ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ– ಧಾರವಾಡ: ಹಸಿ– ಒಣ ಕಸ ವಿಂಗಡಣೆ ಕಡ್ಡಾಯ

ನಿಯಮ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪಾಲಿಕೆ ನಿರ್ಧಾರ
Last Updated 9 ಅಕ್ಟೋಬರ್ 2020, 4:19 IST
ಅಕ್ಷರ ಗಾತ್ರ
ADVERTISEMENT
""
""

ಹುಬ್ಬಳ್ಳಿ: ಹಸಿ ಮತ್ತು ಒಣ ಕಸ ವಿಂಗಡಣೆ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲು ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ ಮುಂದಾಗಿದೆ. ಘನ ತ್ಯಾಜ್ಯ ಸಮರ್ಪಕ ನಿರ್ವಹಣೆ, ಭೂಭರ್ತಿ (ಲ್ಯಾಂಡ್ ಫಿಲ್ಲಿಂಗ್‌) ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುವುದು, ಪರಿಸರ ಸಂರಕ್ಷಣೆ ಹಾಗೂ ಮರು ಬಳಕೆಯ ವಸ್ತುಗಳನ್ನು ತ್ಯಾಜ್ಯದಿಂದ ವಿಂಗಡಿಸುವ ಉದ್ದೇಶವನ್ನು ಪಾಲಿಕೆ ಹೊಂದಿದೆ.

ಎರಡು ವರ್ಷಗಳ ಹಿಂದೆಯೇ ಪಾಲಿಕೆ ಆಟೊ ಟಿಪ್ಪರ್‌ ಮೂಲಕ ಮನೆ– ಮನೆ ಕಸ ಸಂಗ್ರಹಣೆಗೆ ಚಾಲನೆ ನೀಡಿದ್ದು, ಕಸ ವಿಂಗಡಣೆ ಪರಿಕಲ್ಪನೆ ಆಗಿನಿಂದಲೇ ಆರಂಭವಾಗಿತ್ತು. ಆದರೆ ಆರಂಭಿಕ ಹಂತದಲ್ಲಿ ಕಸ ವಿಂಗಡಣೆ ಮಾಡಿದರೂ ಅದನ್ನು ಸಂಪನ್ಮೂಲವಾಗಿ ಪರಿವರ್ತಿಸುವ ಯೋಜನೆ ರೂಪುಗೊಂಡಿರಲಿಲ್ಲ. ಆದ್ದರಿಂದ ಕಸ ವಿಂಗಡಣೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ನೀಡಿದರೂ ಕಸ ಸಂಗ್ರಹಣೆ ವಾಹನ ಸಿಬ್ಬಂದಿ ಅದನ್ನು ಒಟ್ಟಾಗಿಯೇ ರಾಶಿ ಹಾಕುತ್ತಿದ್ದರು.

ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸುವ ಧಾರವಾಡದ ವಿನ್ಡ್ರೋ ಕಂಪೋಸ್ಟಿಂಗ್ ಘಟಕ ಪ್ರಾಯೋಗಿಕವಾಗಿ ಕಾರ್ಯಾಚರಣೆ ಆರಂಭಿಸಿದೆ. ಹಸಿ ಕಸವನ್ನು ಪ್ರತ್ಯೇಕವಾಗಿ ಪಡೆಯುವ ಗಂಭೀರ ಪ್ರಯತ್ನ ಆರಂಭವಾಗಿದೆ. ಕಸವನ್ನು ವಿಂಗಡಿಸಿಯೇ ನೀಡುವಂತೆ ಸಂಗ್ರಹಣೆ ಸಿಬ್ಬಂದಿ ಈಗಾಗಲೇ ಜನರಿಗೆ ತಾಕೀತು ಮಾಡುತ್ತಿದ್ದಾರೆ. ವಿಂಗಡಿಸದ ಕಸವನ್ನು ಪಡೆಯುವುದಿಲ್ಲ ಎಂದು ಈಗಾಗಲೇ ತಿಳಿಸಿದ್ದಾರೆ. ಆದ್ದರಿಂದ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ನೀಡುವುದು ಕಡ್ಡಾಯವಾಗಿದೆ.

‘ಧಾರವಾಡದ ವಿನ್ಡ್ರೋ ಕಂಪೋಸ್ಟಿಂಗ್ ಘಟಕ ಆರಂಭವಾಗಿರುವುದರಿಂದ ಕಸ ವಿಂಗಡಣೆಯನ್ನು ಕಡ್ಡಾಯಗೊಳಿಸಲಾಗುತ್ತಿದ್ದು, ಈ ಬಗ್ಗೆ ಈಗಾಗಲೇ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಘಟಕದ ಸಾಮರ್ಥ್ಯ 150 ಟನ್ ಇದ್ದು, ಅದನ್ನು ಪರಿಪೂರ್ಣವಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ‘ ಎನ್ನುತ್ತಾರೆ ಪಾಲಿಕೆಯ ಘನತ್ಯಾಜ್ಯ ನಿರ್ವಹಣಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಶರಣಬಸಪ್ಪ ಕೆಂಭಾವಿ.

ಹುಬ್ಬಳ್ಳಿಯಲ್ಲಿ ಪ್ರತಿದಿನ 120 ಟನ್ ಹಸಿ ಕಸ ಉತ್ಪಾದನೆಯಾಗುತ್ತಿದ್ದು, ಪ್ರಸ್ತುತ ಸಂಗ್ರಹಣೆಯಾಗುತ್ತಿರುವ ವಿಂಗಡಿಸಿದ ಹಸಿ ತ್ಯಾಜ್ಯದ ಪ್ರಮಾಣ 40 ಟನ್. ಅದೇ ರೀತಿ ಧಾರವಾಡದಲ್ಲಿ 20 ಟನ್ ವಿಂಗಡಿಸಿದ ಹಸಿ ತ್ಯಾಜ್ಯ ಲಭ್ಯವಾಗುತ್ತಿದ್ದು, ಅಲ್ಲಿ ಪ್ರತಿ ದಿನ ಉತ್ಪಾದನೆಯಾಗುವ ಹಸಿ ತ್ಯಾಜ್ಯದ ಪ್ರಮಾಣ 40 ಟನ್. ಹುಬ್ಬಳ್ಳಿಗೆ ಹೋಲಿಸಿದರೆ ಧಾರವಾಡದಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹುಬ್ಬಳ್ಳಿಯಲ್ಲಿಯೂ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.

ದಂಡ ಹಾಕಲು ಅವಕಾಶ: ನಿಯಮದ ಪ್ರಕಾರ ಕಸ ವಿಂಗಡಣೆ ಮಾಡದವರಿಗೆ ದಂಡ ಹಾಕಲು ಸಹ ಅವಕಾಶ ಇದೆ. ಮೊದಲ ಬಾರಿಗೆ ₹100, ಎರಡನೇ ಬಾರಿಗೆ ₹200 ಆ ನಂತರ ದಂಡದ ಪ್ರಮಾಣವನ್ನು ಹೆಚ್ಚಿಸಬಹುದಾಗಿದೆ. ಆದರೆ ಜನರೇ ಸ್ವಯಂ ಪ್ರೇರಣೆಯಿಂದ ಈ ಅಭಿಯಾನದಲ್ಲಿ ಭಾಗವಹಿಸಬೇಕು ಎಂಬುದು ನಮ್ಮ ಕಾಳಜಿಯಾಗಿದೆ ಎನ್ನುತ್ತಾರೆ ಶರಣಬಸಪ್ಪ.

***
ಪ್ರತಿಯೊಬ್ಬರೂ ಹಸಿ ಮತ್ತು ಒಣ ಕಸ ವಿಂಗಡಿಸಿ ನೀಡಬೇಕು, ಪರಿಸರ ರಕ್ಷಣೆಗೆ ಕೈಜೋಡಿಸಬೇಕು

-ಶರಣಬಸಪ್ಪ ಕೆಂಭಾವಿ, ಕಾರ್ಯನಿರ್ವಹಾಕ ಎಂಜಿನಿಯರ್, ಘನತ್ಯಾಜ್ಯ ನಿರ್ವಹಣಾ ವಿಭಾಗ, ಪಾಲಿಕೆ

***

ಕಸವನ್ನು ವಿಂಗಡಿಸಿ ನೀಡುವಂತೆ ಕಳೆದ ಹತ್ತು ದಿನಗಳಿಂದ ಜನರಿಗೆ ಹೇಳುತ್ತಿದ್ದೇವೆ. ಆದರೆ ಎಲ್ಲರೂ ಇದಕ್ಕೆ ಸ್ಪಂದಿಸುತ್ತಿಲ್ಲ. ವಿಂಗಡಿಸದ ಕವಸವನ್ನು ಪಡೆಯುತ್ತಿಲ್ಲ

-ಸಿದ್ದಪ್ಪ ಹುಲಿಕೇರಿ, ಆಟೊ ಟಿಪ್ಪರ್ ಚಾಲಕ

***

ಕಸವನ್ನು ವಿಂಗಡಿಸಿಯೇ ನೀಡುವಂತೆ ಪಾಲಿಕೆ ಸಿಬ್ಬಂದಿ ಹೇಳಿದ್ದು, ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ನೀಡುತ್ತಿದ್ದೇವೆ

-ಮಂಗಳಾ ಪಾಟೀಲ, ವಿಜಯನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT