ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂತಹಂತವಾಗಿ ಹೋಟೆಲ್‌ ಆರಂಭಕ್ಕೆ ನಿರ್ಧಾರ

ವಾಣಿಜ್ಯ ನಗರಿಯಲ್ಲಿ ಚಿಗುರೊಡೆದ ಚಟುವಟಿಕೆ, ಮದ್ಯಕ್ಕೆ ಮುಂದುವರಿದ ಸಾಲು
Last Updated 5 ಮೇ 2020, 17:03 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಲಾಕ್‌ಡೌನ್‌ ಬಳಿಕ ಬಂದ್ ಆಗಿದ್ದ ಹೋಟೆಲ್‌ಗಳನ್ನು ಹಂತಹಂತವಾಗಿ ಹೆಚ್ಚು ಆರಂಭಿಸಿ ಪಾರ್ಸಲ್‌ ಸೌಲಭ್ಯವಷ್ಟೇ ಒದಗಿಸಲು ಹುಬ್ಬಳ್ಳಿ ಹೋಟೆಲ್‌ಗಳ ಸಂಘದವರು ನಿರ್ಧರಿಸಿದ್ದಾರೆ.

ಹೋಟೆಲ್‌ಗಳಲ್ಲಿ ಪಾರ್ಸಲ್‌ ಸೌಲಭ್ಯ ಆರಂಭಿಸಲು ಜಿಲ್ಲಾಡಳಿತ ಅನುಮತಿ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ನಗರದಲ್ಲಿ ಮೂರ್ನಾಲ್ಕು ಹೋಟಲ್‌ಗಳು ಕಾರ್ಯನಿರ್ವಹಿಸಿದವು. ಮೊದಲ ದಿನ ಇಡ್ಲಿ, ಫಲಾವ್‌, ಉಪ್ಪಿಟ್ಟು ಮಾತ್ರ ಮಾಡಲಾಗಿತ್ತು. ಉಪಾಹಾರ ಮತ್ತು ಮಧ್ಯಾಹ್ನದ ಊಟಕ್ಕೆ ಸಹಜವಾಗಿ ಎಂದಿನಂತೆ ಬೇಡಿಕೆ ಕಂಡು ಬಂತು.

‘ಮಂಗಳವಾರ ಕೃಷ್ಣ ಭವನ, ಕರ್ನಾಟಕ ಭವನ ಮತ್ತು ಮಧುರಾ ಕಾಲೊನಿಯಲ್ಲಿ ಆದಿತ್ಯ ಫಾಸ್ಟ್‌ ಫುಡ್ ಸೇರಿದಂತೆ ಕೆಲ ಹೋಟೆಲ್‌ಗಳಷ್ಟೇ ಕಾರ್ಯ ಆರಂಭಿಸಿವೆ. ಸ್ವಚ್ಛತೆಗೆ ಆದ್ಯತೆ ನೀಡಿ ಕೆಲಸ ಮಾಡುವಂತೆ ಹೋಟೆಲ್‌ ಸಿಬ್ಬಂದಿಗೆ ತಿಳಿಸಿದ್ದೇವೆ. ಗ್ರಾಹಕರಿಂದ ಅಂತರ ಕಾಯ್ದುಕೊಳ್ಳಲು ಆದ್ಯತೆ ನೀಡುವಂತೆ ಹೇಳಲಾಗಿದೆ’ ಎಂದು ಸಂಘದ ಗೌರವ ಅಧ್ಯಕ್ಷ ಕೃಷ್ಣಮೂರ್ತಿ ಉಚ್ಚಿಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊದಲ ದಿನ ಕಾರ್ಯನಿರ್ವಹಿಸಿದ ‌ಹೋಟೆಲ್‌ಗಳ ವೈಖರಿಯನ್ನು ಬೇರೆ ಹೋಟೆಲ್‌ಗಳವರು ಬಂದು ನೋಡಿದ್ದಾರೆ. ಅದೇ ರೀತಿ ಅವರೂ ಹೋಟೆಲ್‌ಗಳನ್ನು ಆರಂಭಿಸುತ್ತಾರೆ. ದಿನದಿಂದ ದಿನಕ್ಕೆ ಹೋಟೆಲ್‌ಗಳನ್ನು ಪುನರಾರಂಭಿಸುವ ಸಂಖ್ಯೆ ಹೆಚ್ಚಿಸಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

ಚಿಗುರಿದ ಚಟುವಟಿಕೆ

ಮಳಿಗೆಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಕೊಟ್ಟ ಬಳಿಕ ಎರಡನೇ ದಿನವಾದ ಮಂಗಳವಾರವೂ ಜೋರು ವ್ಯಾಪಾರ ನಡೆಯಿತು. ಬೈರಿದೇವರಕೊಪ್ಪ, ಶಿರೂರು ಪಾರ್ಕ್‌, ಕ್ಲಬ್‌ ರಸ್ತೆ ಹೀಗೆ ಪ್ರಮುಖ ಪ್ರದೇಶಗಳಲ್ಲಿ ಮದ್ಯ ಖರೀದಿಸಲು ಗ್ರಾಹಕರು ಸರತಿ ಸಾಲಿನಲ್ಲಿ ನಿಂತಿದ್ದ ಚಿತ್ರಣ ಕಂಡು ಬಂತು.

ಮದ್ಯ ಮಾರಾಟದ ಅಂಗಡಿಗಳು ತೆರೆಯುವ ಮುನ್ನವೇ ಗ್ರಾಹಕರು ಸರತಿಯಲ್ಲಿ ನಿಂತಿದ್ದರೂ, ಬಹಳಷ್ಟು ಜನ ಮಾಸ್ಕ್‌ ಧರಿಸಿರಲಿಲ್ಲ. ಅಂತರ ಕೂಡ ಕಾಯ್ದುಕೊಂಡಿರಲಿಲ್ಲ. ಪೊಲೀಸರು ಎಚ್ಚರಿಸುತ್ತಿದ್ದಂತೆ ಕೆಲವರು ಅಲ್ಲಿಂದ ಓಡಿ ಹೋದರು. ಪಿಂಟೊ ಸರ್ಕಲ್‌ ಸಮೀಪದ ಬಕಾರ್ಡಿ ಮಳಿಗೆ ಮುಂದೆ ‘ಗ್ರಾಹಕರು ಮಳಿಗೆ ಪ್ರವೇಶಿಸುವ ಮೊದಲು ಕೈಗಳಿಗೆ ಸ್ಯಾನಿಟೈಸರ್‌ ಹಚ್ಚಿಕೊಂಡಿರಬೇಕು’ ಎಂದು ಫಲಕ ಅಳವಡಿಸಿದ್ದರೂ ಬಹುತೇಕರು ಅದನ್ನು ನೋಡಿಯೂ ನೋಡದಂತೆ ಅಂಗಡಿಯೊಳಗೆ ಹೋದರು!

ಕಂಟೈನ್ಮೆಂಟ್ ಪ್ರದೇಶಗಳು ಹೊರತುಪಡಿಸಿ ಉಳಿದ ಕಡೆ ಬಹುತೇಕ ಅಂಗಡಿಗಳು ತೆರೆದಿದ್ದವು. ಇದರಿಂದ ಜನ ಸಂಚಾರ ಕೂಡ ಹೆಚ್ಚಳವಾಗಿತ್ತು. ಲಾಕ್‌ಡೌನ್‌ನಿಂದ ನಗರದಲ್ಲಿ ಉಳಿದುಕೊಂಡಿದ್ದ ವಲಸೆ ಕಾರ್ಮಿಕರು, ಯಾತ್ರಿಗಳು, ಪ್ರವಾಸಿಗರು ಮತ್ತು ವಿದ್ಯಾರ್ಥಿಗಳು ಮಂಗಳವಾರ ಹೊಸ ಬಸ್‌ ನಿಲ್ದಾಣಗಳಿಂದ ಊರುಗಳಿಗೆ ತೆರಳಿದರು. ಒಟ್ಟು 20 ಬಸ್‌ಗಳು ಇಲ್ಲಿಂದ ಸಂಚರಿಸಿದವು.

ಮಾಸ್ಕ್ ಧರಿಸದೇ ಓಡಾಟ: ₹21,700 ದಂಡ

ಅವಳಿ ನಗರದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾಸ್ಕ್‌ ಧರಿಸದೇ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದವರಿಗೆ ಮಂಗಳವಾರ ₹21,700 ದಂಡ ವಿಧಿಸಲಾಗಿದೆ.

ಕೊರೊನಾ ಸೋಂಕು ಹರಡದಂತೆ ತಡೆಯಲು ಎಲ್ಲೆಂದರಲ್ಲಿ ಉಗುಳುವುದು ಮತ್ತು ಮಾಸ್ಕ್‌ ಧರಿಸದೇ ಅಡ್ಡಾಡುವುದನ್ನು ಸರ್ಕಾರ ನಿಷೇಧಿಸಿದೆ. ಈ ನಿಯಮ ಉಲ್ಲಂಘಿಸಿದವರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತಿದೆ. ಇದುವರೆಗೂ ಒಟ್ಟು ₹29,900 ದಂಡ ಹಾಕಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT