ಶುಕ್ರವಾರ, ಜೂನ್ 25, 2021
21 °C

ವೈಫಲ್ಯ ಮರೆಮಾಚಲು ನಕಲಿ ಟೂಲ್ ಕಿಟ್: ಕಾಂಗ್ರೆಸ್‌ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕೋವಿಡ್‌ ಎರಡನೇ ಅಲೆಯನ್ನು ಸರಿಯಾಗಿ ನಿಭಾಯಿಸಲು ಕೇಂದ್ರ ಸರ್ಕಾರ ವಿಫಲವಾಗಿದ್ದು, ಇದನ್ನು ಮರೆಮಾಚಲು ಬಿಜೆಪಿ ನಕಲಿ ಟೂಲ್‌ ಕಿಟ್‌ನ ಕಥೆ ಕಟ್ಟಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್‌ ಹುಸೇನ್ ಹಳ್ಳೂರ ಟೀಕಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ‘ಬಿಜೆಪಿ ತನ್ನ ಸಕಲ ವೈಫಲ್ಯಗಳನ್ನು ಮುಚ್ಚಿಹಾಕಲು ನಕಲಿ ದಾಖಲೆಗಳನ್ನು ಸೃಷ್ಟಿಸುವ ಮೂಲಕ ಅತ್ಯಂತ ನೀಚಮಟ್ಟಕ್ಕೆ ಇಳಿದಿದೆ. ಕೆಲ ಸ್ವತಂತ್ರ ಮಾಧ್ಯಮ ಸಂಸ್ಥೆಗಳು ಈಗಾಗಲೇ ಬಿಜೆಪಿಯ ಮುಖಂಡರು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಹೇಳಿವೆ. ಬಿಜೆಪಿ ಪ್ರಚಾರಕ್ಕೆ ತಂದಿರುವ ಟೂಲ್ ಕಿಟ್ ಕಟ್ಟುಕಥೆಯಲ್ಲಿ ಕಾಂಗ್ರೆಸ್ ಪಕ್ಷದ ಯಾವುದೇ ಪಾತ್ರ ಇಲ್ಲ. ಬಿಜೆಪಿ ಇಂತಹ ಅನೈತಿಕ ಕೃತ್ಯದ ಮೂಲಕ ದೇಶದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಿದೆ’ ಎಂದಿದ್ದಾರೆ.

‘ತಾವೇ ಸೃಷ್ಟಿಸಿದ ನಕಲಿ ಟೂಲ್‌ಕಿಟ್‌ ಮೂಲಕ ಬಿಜೆಪಿ ನಾಯಕರು ಕಾಂಗ್ರೆಸ್‌ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವುದು ಬುದ್ಧಿಗೇಡಿತನದ ಪರಮಾವಧಿಯಾಗಿದೆ. ಬಿಜೆಪಿ ಮುಖಂಡರು ಅಪಪ್ರಚಾರ ಮಾಡುವ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವಕ್ಕೆ ಧಕ್ಕೆಯಾಗಿದೆ’ ಎಂದಿದ್ದಾರೆ.

ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್‌ ಉಳ್ಳಾಗಡ್ಡಿಮಠ ‘ದೇಶದಲ್ಲಿ ಉತ್ಪಾದಿಸಿದ ಲಸಿಕೆಯನ್ನು ವಿದೇಶಕ್ಕೆ ರಫ್ತು ಮಾಡಿದ್ದೇ ಎಲ್ಲ ಅವಾಂತರಕ್ಕೆ ಕಾರಣವಾಗಿದೆ. ಈ ವೈಫಲ್ಯ ಮರೆಮಾಚಿ ಕಾಂಗ್ರೆಸ್‌ಗೆ ಕೆಟ್ಟ ಹೆಸರು ತರಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಸಚಿವ ಜಗದೀಶ್ ಶೆಟ್ಟರ್ ಸ್ಥಳೀಯ ನಕಲಿ ಟೂಲ್‌ಕಿಟ್‌ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.

’ಮೊಸರಲ್ಲಿ ಕಲ್ಲು ಹುಡುಕುವ ಕೆಲಸ’

ಹುಬ್ಬಳ್ಳಿ: ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರಿಗೆ ಸೌಲಭ್ಯಗಳನ್ನು ಕಲ್ಪಿಸಲು ಸಚಿವರಾದ ಪ್ರಲ್ಹಾದ ಜೋಶಿ ಹಾಗೂ ಜಗದೀಶ ಶೆಟ್ಟರ್ ಅವರು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್‌ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ವಕ್ತಾರ ರವಿ ನಾಯ್ಕ ಟೀಕಿಸಿದ್ದಾರೆ. ಕಾಂಗ್ರೆಸ್‌ ಇಷ್ಟು ದಿನ ಏನೂ ಮಾಡದೆ ಸುಮ್ಮನೆ ಕುಳಿತುಕೊಂಡಿತ್ತು. ಈಗ ಟೀಕೆ ಮಾಡುತ್ತಿದೆ ಎಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು