ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇರಣೆಯಾದ ಗುರುವಿಗೆ ಭಕ್ತಿಭಾವದ ನಮನ

Last Updated 16 ಜುಲೈ 2019, 19:45 IST
ಅಕ್ಷರ ಗಾತ್ರ

ಧಾರವಾಡ: ಆಷಾಢ ಪೂರ್ಣಿಮೆ ದಿನದಂದು ಆಚರಿಸಲಾಗುವ ಗುರುಪೂರ್ಣಿಮೆಯ ಸಂದರ್ಭದಲ್ಲಿ ಬದುಕಿಗೆ ಪ್ರೇರಣೆಯಾದ ಗುರುವಿಗೆ ನಮನ ಸಲ್ಲಿಸುವ ವಿಶೇಷ ಕಾರ್ಯಕ್ರಮ ನಗರದಲ್ಲಿ ಮಂಗಳವಾರ ಜರುಗಿತು.

ಇದರ ಅಂಗವಾಗಿ ನಗರದ ದೇವಾಲಯಗಳು, ಶಾಲಾ ಕಾಲೇಜುಗಳು, ಯೋಗ ಕೇಂದ್ರಗಳಲ್ಲಿ ಗುರಪೂರ್ಣಿಮೆಯನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಇಲ್ಲಿನ ಕೆಲಗೇರಿ ರಸ್ತೆಯಲ್ಲಿರುವ ಸಾಯಿಬಾಬಾ ಮಂದಿರದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥೆಯ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಆಯೋಜಿಸಲಾಗಿತ್ತು. ಬೆಳಿಗ್ಗೆ 5ರಿಂದಲೇ ಭಕ್ತರು ಸರತಿಸಾಲಿನಲ್ಲಿ ನಿಂತು ಬಾಬಾ ಅವರ ದರ್ಶನ ಪಡೆದರು. ಮುಂಜಾನೆಯ ಕಾಕಡಾರತಿ, ಅಭಿಷೇಕ, ನೈವೇದ್ಯ ನೆರವೇರಿತು. ಸಾಯಿಬಾಬಾ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಗುರುಪೂರ್ಣಿಮೆ ನಿಮಿತ್ತ ಹೆಸರಾಂತ ಭಜನ್ ಗಾಯಕ ಶಿರಡಿಯ ಪಾರಸ್‌ಜೈನ್‌ ಅವರಿಂದ ಕಛೇರಿ ಆಯೋಜಿಸಲಾಗಿತ್ತು.ಜೈ ಜೈ ಸಾಯಿ ರಾಮ, ಬೋಲೋ ಸಾಯಿ ರಾಮ, ಕರುಣಾ ಭರಿ, ಸಂಕಟ ಹರಿ, ಸಾಯಿ ರಾಮ ಗಾಯನಕ್ಕೆ ತಲೆದೂಗಿ ಚಪ್ಪಾಳೆ ತಟ್ಟಿದ ಜನರು ಭಕ್ತಿಭಾವದಲ್ಲಿ ಮಿಂದೆದ್ದರು.

ಭಜನೆಗೆ ಲಕ್ನೋದ ಪೂಜಾ ಮಿಶ್ರಾ, ಶಿರಡಿಯ ರಾಹುಲ್ ಸಿಸೋಡಿಯಾ, ಕಿಶೋರ್ ಕಾಕ್ರೆ, ಬಿಲ್ಲು ಸಚ್ಚಿದೇವ ಅವರು ಸಾಥ್ ನೀಡಿದರು. ಅವರು ಕೂಡ ಬಾಬಾನ ಕುರಿತು ಹಲವು ಸುಶ್ರಾವ್ಯ ಹಾಡುಗಳನ್ನು ಪ್ರಸ್ತುತಪಡಿಸಿ ನೆರೆದ ಸದ್ಭಕ್ತರನ್ನು ಕುಣಿದು ಕುಪ್ಪಳಿಸುವಂತೆ ಮಾಡುವ ಮೂಲಕ ಎಲ್ಲನ ಗಮನ ಸೆಳೆದದ್ದು ವಿಶೇಷವಾಗಿತ್ತು.

ಸಂಸ್ಥೆಯ ಅಧ್ಯಕ್ಷ ಮಹೇಶ ಶೆಟ್ಟಿ, ಕಾರ್ಯದರ್ಶಿ ಗುರುಪಾದಯ್ಯ ಹೊಂಗಲ್ ಮಠ, ಉಪಾಧ್ಯಕ್ಷ ಉದಯ ಶೆಟ್ಟಿ, ಖಜಾಂಚಿ ಕಿರಣ ಶಹಾ, ಉಪಕಾರ್ಯದರ್ಶಿ ನಾರಾಯಣ ಕದಂ, ಸಮಿತಿ ಸದಸ್ಯರಾದ ಟಿ.ಟಿ. ಚವ್ಹಾಣ, ಭಾಸ್ಕರ್ ರಾಯ್ಕರ್, ಸದಸ್ಯರಾದ ಸಂತೋಷ ಮಹಾಲೆ ಇದ್ದರು.

ಇಲ್ಲಿನ ಮಾರುಕಟ್ಟೆ ಪ್ರದೇಶದಲ್ಲಿರುವ ಐತಿಹಾಸಿಕ ದತ್ತಾತ್ರೇಯ ದೇವಸ್ಥಾನದಲ್ಲಿ ದತ್ತಮೂರ್ತಿಗೆ ವಿಶೇಷ ಅಲಂಕಾರ ಹಾಗೂ ಪೂಜೆ ನೆರವೇರಿತು. ದೇವರಿಗೆ ಪುಷ್ಪ, ಹಣ್ಣು, ಕಾಯಿ ನೀಡಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.

ಇದೇ ರೀತಿಯಲ್ಲಿ ನಗರದ ಗಾಂಧಿನಗರದಲ್ಲಿರುವ ಸಾಯಿಬಾಬಾ ದೇವಸ್ಥಾನ, ಆಕಾಶವಾಣಿ ಬಳಿಯ ಬಾಬಾ ಮಂದಿರ ಸೇರಿದಂತೆ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿತು.

ನಗರದ ಮರಾಠಾ ಕಾಲೊನಿಯಲ್ಲಿರುವ ಯೋಗಮಯಂ ಯೋಗ ಸಾಧನ ಕೇಂದ್ರದಲ್ಲಿ ಶಿಬಿರಾರ್ಥಿಗಳು ಪತಂಜಲಿ ಮಹರ್ಷಿಗೆ ವಿಶೇಷ ಪೂಜೆ ಸಲ್ಲಿಸಿದರು. ಜತೆಗೆ ಬಿ.ಕೆ.ಎಸ್.ಅಯ್ಯಂಗಾರ್ ಅವರಿಗೂ ನಮನ ಸಲ್ಲಿಸಿದರು.

ನಗರದ ಜೆಎಸ್‌ಎಸ್‌ ಮಂಜುನಾಥೇಶ್ವರ ಸಿಬಿಎಸ್‌ಇ ಶಾಲೆಯಲ್ಲಿ ಗುರುಪೂರ್ಣಿಮೆ ನಿಮಿತ್ತ ಸಾಕ್ಷಾತ್ ಗುರುಕುಲವನ್ನೇ ವಿದ್ಯಾರ್ಥಿಗಳು ಸೃಷ್ಟಿಸಿದ್ದರು. ಪ್ರಾಚೀನ ಕಾಲದಲ್ಲಿ ಗುರುಕುಲದ ಮಾದರಿಯಲ್ಲಿ ಕುಟೀರಗಳು, ಅಲ್ಲಿನ ಜೀವನ ನೆನಪಿಸುವ ಪ್ರಾತ್ಯಕ್ಷಿಕೆಗಳು ಗಮನ ಸೆಳೆದವು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ವಿತ್ತಾಧಿಕಾರಿ ಡಾ. ಅಜಿತ ಪ್ರಸಾದ, ‘ಇತ್ತಿಚಿಗೆ ದಿನಗಳಲ್ಲಿ ಗರು ಶಿಷ್ಯರ ಸಂಬಂಧಗಳು ಕದಡಿ ಹೋಗುತ್ತಿದ್ದು ಆಧುನಿಕ ಯುಗದಲ್ಲಿ ಶಿಕ್ಷಕರಿಲ್ಲದೇ ತಂತ್ರಜ್ಞಾನದ ಮುಖಾಂತರ ಜ್ಞಾನ ಸಂಪಾದನೆ ಸಾಧ್ಯವಾಗಿದೆ. ಆದರೆ ವಿದ್ಯಾಥಿಗಳಿಗೆ ತಾಳ್ಮೆ, ಸಹನೆ, ಭಕ್ತಿ, ಗೌರವ ಇವುಗಳನ್ನು ಪಡೆಯಲು ಸಾದ್ಯವಾಗುತ್ತಿಲ್ಲ. ಇಂದು ಬೆರಳ ತುದಿಯಲ್ಲೇ ಸಮಗ್ರ ಜ್ಞಾನದ ಕಣಜವಿದ್ದರೂ, ಮಾದಕ ವಸ್ತುಗಳ ಸೇವನೆ ಹಾಗೂ ಇನ್ನಿತರ ಮನಸ್ಸು ಕದಡುವ ವಸ್ತುಗಳಿಂದ ವಿದ್ಯಾರ್ಥಿಗಳು ಬದುಕು ನಾಶ ಮಾಡಿಕೊಳ್ಳುತ್ತಿದ್ದಾರೆ. ಇವೆಲ್ಲದರಿಂದ ಹೊರಬರಲು ಗುರುವಿನ ಮಾರ್ಗದರ್ಶನ ಅಗತ್ಯ’ ಎಂದರು.

ಪ್ರಾಂಶುಪಾಲರಾದ ಸಾಧನಾ, ಮಹಾವೀರ ಉಪಾಧ್ಯೆ ಇದ್ದರು.

ಇಲ್ಲಿನ ಮನಸೂರು ರಸ್ತೆಯಲ್ಲಿರುವ ಸಾಲಿಮಠ ಇಂಗ್ಲಿಷ್ ಮಾಧ್ಯಮ ಶಾಲೆ ಗುರುಪೂರ್ಣಮೆ ಆಚರಣೆಯಲ್ಲಿ ಡಾ. ಎಂ.ವಿ.ಗಿರಿಭಟ್‌ ಅವರು ಗುರುಪೂರ್ಣಿಮೆಯ ಮಹತ್ವ, ವೇದವ್ಯಾಸ ಮುನಿಗಳು, ಸಂಸ್ಕೃತ ಭಾಷೆ, ಮಹಾಭಾರತದ ಕಥಾರೂಪವನ್ನು ಸೊಗಸಾಗಿ ವಿವರಿಸಿದರು.

ಪ್ರಾಂಶುಪಾಲ ಎನ್.ಬಿ.ಅಂಗಡಿ, ಹಿರಿಯ ಶಿಕಷಕ ಡಿ.ವಿ.ಕುಲಕರ್ಣಿ ಇದ್ದರು. ಮಕ್ಕಳು ಗುರು–ಶಿಷ್ಯರ ನೀತಿಪಾಠ ನಾಟಕವನ್ನು ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT