ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಠೇವಣಿದಾರರ ಹಿತಕಾಪಾಡಲು ಕೇಂದ್ರ ಸಚಿವ ಜೋಶಿಗೆ ಮನವಿ

ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌: ವಂಚನೆ ಆರೋಪ
Last Updated 19 ಡಿಸೆಂಬರ್ 2020, 21:03 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬೆಂಗಳೂರಿನ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಿಂದ ಗ್ರಾಹಕರಿಗೆ ವಂಚನೆಯಾಗಿದ್ದು, ಕೇಂದ್ರ ಸರ್ಕಾರ ಈ ಬ್ಯಾಂಕ್‌ ಅನ್ನು ವಿಲೀನಗೊಳಿಸಿದರೆ ಠೇವಣಿದಾರರ ಮೊತ್ತ ಸುರಕ್ಷಿತವಾಗಿರುತ್ತದೆ. ಈ ಕುರಿತು ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಬ್ಯಾಂಕ್‌ನಿಂದ ವಂಚನೆಗೊಳಗಾದವರು ಶನಿವಾರ ಇಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಮನವಿ ಸಲ್ಲಿಸಿದರು.

‘ಆ ಬ್ಯಾಂಕ್‌ನಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಠೇವಣಿ ಇಟ್ಟಿದ್ದು, ಬಹುತೇಕರು ಹಿರಿಯ ನಾಗರಿಕರಾಗಿದ್ದಾರೆ. ಬ್ಯಾಂಕ್‌ನವರ ದುರ್ವರ್ತನೆಯಿಂದ ನೊಂದು ಈಗಾಗಲೇ ಹಲವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕೆಲವರು ಸ್ಥಿತಿ ಗಂಭೀರವಾಗಿದೆ. ಬ್ಯಾಂಕಿನವರು ಬಡ್ಡಿಯೂ ನೀಡುತ್ತಿಲ್ಲ, ಠೇವಣಿಯನ್ನೂ ವಾಪಸ್‌ ಕೊಡುತ್ತಿಲ್ಲ’ ಎಂದು ದೂರಿದರು.

‘ಬ್ಯಾಂಕ್‌ನಲ್ಲಿ ಸುಮಾರು ₹2,309 ಕೋಟಿ ಠೇವಣಿ ಸಂಗ್ರಹವಿದ್ದು, ₹1,419 ಕೋಟಿ ಸಾಲ ಬಾಕಿ ಬರಬೇಕಾಗಿದೆ. ಬ್ಯಾಂಕಿನವರು ಸಾಲವನ್ನೂ ಸರಿಯಾಗಿ ವಸೂಲಿ ಮಾಡುತ್ತಿಲ್ಲ. ಬ್ಯಾಂಕ್ ಸ್ಥಾಪನೆಯಾಗಿ 20 ವರ್ಷಗಳಾಗಿವೆ. ಆರ್‌ಬಿಐನವರು 12 ವರ್ಷಗಳಿಂದ ‘ಎ’ ಗ್ರೇಡ್‌ ಕೊಡುತ್ತಿದ್ದಾರೆ. ಬ್ಯಾಂಕ್‌ ವಿಲೀನಕ್ಕೆ ಕೇಂದ್ರ ಸರ್ಕಾರ ತುರ್ತಾಗಿ ಆರ್‌ಬಿಐಗೆ ಸೂಚನೆ ನೀಡಬೇಕು. ಈ ಮೂಲಕ ನೊಂದ ಗ್ರಾಹಕರ ಸಹಾಯಕ್ಕೆ ಧಾವಿಸಬೇಕು’ ಎಂದು ಮನವಿ ಮಾಡಿದರು.

‘ಬೆಂಗಳೂರಿನಲ್ಲಿ ಬ್ಯಾಂಕ್‌ನ ಎಂಟು ಶಾಖೆಗಳಿದ್ದು, ಬಸವನಗುಡಿ ಶಾಖೆ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರ ಹಿಂದೆ ಬ್ಯಾಂಕಿನ ನಿರ್ದೇಶಕರನ್ನು ವಜಾಗೊಳಿಸಿ ಆಡಳಿತಾಧಿಕಾರಿಯನ್ನು ನೇಮಿಸಿತ್ತು. ಆದರೆ, ಆಡಳಿತಾಧಿಕಾರಿಗೆ ಬ್ಯಾಂಕ್‌ ವ್ಯವಹಾರಗಳ ಬಗ್ಗೆ ಯಾವುದೇ ತಿಳಿವಳಿಕೆ ಇಲ್ಲ. ಒಂದು ತಿಂಗಳ ಹಿಂದೆ ಹೊಸ ಆಡಳಿತಾಧಿಕಾರಿಯನ್ನು ನೇಮಿಸಿದೆ. 2009ರಿಂದ ಲೆಕ್ಕ ಪರಿಶೋಧನಾ ವರದಿಯೇ ಸಲ್ಲಿಸಿಲ್ಲ’ ಎಂದು ಸಚಿವರ ಗಮನಕ್ಕೆ ತಂದರು.

ಸಮಸ್ಯೆ ಆಲಿಸಿದ ಜೋಶಿ, ಈ ಕುರಿತು ಸಂಬಂಧಿಸಿದ ಸಚಿವರು ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕೆ.ಮುರಳೀಧರ, ಗೋವಿಂದರಾಜು, ಸುರೇಶ ಕೆ. ಸುರೇಶ ರೆಡ್ಡಿ ಮತ್ತು ಎಸ್‌. ಮಹಾಲಿಂಗ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT