ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತ: ಸ್ನೇಹಿತೆಯರ ಸಂತಸ ಸಹಿಸದ ಜವರಾಯ

ಹೆದ್ದಾರಿಯ ಮೃತ್ಯುಕೂಪದಲ್ಲಿ ಸ್ನೇಹಿತೆಯರ ದುರ್ಮರಣ
Last Updated 15 ಜನವರಿ 2021, 9:07 IST
ಅಕ್ಷರ ಗಾತ್ರ

ಧಾರವಾಡ: ಟಿಪ್ಪರ್ ಹಾಗೂ ಮಿನಿ ಬಸ್ ನಡುವೆ ಶುಕ್ರವಾರ ನಸುಕಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆಏರಿಕೆಯಾಗಿದೆ.

ಮೃತಪಟ್ಟವರು ದಾವಣಗೆರೆಯ ವಿದ್ಯಾನಗರ, ಎಂಸಿಸಿ ಎ–ಬ್ಲಾಕ್‌ ಮತ್ತು ಎಂಸಿಸಿ ಬಿ–ಬ್ಲಾಕ್‌ನ ನಿವಾಸಿಗಳು. ಸೇಂಟ್ ಪೌಲ್ಸ್‌ ಕಾನ್ವೆಂಟ್‌ ಶಾಲೆಯ ಹಳೇ ವಿದ್ಯಾರ್ಥಿಗಳಾದ ಇವರು ಈ ಬಾರಿ ಗೋವಾಕ್ಕೆ ಪ್ರವಾಸ ಹೊರಟಿದ್ದರು.

ದಾವಣಗೆರೆಯ ಜೆಜೆಎಂ ವೈದ್ಯಕೀಯ ಕಾಲೇಜಿನ ಹಿರಿಯ ಪ್ರಾಧ್ಯಾಪಕರ ಡಾ. ರವಿಕುಮಾರ ಅವರ ಪತ್ನಿ ಪ್ರೀತಿ, ಸ್ತ್ರೀರೋಗ ತಜ್ಞೆ ಡಾ. ವೀಣಾ ಪ್ರಕಾಶ ಸೇರಿದಂತೆ 11ಜನ ಮೃತಪಟ್ಟಿದ್ದಾರೆ.17 ಜನರಿದ್ದ ಈ ತಂಡ ಶುಕ್ರವಾರ ನಸುಕಿನ 3.30ಕ್ಕೆ ದಾವಣಗೆರೆ ಬಿಟ್ಟಿದ್ದರು. ಹುಬ್ಬಳ್ಳಿ ಧಾರವಾಡ ನಡುವಿನ ಇಟ್ಟಿಗಟ್ಟಿ ಬಳಿಯ ಅಪಘಾತ ವಲಯದಲ್ಲಿ ವೇಗವಾಗಿ ನುಗ್ಗಿದ ಟಿಪ್ಪರ್‌ ಮಿನಿಬಸ್‌ಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್ಸು ಸಂಪೂರ್ಣ ನುಜ್ಜುಗುಜ್ಜಾಗಿದೆ. ಟಿಪ್ಪರ್‌ನಲ್ಲಿದ್ದ ಮರಳು ಬಸ್‌ನಲ್ಲಿ ಬಿದ್ದಿದೆ.

ಏನಾಯಿತು ಎಂದು ಅರಿಯುವಷ್ಟರಲ್ಲೇ 11 ಜನರ ಪ್ರಾಣಪಕ್ಷಿ ಹಾರಿಹೋಗಿತ್ತು. ಉಳಿದವರ ಸ್ಥಿತಿ ಚಿಂತಾಜನಕವಾಗಿದ್ದವು. ಟಿಪ್ಪರ್ (ಕೆಎ22ಸಿ1649) ಹಾಗೂ ಮಿನಿ ಬಸ್ (ಕೆಎ64–1316) ಚಾಲಕರಿಬ್ಬರೂ ಮೃತಪಟ್ಟಿದ್ದಾರೆ. ಧಾರವಾಡದ ಸ್ನೇಹಿತರೊಬ್ಬರ ಮನೆಯಲ್ಲಿ ಉಪಾಹಾರ ಸೇವಿಸಿ ಮುಂದೆ ಗೋವಾದತ್ತ ಪ್ರಯಾಣ ಬೆಳೆಸುವ ಈ ಸ್ನೇಹಿತೆಯರ ಯೋಜನೆಯನ್ನು ವಿಧಿ ವಿಫಲಗೊಳಿಸಿದೆ.

ಪ್ರತಿ ವರ್ಷ ಈ ತಂಡ ಈ ವೇಳೆಗೆ ಪ್ರವಾಸಕ್ಕೆ ಹೋಗುತ್ತಿದ್ದರು. ಈವರೆಗೂ ರಾಜ್ಯದ ಒಂದೊಂದು ಜಿಲ್ಲೆಗೆ ಭೇಟಿ ನೀಡುತ್ತಿದ್ದ ಈ ತಂಡ ಇದೇ ಮೊದಲ ಬಾರಿಗೆ ಹೊರರಾಜ್ಯ ಪ್ರವಾಸ ಕೈಗೊಂಡಿದ್ದರು. ಅಷ್ಟು ಮಾತ್ರವಲ್ಲ ಎಂದೂ ಕತ್ತಲೆಯಲ್ಲಿ ಪ್ರಯಾಣಿಸಿದವರಲ್ಲ. ಆದರೆ ಈ ಬಾರಿ ಸಮಯ ಹೊಂದಾಣಿಕೆಯ ದೃಷ್ಟಿಯಿಂದ ದಾವಣಗೆರೆಯನ್ನು ನಸುಕಿನ 3.30ಕ್ಕೆ ಬಿಟ್ಟಿದ್ದರು.

ಹೆದ್ದಾರಿಯಲ್ಲೊಂದು ಮೃತ್ಯಕೂಪ
ನಾಲ್ಕು ಪ್ರಮುಖ ರಾಜ್ಯಗಳ ಹಲವು ಮುಖ್ಯ ನಗರಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸುಮಾರು 27 ಅಪಘಾತ ವಲಯಗಳನ್ನು ಗುರುತಿಸಲಾಗಿದ್ದು, ಇದರಲ್ಲಿ ಹುಬ್ಬಳ್ಳಿ ಧಾರವಾಡ ಅವಳಿ ನಗರದ ನಡುವಿನ ಯರಿಕೊಪ್ಪ ಒಂದು. ಅತ್ತ ರಸ್ತೆ ವಿಸ್ತರಣೆಯೂ ಇಲ್ಲದೆ, ಇತ್ತ ಅಪಘಾತ ನಿಯಂತ್ರಣವೂ ಇಲ್ಲದೆ ನೂರಾರು ಜನರು ರಸ್ತೆ ಅಪಘಾತಕ್ಕೆ ಬಲಿಯಾಗುತ್ತಲೇ ಇದ್ದಾರೆ.

ಥಾಣೆ–ಚೆನ್ನೈ ನಡುವಿನ 1,235 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿಯು ಸುವರ್ಣ ಚತುಷ್ಪಥಯೋಜನೆಯಲ್ಲಿ ನಿರ್ಮಾಣಗೊಂಡಿದೆ. 2000 ಇಸವಿಯಲ್ಲಿ ಹುಬ್ಬಳ್ಳಿ ಧಾರವಾಡ ನಡುವೆ ನಂದಿ ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್ ಸಂಸ್ಥೆ ಹುಬ್ಬಳ್ಳಿಯ ಗಬ್ಬೂರು ಕ್ರಾಸ್‌ನಿಂದ ಧಾರವಾಡದ ನರೇಂದ್ರ ಕ್ರಾಸ್‌ವರೆಗಿನ 30ಕಿ.ಮೀ. ಉದ್ದನೆಯ ರಸ್ತೆಯನ್ನು ನಿರ್ಮಿಸಿದೆ. ಇದಕ್ಕಾಗಿ 5 ಟೋಲ್ ಸಂಗ್ರಹಗಳನ್ನು ಸ್ಥಾಪಿಸಿ ನಿತ್ಯ ಲಕ್ಷಾಂತರ ಹಣ ಸಂಗ್ರಹಿಸುತ್ತಿದೆ. ದಿನದಿಂದ ದಿನಕ್ಕೆ ಹೆದ್ದಾರಿ ಬಳಸುವ ವಾಹನಗಳ ಸಂಖ್ಯೆ ಏರುಮುಖವಾಗುತ್ತಿದ್ದಂತೆ ಅಪಘಾತಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿರುವುದಕ್ಕೆ ಅವಳಿ ನಗರದ ಜನರನ್ನು ಆತಂಕಕ್ಕೆ ನೂಕಿದೆ.

ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ 30 ಕಿ.ಮೀ. ಹೊರತುಪಡಿಸಿದರೆ ಎಲ್ಲೆಡೆ ಚತುಷ್ಪಥಜತೆಗೆ ಅದಕ್ಕೆ ಹೊಂದಿಕೊಂಡಂತೆ ಸರ್ವೀಸ್ ರಸ್ತೆ ಇದೆ. ಆದರೆ ಇಲ್ಲಿ ಅಂಥ ಯಾವುದೇ ಅವಕಾಶಗಳು ಸವಾರರಿಗೆ ಇಲ್ಲ. ಬೈಕ್‌, ಆಟೊ, ಟ್ರಾಕ್ಟರ್ ಹಾಗೂ ಚಕ್ಕಡಿಗಳಿಗೆ ಈ ರಸ್ತೆಯಲ್ಲಿ ಪ್ರವೇಶವಿಲ್ಲ. ಹಾಗೆಂದ ಮಾತ್ರಕ್ಕೆ ಈ ಮಾರ್ಗಕ್ಕೆ ಪರ್ಯಾಯವನ್ನೂ ನಿರ್ಮಿಸದೆ, ಅವರನ್ನು ಮೃತ್ಯುಕೂಪಕ್ಕೆ ತಳ್ಳಲಾಗುತ್ತಿದೆ.

ಪೊಲೀಸ್ ಲೆಕ್ಕದ ಪ್ರಕಾರ 10 ವರ್ಷಗಳಲ್ಲಿ 179 ಜನರು ಅಪಘಾತದಲ್ಲಿ ಅಸುನೀಗಿದ್ದಾರೆ. ಸುಮಾರು 595 ಜನರು ಗಾಯಗೊಂಡಿದ್ದಾರೆ. 2020ರ ಆರಂಭದಲ್ಲಿ ಕುಂದಗೋಳದ ಶಿವಾನಂದ ಮಠದ ಬಸವೇಶ್ವರ ಸ್ವಾಮೀಜಿ ಅವರೂ ಇದೇ ರಸ್ತೆಯಲ್ಲಿನ ಅಪಘಾತದಲ್ಲಿ ಮೃತಪಟ್ಟಿದ್ದು, ಆ ಆಘಾತದಿಂದ ಇನ್ನೂ ಜನರು ಹೊರಬಂದಿಲ್ಲ. 2020ರ ಆರಂಭದಲ್ಲೇ ಇಲ್ಲಿ ಎರಡು ದೊಡ್ಡ ಅಪಘಾತಗಳು ಸಂಭವಿಸಿವೆ.

2021ರ ಆರಂಭದಲ್ಲಿ ಈ ಅಪಘಾತ ಬಹುತೇಕರನ್ನು ಆಘಾತಕ್ಕೀಡು ಮಾಡಿದೆ.ಒಂದು ಅಪಘಾತ ಸಂಭವಿಸಿದರೆ ವಾಹನಗಳು ಮುಂದೆ ಸಂಚರಿಸಲಾಗದೆ ಕನಿಷ್ಠ ಅರ್ಧ ದಿನವಾದರೂ ವಾಹನಗಳು ಸಾಲುಗಟ್ಟಿ ಈ ರಸ್ತೆಯಲ್ಲಿ ನಿಲ್ಲುವುದು ಸಾಮಾನ್ಯ ದೃಶ್ಯ. ಇದೂ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ರಸ್ತೆ ಉಬ್ಬು ನಿರ್ಮಿಸುವಂತಿಲ್ಲ!
ಅವಳಿ ನಗರದ ನಡುವೆ ತ್ವರಿತ ಸಂಚಾರಕ್ಕೆ ಬಳಸಲು ಇರುವ ಏಕೈಕ ಮಾರ್ಗ ಇದೊಂದೇ ಆಗಿರುವುದರಿಂದ ಬಹಳಷ್ಟು ದ್ವಿಚಕ್ರ ವಾಹನ ಸವಾರರು ಇದೇ ಮಾರ್ಗವನ್ನೇ ಅನುಸರಿಸುತ್ತಾರೆ. ಬೆಳಗಾವಿ ಹಾಗೂ ಬೆಂಗಳೂರು ಕಡೆಯಿಂದ ಬರುವ ವಾಹನಗಳ ವೇಗವಾಗಿ ಬಂದು ಬಾಟೆಲ್‌ ನೆಕ್‌ನಂತಿರುವ ಈ ಮಾರ್ಗದಲ್ಲೂ ಅದೇ ವೇಗವನ್ನು ಕಾಯ್ದುಕೊಳ್ಳುತ್ತಿದ್ದಾರೆ. ಕ್ಯಾರಕೊಪ್ಪ ಹಾಗೂ ಇಟ್ಟಿಗಟ್ಟಿ ಬಳಿ ಎರಡೂ ಕಡೆಯಿಂದ ಇಳಿಜಾರು ರಸ್ತೆ ಆಗಿರುವುದರಿಂದ ಇಲ್ಲಿ ವಾಹನ ಹಿಂದಿಕ್ಕುವಾಗ ಆಗುವ ಅಪಘಾತಗಳೇ ಹೆಚ್ಚು. ಇದಕ್ಕೆ ಸುಲಭದಲ್ಲಿ ಬಲಿಯಾಗುತ್ತಿರುವವರು ದ್ವಿಚಕ್ರ ವಾಹನ ಹಾಗೂ ಕಾರು ಪ್ರಯಾಣಿಕರು.

ಹೆದ್ದಾರಿಯಾದ್ದರಿಂದ ಇಲ್ಲಿ ರಸ್ತೆ ಉಬ್ಬು ನಿರ್ಮಿಸುವಂತಿಲ್ಲ ಎಂಬದೂ ಇಲ್ಲಿ ಅಪಘಾತಕ್ಕೆ ಕಾರಣವಾಗಿದೆ. ಇತ್ತೀಚೆಗೆ ಪೊಲೀಸ್ ವರಿಷ್ಠಾಧಿಕಾರಿ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ರಂಬರ್‌ ಸ್ಟಿಕ್ ಹಾಗೂ ಸೂಚನಾ ಫಲಕ ಅಳವಡಿಸಲು ನಿರ್ಧರಿಸಿದ್ದಾರೆ. ಅಪಘಾತ ವಲಯ ಎಂದು ನಮೂದಾಗಿದ್ದರೂ ವೇಗವಾಗಿ ಬರುವ ವಾಹನ ಸವಾರರಿಗೆ ಅದು ಗೋಚರಿಸುವುದೇ ಎಂಬುದೇ ಸಂಶಯ.

ಅಪಘಾತ ಸಂಭವಿಸಿದಾಗಷ್ಟೇ ಚರ್ಚೆಯ ಮುನ್ನೆಲೆಗೆ ಬರುವ ಬೈಪಾಸ್ ವಿಸ್ತರಣೆ ಮತ್ತೊಂದು ಅಪಘಾತದವರೆಗೂ ಗೌಣವಾಗುತ್ತದೆ. ಆದರೆ ಪ್ರಯಾಣಿಕರು ಮಾತ್ರ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಅನಿವಾರ್ಯತೆ ಇದೆ ಎಂದು ಜನರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT