ಮಂಗಳವಾರ, ನವೆಂಬರ್ 24, 2020
20 °C
ನವಲಗುಂದ ಪುರಸಭೆಯಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ: ಕೋನರಡ್ಡಿ ಆರೋಪ

ಕಾಂಗ್ರೆಸ್‌ನಿಂದ ಸುಳ್ಳು ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನವಲಗುಂದ ಪುರಸಭೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಡುವೆ ಮೂರು ದಿನಗಳ ಕಾಲ ಚರ್ಚೆ ನಡೆದರೂ, ಯಾವುದೇ ಮಾತುಕತೆ ಆಗಿಯೇ ಇಲ್ಲ ಎಂದು ಕಾಂಗ್ರೆಸ್‌ ಹೇಳುತ್ತಿದೆ. ಈ ಬಗ್ಗೆ ಬಹಿರಂಗವಾಗಿ ಚರ್ಚೆಯಾಗಲಿ ಎಂದು ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್‌.ಎಚ್‌. ಕೋನರಡ್ಡಿ ಸವಾಲು ಹಾಕಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕಾಂಗ್ರೆಸ್‌ ಗ್ರಾಮೀಣ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ ಬಿಜೆಪಿಗೆ ನಮ್ಮ ಪಕ್ಷ ಬೆಂಬಲ ನೀಡಿಲ್ಲ. ಬೇಕಾದರೆ ವಿರೋಧ ಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲು ಸಿದ್ಧರಿದ್ದೇವೆ ಎಂದಿದ್ದಾರೆ. ಆದರೆ, ಕಾಂಗ್ರೆಸ್‌ ಬೆಂಬಲಿಸಿದ್ದರಿಂದಲೇ ಬಿಜೆಪಿ ಅಲ್ಲಿ ಅಧಿಕಾರಕ್ಕೆ ಬಂದಿದೆ. ಜೆಡಿಎಸ್‌ ನಾಯಕರು ನಮ್ಮ ಜೊತೆ ಚರ್ಚಿಸಿಯೇ ಇಲ್ಲ ಎಂದಿದ್ದು ಸುಳ್ಳು’ ಎಂದರು.

’ರಾಜ್ಯದಲ್ಲಿ ಹಾವು–ಮುಂಗಸಿಯಂತಿರುವ ಬಿಜೆಪಿ ಹಾಗೂ ಕಾಂಗ್ರೆಸ್‌ ಅಧಿಕಾರದ ಆಸೆಗೆ ನವಲಗುಂದದಲ್ಲಿ ಅಪವಿತ್ರ ಮೈತ್ರಿ ಮಾಡಿಕೊಂಡಿವೆ. ಬಿಜೆಪಿ ಜೊತೆ ಮೈತ್ರಿ ಬೇಡ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ, ಸತೀಶ ಜಾರಕಿಹೊಳಿ ಸೇರಿದಂತೆ ಹಲವು ಮುಖಂಡರು ಹೇಳಿದ್ದರೂ, ಸ್ಥಳೀಯ ನಾಯಕರು ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ’ ಎಂದು ದೂರಿದರು.

‘ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಹಿಂದಿನ ಅವಧಿಯಲ್ಲಿ ಏನೂ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಅಭಿವೃದ್ಧಿ ಉದ್ದೇಶದಿಂದ ಬಿಜೆಪಿ ಜೊತೆ ಕೈ ಜೋಡಿಸಿದ್ದೇವೆ ಎಂದು ಅನಿಲ ಹೇಳಿದ್ದಾರೆ. ಹಿಂದೆ ನಾನೇ ಶಾಸಕನಾಗಿದ್ದಾಗ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಇದರ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ’ ಎಂದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಿ. ಗಂಗಾಧರಮಠ ಮಾತನಾಡಿ ‘ಕಾಂಗ್ರೆಸ್‌ ಅನಗತ್ಯವಾಗಿ ನಮ್ಮ ಪಕ್ಷದ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡುತ್ತಿದೆ. ಅಧಿಕಾರದಿಂದ ಜೆಡಿಎಸ್ ಅನ್ನು ದೂರವಿಡಲು ಕಾಂಗ್ರೆಸ್‌ ಈ ಕುತಂತ್ರ ಮಾಡಿದೆ. ನವಲಗುಂದ ಪುರಸಭೆಯಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿರುವ ಕಾರಣ ಅಭಿವೃದ್ಧಿಗಾಗಿ ಹೋರಾಟ ಮಾಡುತ್ತೇವೆ’ ಎಂದರು.

ಪಕ್ಷದ ಪ್ರಮುಖರಾದ ಡಿ.ಕೆ. ಹಳ್ಳದ, ಆನಂದ ಹವಳಕೋಡ, ಅಣ್ಣಿಗೇರಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲರಡ್ಡಿ ಕುರಹಟ್ಟಿ, ಪ್ರಕಾಶ ಶಿಗ್ಲಿ, ಜೀವನ ಪವಾರ, ಬಾಬಾಜಾನ್ ಮಕಾನದಾರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.