ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ: ಬಿರುಕುಬಿಟ್ಟ ಚಿತಾಗಾರ ಕಟ್ಟಡ; ಸ್ಮಶಾನ ಕಾರ್ಮಿಕರಿಗಿಲ್ಲ ಆಸರೆ

ಕೆಟ್ಟು ನಿಂತ ವಿದ್ಯುತ್ ದೀಪ
Published 28 ಜೂನ್ 2024, 4:49 IST
Last Updated 28 ಜೂನ್ 2024, 4:49 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಹದಿನೇಳು ವರ್ಷದಿಂದ ಇದೇ ಸ್ಮಶಾನ ಭೂಮಿ ನಂಬಿ ಬದುಕು ಸಾಗಿಸ್ತಾ ಇದ್ದೀನಿ. ಶವ ಎತ್ತುವುದು, ಹೂಳುವುದು, ಸುಡುವುದು, ಮುಚ್ಚುವುದು, ಕಾಯುವುದು ಇದೇ ನಮ್ಮ ಕೆಲಸ. ಇದಕ್ಕೆ ಹೊತ್ತು-ಗೊತ್ತು ಇಲ್ಲದ ಕಾರಣ ಬೇರೆ ಕೆಲಸ ಮಾಡಲೂ ಆಗುತ್ತಿಲ್ಲ. ನಿತ್ಯ ಶವಗಳ ಜೊತೆ ಜೀವನ. ಹೆಣ ಬಂದ್ರೆ ಹಣ. ಇಲ್ಲದಿದ್ರೆ ಇಲ್ಲ. ಸರ್ಕಾರದಿಂದ ಸಂಬಳವೂ ಇಲ್ಲ, ಸಹಾಯವೂ ಇಲ್ಲ..’

ಹೀಗೆ ‘ಪ್ರಜಾವಾಣಿ’ ಜೊತೆ ತಮ್ಮ ಅಳಲು ತೋಡಿಕೊಂಡವರು ಇಲ್ಲಿನ ವಿದ್ಯಾನಗರದಲ್ಲಿರುವ ಉಣಕಲ್ ರುದ್ರಭೂಮಿಯ ಕಾರ್ಮಿಕ ಪರಶುರಾಮ ಚಲವಾದಿ.

ವಾರಸುದಾರಿಕೆಯಿಂದ ಬಂದ ಕೆಲಸವನ್ನೇ ಮುಂದುವರಿಸಿಕೊಂಡು ಬಂದ ಅವರಿಗೆ ಸರ್ಕಾರದ ಸಂಬಳ, ಸಹಾಯಧನ, ಸೌಲಭ್ಯ ಯಾವುದೂ ಇಲ್ಲ. ಸ್ಮಶಾನ ಭೂಮಿಯ ಸ್ವಚ್ಛತೆ ಮತ್ತು ಭದ್ರತೆಗೂ ಮಹಾನಗರ ಪಾಲಿಕೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅಂತ್ಯಸಂಸ್ಕಾರದ ನಂತರ ಕುಟುಂಬದವರು ಕೊಡುವ ಹಣದಿಂದಲೇ ಕಟ್ಟಿಗೆ ತರಬೇಕು, ಕುಣಿ ತೆಗೆಯುವ ಜೆಸಿಬಿಗೆ ಬಾಡಿಗೆ ಕಟ್ಟಬೇಕು, ರುದ್ರಭೂಮಿಯನ್ನು ಸ್ವಚ್ಛವಾಗಿಡಬೇಕು, ಇಲ್ಲಿ ಕೆಲಸ ಮಾಡುವ ಮೂವರು ಕಾರ್ಮಿಕರ ಕುಟುಂಬ ಸಾಗಬೇಕು...

ಒಟ್ಟು 16 ಎಕರೆಯಲ್ಲಿದ್ದ ಉಣಕಲ್ ರುದ್ರಭೂಮಿ ಒತ್ತುವರಿಯಿಂದಾಗಿ ಈಗ 12 ಎಕರೆ ಉಳಿದುಕೊಂಡಿದೆ. ಇದು ಉಣಕಲ್‌ಗೆ ಸೇರಿದ ರುದ್ರಭೂಮಿಯಾಗಿದ್ದರೂ, ಉಣಕಲ್ ಜನರಷ್ಟೇ ಅಲ್ಲದೇ ವಿದ್ಯಾನಗರ, ದೇಶಪಾಂಡೆನಗರ, ಹೊಸೂರು, ಲಿಂಗರಾಜನಗರ, ಶಿರೂರಪಾರ್ಕ್ ಸುತ್ತಲಿನ ನಿವಾಸಿಗಳು ಇಲ್ಲಿಯೇ ಅಂತ್ಯಸಂಸ್ಕಾರ ಮಾಡುತ್ತಾರೆ. ಮುಸ್ಲಿಂ ಮತ್ತು ಮಾದಿಗ ಸಮುದಾಯ ಹೊರತುಪಡಿಸಿದರೇ ಉಳಿದೆಲ್ಲ ಸಮುದಾಯದವರೂ ಇಲ್ಲಿಗೆ ಅಂತ್ಯಸಂಸ್ಕಾರಕ್ಕೆ ಬರುತ್ತಾರೆ. ಕೆಲ ಸಮುದಾಯದವರು ಅಗ್ನಿಸ್ಪರ್ಶ ಮೂಲಕ ಅಂತ್ಯಸಂಸ್ಕಾರ ಮಾಡಿದರೆ, ಇನ್ನೂ ಕೆಲವರು ಹೂಳುತ್ತಾರೆ.

‘ಅಗ್ನಿಸ್ಪರ್ಶದ ಮೂಲಕ ಅಂತ್ಯಸಂಸ್ಕಾರ ಮಾಡುವವರಿಂದ ₹4 ಸಾವಿರ ತೆಗೆದುಕೊಳ್ಳುತ್ತೇವೆ. ಅದರಲ್ಲಿ ಕಟ್ಟಿಗೆಗೆ, ವಾಹನ ಬಾಡಿಗೆ ತೆಗೆದು ಉಳಿದ ಹಣವನ್ನು ಮೂವರು ಹಂಚಿಕೊಳ್ಳುತ್ತೇವೆ. ಕುಣಿ ತೆಗೆದು ಭೂಮಿಯಲ್ಲಿ ಹೂಳಲು ₹5 ಸಾವಿರ ಪಡೆಯುತ್ತೇವೆ. ಅದರಲ್ಲಿ ಕುಣಿ ತೆಗೆಯುವ ಜೆಸಿಬಿ ಬಾಡಿಗೆ ₹3,200, ಚಾಲಕನ ಬಾಡಿಗೆ ತೆಗೆದರೆ ₹1,500ರಿಂದ ₹1,000 ವರೆಗೆ ಉಳಿಯುತ್ತದೆ. ರುದ್ರಭೂಮಿ ಸ್ವಚ್ಛಗೊಳಿಸಲು ₹200 ಪ್ರತ್ಯೇಕವಾಗಿ ತೆಗೆದುಕೊಳ್ಳುತ್ತೇವೆ’ ಎನ್ನುತ್ತಾರೆ ಪರಶುರಾಮ.

‘ಹಣ ಇಲ್ಲ ಅಂತ ಹೆಣ ಬರಲಿ ಅಂತ ಬಯಸಲು ಮನಸ್ಸು ಒಪ್ಪಲ್ಲ. ಕೆಲವೊಮ್ಮೆ ಅಂತ್ಯಸಂಸ್ಕಾರ ಮಾಡಲು ಬಂದ ಜನರ ಬಳಿ, ಕಟ್ಟಿಗೆಗೆ ನೀಡಬೇಕಾದ ಹಣ ಸಹ ಇರುವುದಿಲ್ಲ. ಆಗ, ಕೊಟ್ಟಷ್ಟು ಪಡೆಯುತ್ತೇವೆ. ನಮ್ಮ ಕೈಯಿಂದಲೇ ಹಣ ಹಾಕಿ ಅಂತ್ಯಕ್ರಿಯೆ ನಡೆಸುತ್ತೇವೆ. ಕೆಲವರಿಗೆ ನಾವೇ ದುಡ್ಡು ಕೊಟ್ಟು ಕಳುಹಿಸಿದ ನಿದರ್ಶನಗಳೂ ಇವೆ. ದಿನ ಶವಗಳನ್ನು ನೋಡಿ ಮನಸ್ಸು ಕಲ್ಲಾಗಿದೆ. ಅಪಘಾತವಾದ, ಕೊಳೆತ ಶವಗಳೂ ಬರುತ್ತವೆ. ಕೋವಿಡ್ ಸಮಯದಲ್ಲಿ 17 ಸಾವಿರಕ್ಕೂ ಹೆಚ್ಚು ಅಂತ್ಯಸಂಸ್ಕಾರ ಮಾಡಿದ್ದೇವೆ. ನಮ್ಮನ್ನು ಮಹಾನಗರ ಪಾಲಿಕೆ ಸ್ಮಶಾನ ಕಾರ್ಮಿಕರೆಂದು ನೇಮಕ ಮಾಡಿಕೊಳ್ಳುವಂತೆ ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ. ಆದರೂ ಪ್ರಯೋಜನವಾಗಿಲ್ಲ’ ಎಂದು ಸ್ಮಶಾನ ಕಾರ್ಮಿಕ ಗದಿಗೆಪ್ಪ ದೊಡ್ಡಮನಿ ಬೇಸರ ವ್ಯಕ್ತಪಡಿಸಿದರು.

ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಉಣಕಲ್ ರುದ್ರಭೂಮಿಯ ಚಿತಾಗಾರ
ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಉಣಕಲ್ ರುದ್ರಭೂಮಿಯ ಚಿತಾಗಾರ
ತಿಂಗಳಿಗೆ 25ರಿಂದ 35 ಶವಗಳು ಬರುತ್ತವೆ. ಕೆಲವೊಮ್ಮೆ ಎರಡು- ಮೂರು ದಿನವಾದರೂ ಒಂದು ಶವವೂ ಬರುವುದಿಲ್ಲ. ಆಗ ಜೀವನ ನಡೆಸುವುದು ಕಷ್ಟವಾಗುತ್ತದೆ. ಈ ಕೆಲಸಕ್ಕೆ ರಾತ್ರಿ- ಹಗಲು ಎನ್ನುವ ವ್ಯತ್ಯಾಸ ಇಲ್ಲ
ಗದಿಗೆಪ್ಪ ದೊಡ್ಡಮನಿ ಸ್ಮಶಾನ ಕಾರ್ಮಿಕ

ಮೂಲ ಸೌಲಭ್ಯಗಳೇ ಇಲ್ಲ....

ಈ ರುದ್ರಭೂಮಿಗೆ ವಿದ್ಯುತ್‌ ದೀಪ ಕುಡಿಯುವ ನೀರು ಕಾವಲುಗಾರ ತ್ಯಾಜ್ಯ ವಿಲೇವಾರಿ ಸೇರಿದಂತೆ ಮಹಾನಗರ ಪಾಲಿಕೆ ಯಾವೊಂದು ಮೂಲ ಸೌಕರ್ಯವನ್ನು ಒದಗಿಸಿಲ್ಲ. ಹೈಮಾಸ್ಟ್‌ ದೀಪ ಹಾಳಾಗಿದೆ. ರಾತ್ರಿ ಹೊತ್ತು ಅಂತ್ಯಸಂಸ್ಕಾರ ಮಾಡುವಾಗ ತೊಂದರೆಯಾಗುತ್ತದೆ. ಕುಳಿತುಕೊಳ್ಳುವ ಆಸನಗಳು ಮುರಿದಿವೆ. ಚಿತಾಗಾರ ಕಟ್ಟಡ ಬಿರುಕು ಬಿಟ್ಟಿದೆ. ಸ್ವಂತ ಖರ್ಚಿನಲ್ಲಿ ಕಾರ್ಮಿಕರು ನೀರಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಸ್ಮಶಾನ ಭೂಮಿಯ ಸುತ್ತೆಲ್ಲ ಕಸಗಳ ರಾಶಿ. ಅಂತ್ಯಸಂಸ್ಕಾರದ ನಂತರ ಶವದ ಜೊತೆ ತಂದ ಬಟ್ಟೆ ಗಾದಿ ಹೂವು- ಹಾರವನ್ನೆಲ್ಲ ಅಲ್ಲಿಯೇ ಬಿಸಾಡಿ ಹೋಗುತ್ತಾರೆ. ಪಾಲಿಕೆಯ ಕಸದ ವಾಹನಗಳು ಅಲ್ಲಿನ ತ್ಯಾಜ್ಯ ಸಂಗ್ರಹಕ್ಕೂ ಬರುತ್ತಿಲ್ಲ.

‘ನೇಮಕಾತಿಗೆ ಕ್ರಮ’

ಕಾರಣಾಂತರಗಳಿಂದ ಈವರೆಗೆ ಸ್ಮಶಾನ ಕಾರ್ಮಿಕರ ನೇಮಕಾತಿ ಆಗಿರಲಿಲ್ಲ. ಕೆಎಂಸಿ ಕಾಯ್ದೆ ಅಡಿ ಅವರನ್ನು ನೇಮಕ ಮಾಡಿಕೊಳ್ಳಲು ಅವಕಾಶವಿದೆ. ವಲಯಾಧಿಕಾರಿಗಳಿಂದ ಸ್ಮಶಾನಗಳ ಮಾಹಿತಿ ಪಡೆದು ಎಷ್ಟು ಕಾರ್ಮಿಕರ ಅಗತ್ಯವಿದೆ ಎಂದು ಪರಿಶೀಲನೆ ನಡೆಸಲಾಗುವುದು. ಮುಂದಿನ ಪಾಲಿಕೆ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾವಿಸಿ ಅವರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT