ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ ಸಹಾಯಧನಕ್ಕೆ ರೈತನ ಅಲೆದಾಟ

ತೋಟಗಾರಿಕೆ ಇಲಾಖೆಗೆ ಅಲೆದು ಹೈರಾಣಾದ ಪ್ರಗತಿಪರ ಕೃಷಿಕ
Last Updated 22 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯ ಸಹಾಯಧನ ನೆಚ್ಚಿಕೊಂಡು, ಆ ರೈತ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಾವಿನ ತೋಟ ನಿರ್ಮಿಸಿಕೊಂಡಿದ್ದ. ಪೂರಕವಾಗಿ ಹನಿ ನೀರಾವರಿ ಪದ್ಧತಿಯನ್ನೂ ಅಳವಡಿಸಿಕೊಂಡ.

ಆದರೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮೂರು ವರ್ಷವಾದರೂ ಅವರಿಗೆ ಸಿಗಬೇಕಾದ ಅಂದಾಜು ₹3.30 ಲಕ್ಷ ಸಹಾಯಧನ ಸಿಕ್ಕಿಲ್ಲ. ಇಲಾಖೆಯ ತಾಲ್ಲೂಕು ಮತ್ತು ಜಿಲ್ಲಾ ಕಚೇರಿಗೆ ಅಲೆದು ಹೈರಾಣಾಗಿರುವ ರೈತನೀಗ, ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾನೆ.

ಕುಂದಗೋಳ ತಾಲ್ಲೂಕಿನ ಕಳಸ ಗ್ರಾಮದ ಪ್ರಗತಿಪರ ರೈತ ಮೃತ್ಯುಂಜಯ ನಿಂಗಪ್ಪ ನಾಗಶೆಟ್ಟಿ, ನರೇಗಾ ಸಹಾಯಧನ ಸಿಗದ ಸಂತ್ರಸ್ತ. ಮೃತ್ಯುಂಜಯ ಅವರದು ಪ್ರಗತಿಪರ ರೈತರ ಕುಟುಂಬ. ಅವರ ಬೇಸಾಯ ಮೆಚ್ಚಿ ಕೃಷಿ ಇಲಾಖೆಯಿಂದ ‘ಧಾರವಾಡ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ’, ಕೃಷಿ ವಿ.ವಿ.ಯಿಂದ ‘ಶ್ರೇಷ್ಠ ಕೃಷಿಕರಲ್ಲಿ ಶ್ರೇಷ್ಠ’, ’ಶ್ರೇಷ್ಠ ಯುವ ಕೃಷಿಕ’, ‘ಕೃಷಿಯ ಋಷಿ’ ಪ್ರಶಸ್ತಿಗಳು ಸಿಕ್ಕಿವೆ.

ಕಾರಣವಿಲ್ಲದೆ ವಿಳಂಬ:‘ಕೃಷಿಯನ್ನೇ ನಂಬಿಕೊಂಡು 2016–17ನೇ ಸಾಲಿನಲ್ಲಿ ನರೇಗಾದಡಿ ₹2.5 ಲಕ್ಷ ಖರ್ಚು ಮಾಡಿ 3 ಎಕರೆ ಮಾವಿನ ತೋಟ ನಿರ್ಮಿಸಿಕೊಂಡೆ. ₹86,426 ವೆಚ್ಚ ಮಾಡಿ ಹನಿ ನೀರಾವರಿ ಪದ್ಧತಿಯನ್ನೂ ಅಳವಡಿಸಿಕೊಂಡೆ. ಸಹಾಯಧನ ಸಿಗುವ ಭರವಸೆಯಿಂದ ಎರಡಕ್ಕೂ ಸಾಲ ಮಾಡಿ ಹಣ ಹೊಂದಿಸಿದ್ದೆ’ ಎಂದು ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

‘ಈ ಕುರಿತು ಕುಂದಗೋಳ ತಾಲ್ಲೂಕಿನ ಸಹಾಯಕ ತೋಟಗಾರಿಕೆ ನಿರ್ದೇಶಕರಿಗೆ ಮನವಿ ಕೊಟ್ಟು, ಹಲವು ಬಾರಿ ಭೇಟಿಯಾದರೂ ಕ್ಯಾರೇ ಎನ್ನಲಿಲ್ಲ. ಬಳಿಕ ಇಲಾಖೆಯ ಉಪ ನಿರ್ದೇಶಕರಿಗೆ ವಿಷಯ ತಿಳಿಸಿದರೂ ಸ್ಪಂದಿಸಲಿಲ್ಲ. ಅಧಿಕಾರಿಗಳನ್ನು ನೇರವಾಗಿ ಭೇಟಿ ಮಾಡಿದಾಗಲೆಲ್ಲಾ, ನನ್ನನ್ನು ಅವಮಾನಿಸಿದರು. ಜತೆಗೆ, ಇಂಗು ಗುಂಡಿ ನಿರ್ಮಾಣಕ್ಕೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ್ದರೂ, ಕಾರ್ಯಾದೇಶ ನೀಡದೆ ಸತಾಯಿಸುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT