ಶನಿವಾರ, ಏಪ್ರಿಲ್ 17, 2021
31 °C

ಮಾದರಿ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಅನುದಾನ: ಬಸವರಾಜ ಹೊರಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಂದಾಜು ತಲಾ ₹20 ಲಕ್ಷ ವೆಚ್ಚದಲ್ಲಿ ಮಾದರಿ ಕಿರು ಬಸ್‌ ನಿಲ್ದಾಣಗಳನ್ನು ನಿರ್ಮಿಸಲು ಅನುದಾನ ಕೊಡುತ್ತೇನೆ ಎಂದು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ನಗರದಲ್ಲಿ ಶನಿವಾರ 18 ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸಿ ಮಾಧ್ಯಮದವರ ಜೊತೆ ಮಾತನಾಡಿದ ಅವರು ‘ಹೆಚ್ಚು ಜನಸಂದಣಿ ಇರುವ ಸ್ಥಳದಲ್ಲಿ ಸುಸಜ್ಜಿತ ಬಸ್ ನಿಲ್ದಾಣಗಳನ್ನು ನಿರ್ಮಿಸಲು ಯೋಜನೆ ರೂಪಿಸುವಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ಅವರಿಗೆ ಸೂಚಿಸಿದ್ದೇನೆ. ಮೂರ್ನಾಲ್ಕು ದಿನಗಳಲ್ಲಿ ಯೋಜನೆ ರೂಪಿಸುವುದಾಗಿ ತಿಳಿಸಿದ್ದಾರೆ. ವಿನ್ಯಾಸದಲ್ಲಿ ಅನುಭವಿಗಳನ್ನು ಒಳಗೊಂಡ ತಂಡದಿಂದ ನಾನೂ ಮಾಹಿತಿ ತರಿಸಿಕೊಳ್ಳುತ್ತೇನೆ. ಉಳಿದ ಜಿಲ್ಲೆಗಳಲ್ಲಿ ತಲಾ ಒಂದು ಮತ್ತು ಧಾರವಾಡ ಜಿಲ್ಲೆಯಲ್ಲಿ ಎರಡು ಬಸ್‌ ನಿಲ್ದಾಣ ನಿರ್ಮಿಸಲಾಗುತ್ತದೆ’ ಎಂದರು.

‘ಅಂಗವಿಕಲರಿಗೆ ವಾಹನಗಳನ್ನು ಒದಗಿಸಲು ಸೀಮಿತ ಅನುದಾನ ಎನ್ನುವ ನಿಯಮವಿದೆ. ಆದರೆ, ನನ್ನ ವ್ಯಾಪ್ತಿಯ ಜಿಲ್ಲೆಗಳಲ್ಲಿ ಮನವಿ ಕೊಟ್ಟ ಎಲ್ಲ ಅಂಗವಿಕಲರಿಗೂ ವಾಹನಗಳನ್ನು ಕೊಟ್ಟಿದ್ದೇನೆ. ವರ್ಷಕ್ಕೊಮ್ಮೆ ಸರ್ಕಾರ ನೀಡುವ ₹2 ಕೋಟಿ ಅನುದಾನದಲ್ಲಿ ಶೇ 94ರಷ್ಟು ಹಣವನ್ನು ಶಾಲೆಗಳ ಅಭಿವೃದ್ಧಿಗೆ ನೀಡಿದ್ದೇನೆ’ ಎಂದರು.

‘ಶಾಲೆಗಳ ಅಭಿವೃದ್ಧಿಗೆ ಹಣ ಕೊಟ್ಟರೆ ಅನೇಕ ಆಡಳಿತ ಮಂಡಳಿಗಳು ಅದನ್ನು ದುರುಪಯೋಗ ಮಾಡಿಸಿಕೊಂಡಿವೆ. ಆದ್ದರಿಂದ ಹಣ ನೀಡಿದ ಪ್ರತಿಯೊಬ್ಬರಿಂದಲೂ ವರದಿ ತರಿಸಿಕೊಳ್ಳುತ್ತಿದ್ದೇನೆ’ ಎಂದರು.

‘ಬೆಳಗಾವಿಯಲ್ಲಿ ಪ್ರತಿವರ್ಷ ಅಧಿವೇಶನ ನಡೆಯಲಿ’

ಮಹಾರಾಷ್ಟ್ರದ ಮಾದರಿಯಲ್ಲಿಯೇ ಬೆಳಗಾವಿಯಲ್ಲಿ ಪ್ರತಿ ವರ್ಷ ಅಧಿವೇಶನ ನಡೆಸಬೇಕು ಎಂದು ಬಸವರಾಜ ಹೊರಟ್ಟಿ ಹೇಳಿದರು.

ಸಭಾಪತಿ ಮತ್ತು ಸಭಾಧ್ಯಕ್ಷ ಇಬ್ಬರೂ ಉತ್ತರ ಕರ್ನಾಟಕದವರೇ ಇದ್ದೇವೆ. ಹೀಗಾಗಿ ಈ ವರ್ಷ ಬೆಳಗಾವಿಯಲ್ಲಿ ಅಧಿವೇಶನ ನಡೆಸುವಂತೆ ಮುಖ್ಯಮಂತ್ರಿಯವರನ್ನು ಒತ್ತಾಯಿಸಲಾಗುವುದು. ಮಹಾರಾಷ್ಟ್ರದಲ್ಲಿ ಪ್ರತಿ ವರ್ಷ ಹೇಗೆ ನಾಗಪುರದಲ್ಲಿಯೂ ಅಧಿವೇಶನ ನಡೆಸಲಾಗುತ್ತಿದೆ ಎನ್ನುವುದನ್ನು ನೋಡಿಕೊಂಡು ಬರಲು ಅಲ್ಲಿಗೆ ಹೋಗಿಬರುವ ವಿಚಾರವೂ ಇದೆ ಎಂದರು.

ಸರ್ಕಾರ ಆಗಾಗ್ಗೆ ಸಮಿತಿಗಳನ್ನು ರಚನೆ ಮಾಡುತ್ತವೆ. ಆ ಸಮಿತಿಗಳು ಕೊಟ್ಟ ವರದಿ ಅನುಷ್ಠಾನಕ್ಕೆ ಬಂದಿದೆಯೇ, ವರದಿ ನೀಡಿವೆಯೇ ಎನ್ನುವುದರ ಬಗ್ಗೆ ಮಾಹಿತಿ ಪಡೆಯಲಾಗುವುದು ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು