ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನವಮಿಗೆ ಶೋಭಾಯಾತ್ರೆಯ ಮೆರುಗು

ದಶ ದಿಕ್ಕುಗಳಲ್ಲೂ ಮೊಳಗಿದ ‘ಜೈಶ್ರೀರಾಮ್‌’ ಘೋಷಣೆ: ಗಮನ ಸೆಳೆದ ಬೃಹತ್ ಮೂರ್ತಿಗಳು
Last Updated 11 ಏಪ್ರಿಲ್ 2022, 5:47 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಶ್ರೀರಾಮ, ಹನುಮಂತ, ಶಿವಾಜಿ, ಭಗೀರಥ, ಬಸವಣ್ಣನ ಬೃಹತ್‌ ಮೂರ್ತಿಗಳು. ರಾರಾಜಿಸಿದ ಕೇಸರಿ ಧ್ವಜ. ಬಿಸಿಲು–ಮಳೆ ಲೆಕ್ಕಿಸದೆ ಕಣಿದು ಕುಪ್ಪಳಿಸಿದ ಯುವಕರು... ಹುಬ್ಬಳ್ಳಿಯ ಬಾನಿ ಓಣಿಯ ರಸ್ತೆಯಲ್ಲಿ ಭಾನುವಾರ ಶ್ರೀಶಕ್ತಿ ಯುವಕ ಮಂಡಳದಿಂದ ಶ್ರೀರಾಮ ನವಮಿ ಅಂಗವಾಗಿ ನಡೆದ ಶೋಭಾಯಾತ್ರೆ ಹಾಗೂ ರಾಮೋತ್ಸವದಲ್ಲಿ ಕಂಡುಬಂದ ದೃಶ್ಯಗಳಿವು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕೇಸರಿ ಧ್ವಜ ಹಾರಿಸಿ, ‘ಜೈ ಶ್ರೀರಾಮ್‌’ ಘೋಷಣೆ ಕೂಗಿಯಾತ್ರೆಗೆ ಚಾಲನೆ ನೀಡಿದರು. ಆರಂಭದಲ್ಲೇ ಸುರಿದ ಮಳೆಯನ್ನೂ ಲೆಕ್ಕಿಸದೆ ಯಾತ್ರೆ ಮುಂದುವರಿಯಿತು. ಬಣ್ಣಬಣ್ಣದ ಬೆಳಕು ಮತ್ತು ಡಿ.ಜೆ ಸಂಗೀತದ ವೈಭವದಲ್ಲಿ ಸಾವಿರಾರು ಯುವಕರು ಕುಣಿಯುತ್ತಿದ್ದ ದೃಶ್ಯ ಕಣ್ಣಿಗೆ ಹಬ್ಬದಂತಿತ್ತು.

ಎಸ್.ಎಸ್.ಕೆ ಸಮಾಜ ಚಿಂತನ-ಮಂಥನ ಸಮಿತಿಯಿಂದ ಶ್ರೀರಾಮ ನಾಮ ಭಜನೆಯೊಂದಿಗೆ ಶೋಭಾಯಾತ್ರೆ ನಡೆಯಿತು. ಕಮರಿಪೇಟೆಯ ಶ್ರೀರಾಮ ಮಂದಿರದಿಂದ ಆರಂಭವಾದ ಯಾತ್ರೆ ಪುನಃ ಮಂದಿರಕ್ಕೆ ಮರಳಿತು.

ನಂತರ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಶಾಸಕ ಪ್ರಸಾದ ಅಬ್ಬಯ್ಯ, ಪ್ರಕಾಶ ಬುರೆ, ವಾಲಿ ಮಹಾರಾಜರು, ವಿಜಯಾಮಾತಾ, ರಸಜ್ಞದಾಸ, ಕಮರಿಪೇಟೆಯ ಪಂಚ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಮೋತಿಲಾಲಸಾ ಕಬಾಡಿ, ಆರ್‌ಎಸ್‌ಎಸ್‌ ಸಂಚಾಲಕ ಜಯರಾಮ ಬೊಳ್ಳಾಜೆ, ಹನುಮಂತ ಸಾ. ನಿರಂಜನ ಪಾಲ್ಗೊಂಡಿದ್ದರು.

ವಿಶ್ವ ಹಿಂದೂ ಪರಿಷತ್‌: ವಿವಿಧ ದೇಗುಲಗಳಿಗೆ ತೆರಳಿದ ವಿಎಚ್‌ಪಿ ಕಾರ್ಯಕರ್ತರು ಶ್ರೀರಾಮನ ಭಾವಚಿತ್ರವಿಟ್ಟು, ಪೂಜೆ ಸಲ್ಲಿಸಿದರು.

ಶ್ರೀರಾಮನವಮಿಯ ವಿಶೇಷವಾದ ಕೋಸಂಬರಿ ಹಾಗೂ ಪಾನಕ ವಿತರಣೆ ಅಷ್ಟಾಗಿ ಕಂಡುಬರಲಿಲ್ಲ. ಕೋವಿಡ್‌ ಕಾರಣದಿಂದಾಗಿ, ಬಹಳಷ್ಟು ಆಯೋಜಕರು ವಿತರಣೆಗೆ ಮುಂದಾಗಿಲ್ಲ ಎಂಬ ಮಾತುಗಳು ಕೇಳಿಬಂದವು.

ರಾಮಸ್ಮರಣೆಯಲ್ಲಿ ಮಿಂದೆದ್ದ ಭಕ್ತಗಣ

ಹುಬ್ಬಳ್ಳಿಯ ಶ್ರೀರಾಮ, ಹನುಮಂತ, ಮೊದಲಾದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಜರುಗಿತು. ಬಿಸಿಲಿನ ಕಾರಣ ಮಧ್ಯಾಹ್ನ ಅಷ್ಟಾಗಿ ಭಕ್ತರು ದೇಗುಲಗಳಿಗೆ ತೆರಳಲಿಲ್ಲ. ಬೆಳಿಗ್ಗೆ ಹಾಗೂ ಸಂಜೆ ದೇವಸ್ಥಾನಗಳಿಗೆ ಭೇಟಿ ನೀಡಿ, ದೇವರ ದರ್ಶನ ಪಡೆದರು.

ಕಮರಿ ಪೇಟೆಯಲ್ಲಿರುವ ರಾಮಮಂದಿರದಲ್ಲಿ ರಾಮನ ಮೂರ್ತಿಗೆ ಅಭಿಷೇಕ, ಅಲಂಕಾರ, ಮಂಗಳಾರತಿ, ತೊಟ್ಟಿಲೋತ್ಸವ ಕಾರ್ಯಕ್ರಮ ನಡೆಯಿತು. ಗೌಳಿಗಲ್ಲಿಯಲ್ಲಿರುವ ಶ್ರೀರಾಮನ ಮಂದಿರ ಮುಂದೆ ಪ್ರತಿಷ್ಠಾಪಿಸಲಾಗಿದ್ದ ರಾಮನ ಮೂರ್ತಿ ಗಮನ ಸೆಳೆಯಿತು.

ಶಿರೂರ ಪಾರ್ಕ್, ಲಿಂಗರಾಜನಗರ, ಕೇಶ್ವಾಪುರ, ಮರಾಠ ಗಲ್ಲಿ ಮೊದಲಾದೆಡೆ ಇರುವ ಹನುಮಂತ ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಪ್ರಮುಖ ರಸ್ತೆಗಳಲ್ಲಿ ರಾಮನ ಚಿತ್ರವಿಟ್ಟು ಪೂಜಿಸುತ್ತಿದ್ದ ದೃಶ್ಯಗಳು ಅಲ್ಲಲ್ಲಿ ಕಂಡುಬಂದವು.

ಶಿರಡಿ ಸಾಯಿ ಮಂದಿರ: ಹಳೇ ಕೋರ್ಟ್‌ ವೃತ್ತದಲ್ಲಿರುವ ಶಿರಡಿ ಸಾಯಿ ಮಂದಿರದಲ್ಲಿ ರಾಮ ಜನ್ಮೋತ್ಸವ ಜರುಗಿತು. ಪ್ರಮುಖ ಬೀದಿಗಳಲ್ಲಿ ಸಾಯಿ ರಥೋತ್ಸವ ಹಾಗೂ ಭಾವಚಿತ್ರ ಮೆರವಣಿಗೆ, ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಭವಾನಿನಗರದ ಶಿರಡಿ ಸಾಯಿ ಮಂದಿರದಲ್ಲಿ ಅನ್ನಸಂತರ್ಪಣೆ ನಡೆಯಿತು.

ಶ್ರೀಕೃಷ್ಣ ಕಲ್ಯಾಣ ಮಂಟಪ: ದೇಶಪಾಂಡೆನಗರದಲ್ಲಿರುವ ಕೃಷ್ಣ ಕಲ್ಯಾಣ ಮಂಟಪದಲ್ಲಿ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದಿಂದ ಕೃಷ್ಣ ದೇವರ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ರಾಮನವಮಿ ಉತ್ಸವ ನಡೆಯಿತು. ತೊಟ್ಟಿಲೋತ್ಸವ, ಭಜನಾ ಕಾರ್ಯಕ್ರಮ, ರಾಮ ಪಟ್ಟಾಭಿಷೇಕ ಹಾಗೂ ಕಲ್ಯಾಣ, ಭರತನಾಟ್ಯ ಮತ್ತು ಕಥಕ್ ನೃತ್ಯ ಪ್ರದರ್ಶನ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT