ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ | ಹೆಣ್ಣುಮಕ್ಕಳಿಗೆ ಜಿಮ್ನಾಸ್ಟಿಕ್ಸ್‌ ಕಷ್ಟವಲ್ಲ: ದಾನೇಶ್ವರಿ ಕಮ್ಮಾರ

Last Updated 7 ಫೆಬ್ರುವರಿ 2020, 20:15 IST
ಅಕ್ಷರ ಗಾತ್ರ

ಮಿನಿ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಚಾಂಪಿಯನ್‌ ಆದ ಕ್ರೀಡಾಪಟು ದಾನೇಶ್ವರಿ ಕಮ್ಮಾರ ಅವರನ್ನು ಸಂದರ್ಶಿಸಿದ್ದಾರೆ ಪ್ರಮೋದ್.

ಜಿಮ್ನಾಸ್ಟಿಕ್ಸ್‌ ಕ್ರೀಡೆಯನ್ನು ವೃತ್ತಿಪರವಾಗಿ ಸ್ವೀಕರಿಸಿದ್ದು ಯಾವಾಗ?

ಧಾರವಾಡದ ನಮ್ಮ ಮನೆಯ ಹತ್ತಿರದಲ್ಲಿಯೇ ಬಾಲಮಾರುತಿ ಜಿಮ್ನಾಸ್ಟಿಕ್ಸ್ ತರಬೇತಿ ಕೇಂದ್ರವಿದ್ದು, 2014ರಲ್ಲಿ ಪೋಷಕರು ಅಲ್ಲಿಗೆ ನನ್ನನ್ನು ಸೇರಿಸಿದ ಬಳಿಕ ವೃತ್ತಿ‍ಪರ ತರಬೇತಿ ಆರಂಭವಾಯಿತು. ಫ್ಲೋರ್‌, ಬ್ಯಾಲೆನ್ಸ್‌ ಬೀಮ್‌ ಮತ್ತು ಏರೋಬಿಕ್ಸ್‌ ವಿಭಾಗಕ್ಕೆ ಒತ್ತು ಕೊಟ್ಟು ಅಭ್ಯಾಸ ಮಾಡುತ್ತಿದ್ದೇನೆ. ಆರು ವರ್ಷಗಳಲ್ಲಿ ರಾಜ್ಯ ಮಟ್ಟದ ವಿವಿಧ ಟೂರ್ನಿಗಳಲ್ಲಿ ಒಟ್ಟು ಹತ್ತು ಪದಕಗಳನ್ನು ಗೆದ್ದುಕೊಂಡಿದ್ದೇನೆ.

ಜಿಮ್ನಾಸ್ಟಿಕ್ಸ್‌ ಆಯ್ಕೆ ಮಾಡಿಕೊಳ್ಳಲು ಕಾರಣವೇನು?

ಬಿಡುವಿನ ಸಮಯ ಹಾಗೂ ರಜಾ ದಿನಗಳಲ್ಲಿ ಮನೆಯಲ್ಲಿ ಹಾಸಿಗೆ ಮೇಲೆ ತಲೆ ಕೆಳಗೆ ಮಾಡಿ ಕಾಲು ಎತ್ತುವುದು, ಪಲ್ಟಿ ಹೊಡೆಯುವುದು ಮಾಡುತ್ತಿದ್ದೆ. ಇದನ್ನು ಗಮನಿಸಿದ ಅಮ್ಮ ಶೋಭಾ, ಜಿಮ್ನಾಸ್ಟಿಕ್ಸ್‌ ತರಬೇತಿಗೆ ಸೇರಿಸಿದರು. ಬಳಿಕ ಇದೇ ಕ್ರೀಡೆ ನನ್ನ ಸಾಧನೆಯ ಕ್ಷೇತ್ರವಾಯಿತು.

ರಾಜ್ಯ ಮಿನಿ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಚಾಂಪಿಯನ್‌ ಆದ ಬಗ್ಗೆ ಹೇಳು...

ಕಠಿಣ ಅಭ್ಯಾಸ ನಡೆಸಿದ್ದರಿಂದ ಪದಕ ಗೆಲ್ಲುವ ಭರವಸೆಯಿತ್ತು. ಆದರೆ, ಮೂರು ಚಿನ್ನದ ಪದಕಗಳ ಜತೆ ವೈಯಕ್ತಿಕ ಪ್ರಶಸ್ತಿಯೂ ಸಿಗುತ್ತದೆ ಎನ್ನುವ ನಿರೀಕ್ಷೆ ಇರಲಿಲ್ಲ. ಹೆಣ್ಣುಮಕ್ಕಳಿಗೆ ಸಾಹಸ ಕ್ರೀಡೆ ಜಿಮ್ನಾಸ್ಟಿಕ್ಸ್‌ನಲ್ಲಿ ಸಾಧನೆ ಮಾಡುವುದು ಕಷ್ಟ ಎಂದು ಅನೇಕ ಜನ ಹೇಳುತ್ತಾರೆ. ಕಷ್ಟಪಟ್ಟರೆ ಎಲ್ಲವೂ ಸುಲಭ ಎನ್ನುವುದಕ್ಕೆ ನಾನೇ ಸಾಕ್ಷಿ.

ಈ ಸಾಧನೆಯ ಗುಟ್ಟೇನು?

ನನ್ನ ಕೋಚ್‌ ವಿಠ್ಠಲ ಮುರ್ತಗುಡ್ಡೆ ಸರ್‌ ನೀಡುವ ಕರಾರುವಾಕ್ ತರಬೇತಿಯಿಂದ ಇದೆಲ್ಲವೂ ಸಾಧ್ಯವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ತರಬೇತಿ ಕೇಂದ್ರ ತುಂಬಾ ಅಚ್ಚುಕಟ್ಟಾಗಿದೆ, ಉತ್ತಮ ಸೌಲಭ್ಯಗಳಿವೆ. ಇದರಿಂದ ರಾಜ್ಯ ಮಟ್ಟದ ಟೂರ್ನಿಯಲ್ಲಿ ಪದಕ ಗೆಲ್ಲುವುದು ಸುಲಭವಾಗುತ್ತಿದೆ.

ಮುಂದಿನ ಗುರಿ ಏನು?

ರಾಜ್ಯ ಮಟ್ಟದ ಟೂರ್ನಿಗಳಲ್ಲಿ ಸತತ ಎರಡು ವರ್ಷಗಳಿಂದ ಪದಕಗಳನ್ನು ಗೆಲ್ಲುತ್ತಿದ್ದೇನೆ. 2018ರಲ್ಲಿ ಮುಂಬೈನಲ್ಲಿ, ಹೋದ ವರ್ಷ ವಡೋದರ ಮತ್ತು ಜೋಧಪುರದಲ್ಲಿ ನಡೆದಿದ್ದ ರಾಷ್ಟ್ರೀಯ ಸಬ್‌ ಜೂನಿಯರ್‌ ಜಿಮ್ನಾಸ್ಟಿಕ್ಸ್‌ ಟೂರ್ನಿಯಲ್ಲಿ ಪಾಲ್ಗೊಂಡಿದ್ದೆ. ಆದರೆ, ಪದಕ ಗೆಲ್ಲುವ ಆಸೆ ಈಡೇರಿಲ್ಲ. ಈ ಆಸೆ ಈಡೇರಿಸಿಕೊಳ್ಳುವ ಗುರಿಯಿದೆ.

(ದಾನೇಶ್ವರಿ ಕಮ್ಮಾರ ಮಿನಿ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಚಾಂಪಿಯನ್‌ ಆದ ಕ್ರೀಡಾಪಟು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT