೆಯ ದುರ್ಗಾದೇವಿ ದೇವಸ್ಥಾನದ ಎಸ್‌ಎಸ್‌ಕೆ ಪಂಚ ಕಮಿಟಿ ಟ್ರಸ್ಟ್‌ ವತಿಯಿಂದ ಹುಬ್ಬಳ್ಳಿ ಕಾ ರಾಜಾ ವೃತ್ತದಲ್ಲಿ ಪ್ರತಿಷ್ಠಾಪಿಸಿದ್ದ ರತಿ ಹಾಗೂ ಮನ್ಮಥ ಮೂರ್ತಿಗಳಿಗೆ ಪೂಜೆ ಸಲ್ಲಿಸಲಾಯಿತು.

‘ಐದು ದಿನಗಳ ಹಿಂದೆಯೇ ರತಿ–ಮನ್ಮಥರನ್ನು ಪ್ರತಿಷ್ಠಾಪಿಸಲಾಗಿದ್ದು, ಇಲ್ಲಿನ ಆಚರಣೆಗೆ ನೂರಾರು ವರ್ಷಗಳ ಇತಿಹಾಸವಿದೆ. ಆಗಬೇಕಾದ ಕೆಲಸವನ್ನು ಮನದಲ್ಲಿ ಬೇಡಿಕೊಂಡರೆ ಬೇಗನೆ ಸಿದ್ಧಿಸುತ್ತದೆ ಎನ್ನುವ ಪ್ರತೀತಿಯೂ ಇದೆ. ಹೀಗಾಗಿ ಪ್ರತಿ ವರ್ಷ ಹೊರ ಜಿಲ್ಲೆಗಳಿಂದ ಜನ ದುರ್ಗಾದೇವಿ ದೇವಸ್ಥಾನಕ್ಕೆ ಬರುತ್ತಿದ್ದರು. ಕೋವಿಡ್‌ ಕಾರಣರಿಂದ ಈ ಬಾರಿ ಜನ ಬಂದಿಲ್ಲ’ ಎಂದು ಟ್ರಸ್ಟ್‌ನ ಟ್ರಸ್ಟಿ ಎನ್‌.ಆರ್‌. ರವಿ ತಿಳಿಸಿದರು. 

 

ಪೊಲೀಸ್‌ ಬಂದೋಬಸ್ತ್‌: ಸೋಂಕಿನ ಹರಡುವಿಕೆ ವೇಗ ಹೆಚ್ಚುತ್ತಿರುವ ಕಾರಣ ಹೆಚ್ಚು ಜನ ಗುಂಪುಗೂಡಿ ಹೋಳಿ ಆಚರಿಸುವಂತಿಲ್ಲ ಎಂದು ಪೊಲೀಸರು ಮೊದಲೇ ಎಚ್ಚರಿಸಿದ್ದರು. ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರೇಟ್‌ನ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೆಳಿಗ್ಗೆಯಿಂದಲೇ ಪ್ರಮುಖ ಪ್ರದೇಶಗಳಲ್ಲಿ ಜನ ಗುಂಪುಗೂಡದಂತೆ ಎಚ್ಚರಿಕೆ ವಹಿಸಿದ್ದರು. ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಕಾಳಮ್ಮನ ಅಗಸಿಯಿಂದ ಡಾಕಪ್ಪ ವೃತ್ತದ ತನಕ, ಡಾಕಪ್ಪ ವೃತ್ತದಿಂದ ಹಳೇ ಕೆಇಬಿ ಕಚೇರಿ ತನಕ ನಿಷೇಧಾಜ್ಞೆ ಜಾರಿಯಲ್ಲಿದ್ದರಿಂದ ಈ ಪ್ರದೇಶಗಳಿಗೆ ತೆರಳುವ ಎಲ್ಲ ಮಾರ್ಗಗಳನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗಿತ್ತು.

ಪೊಲೀಸ್‌ ಆಯುಕ್ತ ಲಾಬೂರಾಮ್‌, ಕಾನೂನು ಮತ್ತು ಸುವ್ಯಸ್ಥೆಯ ಉಪ ಆಯುಕ್ತ ಕೆ. ರಾಮರಾಜನ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಮಧ್ಯಾಹ್ನದ ತನಕ ನಗರದ ವಿವಿಧ ಪ್ರದೇಶಗಳಲ್ಲಿ ಸುತ್ತು ಹಾಕಿದರು. ಕೆಲ ಜನ ಕರ್ತವ್ಯದ ಮೇಲಿದ್ದ ಪೊಲೀಸ್‌ ಸಿಬ್ಬಂದಿಗೂ ಬಣ್ಣ ಹಚ್ಚಿದರು.ಹುಬ್ಬಳ್ಳಿಯ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ದುರ್ಗದ ಬೈಲ್‌ ಬಳಿ ಪೊಲೀಸರು ಬಂದೋಬಸ್ತ್‌ ಮಾಡಿದರು –ಪ್ರಜಾವಾಣಿ ಚಿತ್ರ

ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದ ಯುವಜನತೆ

ಮನೆ ಮುಂದೆ, ಓಣಿಗಳಿಗೆ ಸೀಮಿತವಾದ ಆಚರಣೆ

ಬೆಳಗ್ಗೆಯಿಂದಲೇ ಹುಬ್ಬಳ್ಳಿಯಲ್ಲೆಡೆ ಓಡಾಡಿದ ಪೊಲೀಸ್‌ ಆಯುಕ್ತ ಲಾಬೂರಾಮ್‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು