–ಕಲ್ಲಪ್ಪ ಮ ಮಿರ್ಜಿ
ಕಲಘಟಗಿ: ಸರ್ಕಾರದ ಅನುದಾನ ಸಮರ್ಪಕ ಬಳಕೆಗೆ ತಾಲ್ಲೂಕಿನ ತಂಬೂರ ಗ್ರಾಮ ಪಂಚಾಯತಿ 2022-23ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿರುವುದು ಗ್ರಾಮಸ್ಥರಿಗೆ ಹರ್ಷ ತಂದಿದೆ.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತಂಬೂರ, ಸಿಂಗನಳ್ಳಿ, ಜಂಜನಬೈಲ್, ಸಂಗಟಿಕೊಪ್ಪ, ಹುಲಗಿನಕೊಪ್ಪ ಗ್ರಾಮಗಳ ಒಳಗೊಂಡಿದ್ದು, ಉತ್ತಮ ಆಡಳಿತ ಹಾಗೂ ಅಭಿವೃದ್ಧಿಗೆ ಪ್ರಶಸ್ತಿ ಸಂದಿದೆ. 5640 ಜನಸಂಖ್ಯೆ ಹೊಂದಿದೆ ಶೇ 90 ರಷ್ಟು ಸಾಕ್ಷರತೆ ಪ್ರಮಾಣ ಸಾಧಿಸಲಾಗಿದೆ.
‘ಚಾಲುಕ್ಯರ ಕಾಲದ ಇತಿಹಾಸ ಪ್ರಸಿದ್ಧ ಬಸವಣ್ಣ ದೇವರ ದೇವಸ್ಥಾನ ಜೀರ್ಣೋದ್ಧಾರ, ಸಮಯಕ್ಕೆ ಸರಿಯಾಗಿ ಗ್ರಾಮ ಸಭೆ ಜರುಗಿಸಿ ಜನರಿಗೆ ಸರ್ಕಾರದ ಯೋಜನೆ ತಲುಪಿಸುವದು ವೃತ್ತಿಪರ ಕೌಶಲಕ್ಕೆ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ, ಓದುಗರಿಗೆ ಡಿಜಿಟಲ್ ಗ್ರಂಥಾಲಯ ನಿರ್ಮಾಣ ಮಾಡಲಾಗಿದೆ’ ಎಂದು ಪಿಡಿಒ ಮಾಹಿತಿ ಒದಗಿಸಿದರು.
ಜನರ ಆರೋಗ್ಯದ ಹಿತ ದೃಷ್ಟಿಯಿಂದ 4 ಶುದ್ಧ ಕುಡಿಯುವ ನೀರಿನ ಘಟಕ ನಿರಂತರವಾಗಿ ನಿರ್ವಹಣೆ, ಬೀದಿ ದೀಪಗಳು ನಿರ್ವಹಣೆ ಮತದಾನ ಜಾಗೃತಿ, ಪ್ಲಾಸ್ಟಿಕ್ ಕುರಿತು ಜಾಗೃತಿ ಮೂಡಿಸಲಾಗಿದೆ ಎಂದರು.
ಪಿಡಿಒಗೆ 4 ಪ್ರಶಸ್ತಿ ಗರಿ: ಪಿಡಿಒ ನಾಗರಾಜ್ ಕುಮಾರ್ ಬೀದರಳ್ಳಿ ಕಲಘಟಗಿ ತಾಲ್ಲೂಕಿನ ಗಂಬ್ಯಾಪುರ ಗ್ರಾಮದವರು ಅವರ ಉತ್ತಮ ಆಡಳಿತ ಕೈಗೊಂಡಿದ್ದಕ್ಕೆ ಇಲ್ಲಿಯವರೆಗೆ ಐದು ಗ್ರಾಮ ಪಂಚಾಯಿತಿಗೆ ಪ್ರಶಸ್ತಿ ತಂದು ಕೊಟ್ಟಿದ್ದಾರೆ.
2015-16 ರಲ್ಲಿ ಉಗ್ಗಿನಕೇರಿ, 2018-19 ರಲ್ಲಿ ನವಲಗುಂದ ತಾಲ್ಲೂಕಿನ ಮೊರಬ, 2020-21 ರಲ್ಲಿ ಮುಕ್ಕಲ, 2022-23ನೇ ಸಾಲಿಗೆ ಗಾಂಧಿ ಗ್ರಾಮ ಪುರಸ್ಕಾರ ತಂಬೂರ ಗ್ರಾಮ ಪಂಚಾಯತಿಗೆ ಒದಗಿ ಬಂದಿದೆ.
‘ನಾಗರಾಜ್ ಕುಮಾರ್ ಬೀದರಳ್ಳಿ ಅವರ ಉತ್ತಮ ಆಡಳಿತದಿಂದ 4 ಪಂಚಾಯಿತಿಗೆ ಪ್ರಶಸ್ತಿ ತಂದು ಕೊಟ್ಟಿದ್ದಾರೆ. ಅವರಿಂದ ನಮ್ಮ ಇಲಾಖೆಗೆ ಮತ್ತಷ್ಟು ಗೌರವ ಬಂದಿದೆ. ಮುಂದಿನ ದಿನಗಳಲ್ಲಿ ಅವರ ಪ್ರಾಮಾಣಿಕತಗೆ ಇನ್ನು ಹೆಚ್ಚಿನ ಪ್ರಶಸ್ತಿ ಸಿಗುವಂತಾಗಲಿ ಮತ್ತು ಉಳಿದ ಪಂಚಾಯತಿ ಅಧಿಕಾರಿಗಳು ಇದೇ ರೀತಿ ಕಾರ್ಯನಿರ್ವಹಿಸಲಿ’ ಎಂದು ತಾಲ್ಲೂಕು ಪಂಚಾಯತಿ ಇಒ ಪಿ.ವೈ.ಸಾವಂತ ಹರ್ಷ ವ್ಯಕ್ತಪಡಿಸಿದರು.
‘ಪಿಡಿಒ ಅವರ ಮಾರ್ಗದರ್ಶನದಲ್ಲಿ ಗ್ರಾಮಗಳ ಅಭಿವೃದ್ಧಿ ಕಾರ್ಯದಲ್ಲಿ ಅನುದಾನ ಸಮರ್ಪಕವಾಗಿ ಬಳಕೆ ಮಾಡಿಕೊಂಡು ಪಾರದರ್ಶಕತೆ ತಂದಿರುವುದಕ್ಕೆ ಪುರಸ್ಕಾರ ಲಭಿಸಿದೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌಸೀಯಾಬಾನು ಮುಲ್ಲಾ ಪ್ರಜಾವಾಣಿಗೆ ತಿಳಿಸಿದರು.
ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಗೆ ಪಂಚಾಯಿತಿ ಸದಸ್ಯರು ಸಿಬ್ಬಂದಿ ಹಾಗೂ ಗ್ರಾಮಸ್ಥರ ಸಹಕಾರದಿಂದ ಪ್ರಶಸ್ತಿ ಲಭಿಸಿದೆ
–ನಾಗರಾಜಕುಮಾರ ಬೀದರಳ್ಳಿ ಪಿಡಿಒ
ಸರ್ಕಾರದ ವಿವಿಧ ಯೋಜನೆ ಅನುಷ್ಠಾನ
ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಿ ಜನರಿಗೆ ಎರಡು ಬಕೆಟ್ ನೀಡಿ ಮನೆ ಮನೆಗೆ ತೆರಳಿ ಕಸ ಸಂಗ್ರಹಸಿ ಹಸಿ ಕಸ ಮತ್ತು ಒಣ ಕಸವಾಗಿ ಬೆರ್ಪಡಿಸಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ದುಡಿಯುವ ಕೂಲಿ ಕಾರ್ಮಿಕರಿಗೆ ನರೇಗಾ ಕೆಲಸ ಆರೋಗ್ಯ ಶಿಬಿರ ಆಯೋಜನೆ ಮಕ್ಕಳ ವಿಶೇಷ ಗ್ರಾಮ ಸಭೆ ಯಶಸ್ವಿಯಾಗಿ ನಡೆಸಲಾಗಿದೆ. ಎಸ್‌ಸಿ ಮತ್ತು ಎಸ್‌ಟಿ ಅನುದಾನ ಸದ್ಭಳಕೆ ವಸತಿ ಸೌಲಭ್ಯ ಶೌಚಾಲಯ ನಿರ್ಮಾಣ ಆರೋಗ್ಯ ಕೇಂದ್ರ ಅಭಿವೃದ್ಧಿ ಕೃಷಿ ಹೊಂಡ ಹೈಮಾಸ್ಟ್ ಸೋಲಾರ ಅಳವಡಿಕೆ ಅಂಗವಿಕಲರ ಅನುದಾನ ಬಳಕೆ ದನದ ಕೊಟ್ಟಿಗೆ ಸ್ಮಶಾನ ಅಭಿವೃದ್ಧಿ ನಮ್ಮ ಹೊಲ ನಮ್ಮ ರಸ್ತೆ ಅಭಿವೃದ್ಧಿ ಅಂಗನವಾಡಿ ಕೇಂದ್ರ ಬಲವರ್ಧನೆ ಮೂಲಕ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.