ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ವಾರಾಂತ್ಯ ಕರ್ಫ್ಯೂ; ರಸ್ತೆ ಭಣಭಣ, ಕಮಿಷನರ್‌ ಲಾಭೂರಾಮ್‌ ‘ನಗರ ಸಂಚಾರ’

ಹುಬ್ಬಳ್ಳಿಯಲ್ಲಿ ವಾಹನ ಸಂಚಾರ ವಿರಳ
Last Updated 16 ಜನವರಿ 2022, 16:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೋವಿಡ್‌ ನಿಯಂತ್ರಣದ ವಾರಾಂತ್ಯ ಕರ್ಫ್ಯೂವಿನ ಎರಡನೇ ದಿನವಾದ ಭಾನುವಾರ ವಾಣಿಜ್ಯನಗರಿಯ ರಸ್ತೆಗಳೆಲ್ಲ ವಾಹನ, ಜನ ಸಂಚಾರವಿಲ್ಲದೆ ಭಣಗುಡುತ್ತಿದ್ದವು.

ಅಗತ್ಯ ವಸ್ತುಗಳ ಖರೀದಿ, ಆಸ್ಪತ್ರೆ ಸೇರಿದಂತೆ ತುರ್ತು ಕೆಲಸಗಳಿಗೆ ಮಾತ್ರ ಜನರು ಮನೆಯಿಂದ ಹೊರಗೆ ಬಂದಿದ್ದರು. ನಗರದ ಮಾರುಕಟ್ಟೆ ಪ್ರದೇಶಗಳಲ್ಲಿ ಜನ ಮಾಸ್ಕ್‌ ಧರಿಸಿ, ಸುರಕ್ಷಿತ ಅಂತರ ಕಾಯ್ದುಕೊಂಡೇ ಅಗತ್ಯ ವಸ್ತುಗಳನ್ನು ಖರೀದಿಸಿದರು. ಕಿಮ್ಸ್‌, ಚಿಟಗುಪ್ಪಿ ಆಸ್ಪತ್ರೆ, ರೈಲು ನಿಲ್ದಾಣಗಳಲ್ಲಿ ಸಾರ್ವಜನಿಕರಿಗೆ ಲಸಿಕೆ ನೀಡುವುದರ ಜತೆಗೆ, ಕೋವಿಡ್‌ ಪರೀಕ್ಷೆಗಾಗಿ ಕೆಲವರ ಗಂಟಲು ದ್ರವದ ಮಾದರಿ ಸಂಗ್ರಹಿಸಲಾಯಿತು.

ಬಸ್‌ ನಿಲ್ದಾಣ ಖಾಲಿ: ಹೊಸೂರು ಬಸ್‌ ನಿಲ್ದಾಣ, ಗೋಕುಲ ಬಸ್‌ ನಿಲ್ದಾಣ, ಸಿಬಿಟಿ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದ್ದವು. ಉಪನಗರ ಹಾಗೂ ಹುಬ್ಬಳ್ಳಿ–ಧಾರವಾಡ ನಗರದ ನಡುವೆ ಬಸ್‌ಗಳು ಸಂಚರಿಸಿದರೂ ಪ್ರಯಾಣಿಕರ ಸಂಖ್ಯೆಬೆರಳೆಣಿಕೆಯಷ್ಟಿತ್ತು. ‘ಚಿಗರಿ’ ಬಸ್‌ಗಳ ಓಡಾಟವೂ ವಿರಳವಾಗಿತ್ತು. ಆಟೊ ಚಾಲಕರು ಗ್ರಾಹಕರನ್ನು ಎದುರು ನೋಡುತ್ತಿದ್ದುದು ಸಾಮಾನ್ಯವಾಗಿದ್ದವು.

ಕಮಿಷನರ್‌ ಸಂಚಾರ: ಚನ್ನಮ್ಮ ವೃತ್ತ, ಕೇಶ್ವಾಪುರ ವೃತ್ತ, ಹಳೇ ಹುಬ್ಬಳ್ಳಿಯೂ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಪೊಲೀಸರು ಬ್ಯಾರಿಕೇಡ್‌ ಹಾಕಿದ್ದರು. ಪೊಲೀಸ್‌ ಕಮಿಷನರ್‌ ಲಾಭೂರಾಮ್‌ ‘ನಗರ ಸಂಚಾರ’ ನಡೆಸಿ, ಪೊಲೀಸರು ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದರು. ಪೊಲೀಸರಲ್ಲಿ ಕೋವಿಡ್ ಬಾಧಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ಮುಂಜಾಗ್ರತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ‘ಕಮಿಷನರೇಟ್‌ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಪೊಲೀಸ್ ಸಿಬ್ಬಂದಿಯಲ್ಲಿ ಹಲವರಿಗೆ ಕೋವಿಡ್‌ ದೃಢಪಟ್ಟಿದೆ. ಅವರೆಲ್ಲರೂ ಎರಡೂ ಡೋಸ್‌ ಲಸಿಕೆ ಪಡೆದಿದ್ದಾರೆ. ಕೆಲವರು ಬೂಸ್ಟರ್‌ ಡೋಸ್‌ ಕೂಡ ಪಡೆದಿದ್ದಾರೆ. ಲಕ್ಷಣರಹಿತ ಸೋಂಕಿತರೇ ಹೆಚ್ಚಿರುವುದರಿಂದ, ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ವಿವರ ನೀಡಿದರು.

‘ಕೋವಿಡ್‌ ದೃಢಪಟ್ಟ ಸಿಬ್ಬಂದಿ ಜತೆ ವಿಡಿಯೊ ಸಂವಾದ ನಡೆಸಿ, ಅವರಿಗೆ ಹಾಗೂ ಕುಟುಂಬದವರಿಗೆ ಧೈರ್ಯ ತುಂಬಿದ್ದೇವೆ. ಎಲ್ಲರೂ ಆರೋಗ್ಯವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಕೋವಿಡ್‌ ಕರ್ತವ್ಯದಲ್ಲಿ ಸಿಬ್ಬಂದಿ ಕೊರತೆಯಾದರೂ ಉಳಿದವರು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ’ ಎಂದು ತಿಳಿಸಿದರು.

***

ನವನಗರದ ಡಾ. ಬಿ.ಆರ್‌. ಅಂಬೇಡ್ಕರ್ ಭವನದಲ್ಲಿ 45 ಹಾಸಿಗೆಗಳ ಕೋವಿಡ್ ಕಾಳಜಿ ಕೇಂದ್ರ ಆರಂಭಿಸಲಾಗಿದೆ. ಅಗತ್ಯಬಿದ್ದಲ್ಲಿ ಪೊಲೀಸ್‌ ಸಿಬ್ಬಂದಿಗೆ ಅಲ್ಲಿ ಚಿಕಿತ್ಸೆ ನೀಡಲಾಗುವುದು

ಲಾಭೂರಾಮ್‌, ಕಮಿಷನರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT