ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿವಾಸಿಗಳಿಗೆ ತಪ್ಪದ ಕಸದ ಚಿಂತೆ

ಎಂಟು, ಐದು ದಿನಗಳಿಗೊಮ್ಮೆ ಬರುವ ಪಾಲಿಕ ಕಸ ಸಂಗ್ರಹ ವಾಹನ
ಪೂರ್ಣಿಮಾ ಗೊಂದೆನಾಯ್ಕರ
Published 22 ಮೇ 2024, 5:55 IST
Last Updated 22 ಮೇ 2024, 5:55 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಸ ಸಂಗ್ರಹವೇ ಸವಾಲಾಗಿದೆ. ಖಾಲಿ ಜಾಗ ಹುಡುಕಿ, ಹೋಗಿ ಕಸ ಎಸೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಾಲಿಕೆಯಿಂದ ಬರುವ ಕಸ ಸಂಗ್ರಹ ವಾಹನ ನಿತ್ಯ ಬಂದರೆ ಅನುಕೂಲ. ಎಲ್ಲೆಂದರಲ್ಲಿ ತ್ಯಾಜ್ಯ ಚೆಲ್ಲುವ ಪ್ರಮೇಯವೇ ಬರಲ್ಲ...

ಹೀಗೆ ಹೇಳಿದವರು ವಿವಿಧ ಬಡಾವಣೆಗಳ ನಿವಾಸಿಗಳು. ಬಡಾವಣೆಗಳಿಗೆ ವಾರಕ್ಕೊಮ್ಮೆ, ಐದು, ಎರಡು ದಿನಕ್ಕೊಮ್ಮೆ ಬರುವ ಪಾಲಿಕೆ ವ್ಯಾಪ್ತಿಯ ಕಸ ಸಂಗ್ರಹ ವಾಹನಗಳ ಬಗ್ಗೆ ನಿವಾಸಿಗಳಿಗೆ ಬೇಸರವಿದೆ. ಜೊತೆಗೆ ಆಕ್ರೋಶವಿದೆ.

ಸಾಯಿನಗರ, ಶ್ರೀನಗರ, ತಾಜನಗರ, ಉಣಕಲ್‌ಗೆ ಎರಡು ದಿನಗಳಿಗೊಮ್ಮೆ ಕಸ ಸಂಗ್ರಹ ವಾಹನಗಳು ಬಂದರೆ, ಗೋಕುಲ ಕೈಗಾರಿಕಾ ಪ್ರದೇಶ, ಶ್ರೇಯಾನಗರ, ವಿನಾಯಕ ನಗರ, ಕಲ್ಲೂರ ಬಡಾವಣೆಗಳಿಗೆ ವಾರಕ್ಕೊಮ್ಮೆ ಕಸ ಸಂಗ್ರಹ ವಾಹನ ಬರುತ್ತದೆ. ಇದರಿಂದ ಈ ಎಲ್ಲಾ ಬಡಾವಣೆ ನಿವಾಸಿಗಳಿಗೆ ಕಸ ಸಂಗ್ರಹವೇ ತಲೆ ನೋವಾಗಿದೆ.

‘ಹಳಸಿದ ಅಡುಗೆ ಐದು ದಿನ ಸಂಗ್ರಹಿಸಿಟ್ಟರೆ ಮನೆ ತುಂಬಾ ಗಬ್ಬು ವಾಸನೆ ಬೀರುತ್ತಿರುತ್ತದೆ. ಎಷ್ಟೋ ಬಾರಿ ಹಾಳಾದ ಅಡುಗೆಯಲ್ಲಿ ಹುಳುಗಳು ಉತ್ಪತ್ತಿಯಾಗಿ ರೋಗ ರುಜಿನಗಳು ಹರಡುವ ಭೀತಿ ಎದುರಿಸುವಂತಾಗಿದೆ. ಖಾಲಿ ಜಾಗ ಹುಡುಕಿಕೊಂಡು ಕಸ ಎಸೆಯಲು ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ. ಪಾಲಿಕೆಯಿಂದ ಬರುವ ಕಸ ಸಂಗ್ರಹದ ವಾಹನ ನಿತ್ಯ ಬಂದರೆ ಅಂದಿನ ತ್ಯಾಜ್ಯ ಅಂದೇ ಹೊರ ಹಾಕುವುದರಿಂದ ಕಸ ಸಂಗ್ರಹದ ತಲೆ ಬಿಸಿ ತಪ್ಪಿದಂತಾಗುತ್ತದೆ’ ಎಂದು ಹೇಳುತ್ತಾರೆ ವಿನಾಯಕ ನಗರದ ನಿವಾಸಿ ಲಕ್ಷ್ಮಿ ಮಿಸ್ಕಿನ.

‘ವಾರಕ್ಕೊಮ್ಮೆ ಪಾಲಿಕೆ ಕಸ ಸಂಗ್ರಹ ವಾಹನ ಬರುತ್ತದೆ. ಇದರಿಂದಾಗಿ ತ್ಯಾಜ್ಯ ನಿರ್ವಹಣೆ ಸಮಸ್ಯೆಯಾಗಿ ಪರಿಣಮಿಸಿದೆ. ಕಸ ಹಾಕು ಡಬ್ಬಿಗಳನ್ನು ಹುಡುಕಿಕೊಂಡು ತೆರಳುವ ಪರಿಸ್ಥಿತಿ ಬಂದೊದಗಿದೆ. ಕಸದ ಡಬ್ಬಿಗಳು ಹತ್ತಿರದಲ್ಲಿ ಇಲ್ಲ. ಲಿಂಗರಾಜ ನಗರ, ಅಕ್ಷಯ ಕಾಲೊನಿಗಳಿಗೆ ತೆರಳುವ ಮಾರ್ಗದ ಪಕ್ಕದಲ್ಲಿ ಡಬ್ಬಿಗಳು ಹಾಕಲಾಗಿದ್ದು, ಅಷ್ಟು ದೂರ ನಿತ್ಯ ತೆರಳಿ ಹಾಕಲು ಕಷ್ಟ ಆಗುತ್ತದೆ. ನಮ್ಮ ಬಡಾವಣೆಗೆ ನಿತ್ಯ ಕಸ ಸಂಗ್ರಹ ವಾಹನ ಬಂದರೆ ಅನುಕೂಲ ಆಗುತ್ತದೆ’ ಎಂದು ಕಲ್ಲೂರ ಬಡಾವಣೆ ನಿವಾಸಿ ಸೌಮ್ಯಾ ಎಸ್‌. ಪಾಟೀಲ ಹೇಳಿದರು.

ವಾರಕ್ಕೊಮ್ಮೆ ಬರುವ ಕಸದ ವಾಹನ ಅಪಾರ್ಟಮೆಂಟ್‌ನ 3, 4ನೇ ಅಂತಸ್ಥಿನಲ್ಲಿರುವ ನಿವಾಸಿಗಳು ಕಸ ತರುವಷ್ಟರಲ್ಲಿ ಕಸದ ವಾಹನ ಮುಂದಿನ ಬೀದಿಗೆ ಹೋಗಿರುತ್ತದೆ. ಅಲ್ಲಿ ಹೋಗಿ ಕಸ ಹಾಕಬೇಕಾಗುತ್ತದೆ. ವಾರಗಟ್ಟಲೆ ಕಸ ಸಂಗ್ರಹಿಸಿಟ್ಟುಕೊಂಡು ವಾಹನ ಬಂದಾಗ ಈ ಸಮಸ್ಯೆಯನ್ನು ಎದುರಿಸುವಂತಾಗಿದೆ ಎಂದು ಹೇಳುತ್ತಾರೆ ಹೆಸರು ಹೇಳಲು ಇಚ್ಚಿಸದ ಶ್ರೇಯಾನಗರದ ನಿವಾಸಿ.

ಪಾಲಿಕೆ ವ್ಯಾಪ್ತಿಯಲ್ಲಿ 216 ಕಸ ಸಂಗ್ರಹ ವಾಹನಗಳು ಇದ್ದು, ಸದ್ಯ 450 ವಾಹನಗಳ ಅಗತ್ಯ ಇದೆ. ಸದ್ಯ 41 ವಾಹನಗಳ ಖರೀದಿ ಆಗಿದ್ದು, ನೋಂದಣಿ ಬಾಕಿ ಇದೆ. ಹೊಸ ವಾಹನಗಳು ಬಂದ ತಕ್ಷಣ ಸಮಸ್ಯೆ ಪರಿಹರಿಸಲಾಗುವುದು. ವಾಹನಗಳನ್ನು ಖರೀದಿಸಿ 6 ರಿಂದ 7 ವರ್ಷ ಆಗಿದ್ದರಿಂದ 10ರಿಂದ 15 ವಾಹನಗಳು ಒಂದಿಲ್ಲೊಂದು ಕಾರಣಕ್ಕೆ ದುರಸ್ತಿಗೊಂಡಿರುತ್ತವೆ. ಆ ಸಮಯದಲ್ಲಿ ಈ ಸಮಸ್ಯೆ ಕಂಡು ಬರುತ್ತವೆ. ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆಯ ಎಕ್ಸಿಕ್ಯೂಟಿವ್ ಎಂಜಿನಿಯರ್‌ ಬಿ.ಎಂ. ಮಲ್ಲಿಕಾರ್ಜುನ ಮಾಹಿತಿ ನೀಡಿದರು.

ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಮಾತನಾಡಿ ನಿತ್ಯ ಕಸ ಸಂಗ್ರಹ ವಾಹನ ಬರುವಂತೆ ಕ್ರಮ ಕೈಗೊಳ್ಳಲಾಗುವುದು.
–ಈಶ್ವರ ಉಳ್ಳಾಗಡ್ಡಿ, ಆಯುಕ್ತ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ
ಐದು ದಿನಕ್ಕೊಮ್ಮೆ ಕಸ ಸಂಗ್ರಹ ವಾಹನ ಬರುವುದರಿಂದ ಮನೆಯಲ್ಲಿ ತ್ಯಾಜ್ಯ ಸಂಗ್ರಹಿಸಿ ಇಟ್ಟುಕೊಳ್ಳಲು ಸಮಸ್ಯೆ ಆಗಿದೆ. ನಿತ್ಯ ವಾಹನ ಬಂದರೆ ಅನುಕೂಲ.
–ಲಕ್ಷ್ಮಿ ಮಿಸ್ಕಿನ, ವಿನಾಯಕ ನಗರ ನಿವಾಸಿ
ನಮ್ಮ ಬಡಾವಣೆಗೆ ಕಸ ಸಂಗ್ರಹ ವಾಹನ ನಿತ್ಯ ಬಂದರೆ ಕಸದ ಡಬ್ಬಿಗಳನ್ನು ಹುಡುಕಿಕೊಂಡು ತೆರಳುವುದು ತಪ್ಪುತ್ತದೆ. 8 ದಿನಕ್ಕೊಮ್ಮೆ ಬರುವುದರಿಂದ ಸಮಸ್ಯೆ ಅನುಭವಿಸುವಂತಾಗಿದೆ.
–ಸೌಮ್ಯಾ ಎಸ್‌. ಪಾಟೀಲ, ಕಲ್ಲೂರ ಲೇಔಟ್‌, ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT