ಮಂಗಳವಾರ, ಜನವರಿ 26, 2021
28 °C
ವೃತ್ತಿ ಬದುಕು ಬದಿಗಿಟ್ಟು ತರಕಾರಿ, ಹಣ್ಣಿನ ವ್ಯಾಪಾರ ಮಾಡಿದರು; ಲೌಕ್‌ಡೌನ್‌ನಲ್ಲಿ ಸೃಜನಶೀಲತೆಯ ಪಾಠ ಕಲಿತರು

ಕೋವಿಡ್: ’ತಾಳ’ ತಪ್ಪಿದ ಕಲಾವಿದರ ಬದುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕೋವಿಡ್‌ ಮತ್ತು ಲಾಕ್‌ಡೌನ್‌ ಕಲಾವಿದರ ಬದುಕಿಗೆ ಮುಳುವಾಗಿ ಪರಿಣಮಿಸಿದೆ. ಹೊಟ್ಟೆಪಾಡಿಗಾಗಿ ಕಲೆಯನ್ನೇ ನಂಬಿಕೊಂಡ ಕಲಾವಿದರ ಬದುಕು ಅಕ್ಷರಶಃ ಬೀದಿಗೆ ಬಂದಿದೆ. ಲಾಕ್‌ಡೌನ್ ಸೇರಿ ಎಂಟು ತಿಂಗಳ ಕೊರೊನಾ ಅವಧಿಯಲ್ಲಿ ಪ್ರತಿ ದಿನ ಬೆಳಗಾದರೆ ‘ಹೊಟ್ಟೆಪಾಡಿಗೆ ಇಂದು ಯಾರು ದಿಕ್ಕು’ ಎನ್ನುವ ಪ್ರಶ್ನೆ ಬಹಳಷ್ಟು ರಂಗಭೂಮಿ ಕಲಾವಿದರನ್ನು ಪರಿಪರಿಯಾಗಿ ಕಾಡಿದೆ.

ವೃತ್ತಿ ರಂಗಭೂಮಿಯೇ ಬದುಕು ಎನ್ನುವ ನಂಬಿಕೆಯೊಂದಿಗೆ ಹಲವಾರು ದಶಕಗಳಿಂದ ನಾಟಕಗಳಲ್ಲಿ ಅಭಿನಯದಲ್ಲಿ ತೊಡಗಿದ್ದ ಕಲಾವಿದರಲ್ಲಿ ಅನೇಕರು ಲಾಕ್‌ಡೌನ್‌ ಅವಧಿಯಲ್ಲಿ ತರಕಾರಿ ಮಾರಾಟ ಮಾಡಿದ್ದಾರೆ. ಟೈಲರಿಂಗ್‌, ಉದ್ಯೋಗ ಖಾತ್ರಿ, ಹೋಟೆಲ್‌ನಲ್ಲಿ ಕೆಲಸ, ಕಿರಾಣಿ ಅಂಗಡಿ, ಹಣ್ಣುಗಳ ಮಾರಾಟ ಹೀಗೆ ಬೇರೆ, ಬೇರೆ ಉದ್ಯೋಗಗಳಲ್ಲಿ ತೊಡಗಿದ್ದರು.

ಐದು ದಶಕಗಳಿಂದ ವೃತ್ತಿ ರಂಗಭೂಮಿ ನೆಚ್ಚಿಕೊಂಡಿದ್ದ ಹುಬ್ಬಳ್ಳಿಯ ಎಚ್‌.ಬಿ.ಸರೋಜಮ್ಮ, ರಾಜಲಕ್ಷ್ಮಮ್ಮ, ಸುಶೀಲಮ್ಮ ಕುಂದಾಪುರ ಅವರೆಲ್ಲ ಚಿಂದೋಡಿ, ಕಡಪಟ್ಟಿ ಪ್ರಕಾಶ ಮತ್ತು ಗುಡಗೇರಿ ಹೀಗೆ ಪ್ರತಿಷ್ಠಿತ ಕಂಪನಿಗಳಲ್ಲಿ ದುಡಿದವರು. ನಿಗದಿಯಾಗಿದ್ದ ನಾಟಕಗಳು ಹಾಗೂ ಕಾರ್ಯಕ್ರಮಗಳು ಲಾಕ್‌ಡೌನ್‌ನಿಂದಾಗಿ ರದ್ದಾದವು. ಇದರಿಂದ ಆದಾಯ ನೆಚ್ಚಿಕೊಂಡಿದ್ದ ಕಲಾವಿದರು ಒಪ್ಪೊತ್ತಿನ ಊಟಕ್ಕೂ ಪರದಾಡುವಂತಾಯಿತು. ಇದು ಉದಾಹರಣೆಯಷ್ಟೇ; ಬಹುತೇಕ ಎಲ್ಲ ಕಲಾವಿದರದ್ದೂ ಇದೇ ಪಾಡು.

ಹಾಡುಗಳು, ನೃತ್ಯ, ಸಂಗೀತದ ಮೂಲಕ ಸದಾ ಜನರನ್ನು ರಂಜಿಸುತ್ತಿದ್ದ ವಾದ್ಯವೃಂದ (ಆರ್ಕೆಸ್ಟ್ರಾ), ಜಾನಪದ, ಡೊಳ್ಳು ಕುಣಿತ, ಬಯಲಾಟ, ದೊಡ್ಡಾಟ, ಸಣ್ಣಾಟ, ಕರಡಿ ಮೇಳ, ಮಂಗಳವಾದ್ಯ, ಬೀದಿನಾಟಕಗಳನ್ನು ಮಾಡುವ ಕಲಾವಿದರು ಮತ್ತು ಚೌಡಿಕೆ ಪದಗಳನ್ನು ಹೇಳುವುದನ್ನೇ ವೃತ್ತಿ ಮಾಡಿಕೊಂಡಿದ್ದವರು ಸಂಕಷ್ಟಕ್ಕೆ ಸಿಲುಕಿದರು. ಈಗ ಲಾಕ್‌ಡೌನ್‌ ತೆರವಾಗಿದ್ದರೂ ಮೊದಲಿನ ಹಾಗೆ ಕಲಾ ಚಟುವಟಿಕೆಗಳ ನಡೆಯುತ್ತಿಲ್ಲ. ಈಗಿನ ವಿಷಮ ಪರಿಸ್ಥಿತಿಯಿಂದ ಹೊರಬರಲು ಇನ್ನೂ ಸಮಯ ಬೇಕಾಗುತ್ತದೆ. ಇದು ಕಲಾವಿದರ ಸಂಕಷ್ಟ ಹೆಚ್ಚಿಸಿದೆ.

ಭಕ್ತಿ ಪ್ರಧಾನವಾದ ಡೊಳ್ಳು ಮಜಲಿನ ಕಲೆ ನೆಚ್ಚಿಕೊಂಡಿದ್ದ ಕಲಾವಿದರ ಪರಿಸ್ಥಿತಿ ಇದಕ್ಕಿಂತ ಹೊರತೇನಲ್ಲ. ಜಾತ್ರೆ, ಸಮಾರಂಭ, ಉತ್ಸವ, ದೇವಸ್ಥಾನದ ವಾರ್ಷಿಕೋತ್ಸವ, ಉಡಿ ತುಂಬುವ ಕಾರ್ಯದಲ್ಲಿ ಏಳು ದಶಕದಿಂದ ತೊಡಗಿಕೊಂಡ ಅಳ್ನಾವರ ಸಮೀಪದ ಹೂಲಿಕೇರಿ ಗ್ರಾಮದ ಬೀರದೇವರ ಡೊಳ್ಳಿನ ಮಜಲು ತಂಡ ಸೇರಿದಂತೆ ಅನೇಕ ಡೊಳ್ಳು ಕುಣಿತದ ಕಲಾವಿದರ ಬದುಕಿನ ’ತಾಳ’ ಕೋವಿಡ್‌ನಿಂದ ತಪ್ಪಿ ಹೋಗಿದೆ.

‘ಲಾಕ್‌ಡೌನ್‌ಗಿಂದ ಮೊದಲು ಜಾತ್ರೆಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲು ನಮ್ಮ ತಂಡಕ್ಕೆ ಮೂರು ಕಡೆ ಆಹ್ವಾನ ಬಂದಿತ್ತು. ಆದರೆ ಹೋಗಲು ಆಗಲಿಲ್ಲ. ಹೀಗಾಗಿ ಕಲಾವಿದರು ಕೃಷಿ ಕೆಲಸದ ಮೊರೆ ಹೋದರು. ಕಬ್ಬಿನ ಹಂಗಾಮಿನಲ್ಲಿ ದುಡಿದರು. ಅನೇಕ ಕಲಾವಿದರಿಗೆ ಡೊಳ್ಳು ಕುಣಿತ ಕೆಲಸವಷ್ಟೇ ಅಲ್ಲ; ಭಕ್ತಿಯ, ಪ್ರೀತಿಯ ಸೇವೆ. ಸರ್ಕಾರ ನಮ್ಮ ನೆರವಿಗೆ ಬರಲಿ’ ಎಂದು ಡೊಳ್ಳಿನ ಮಜಲು ತಂಡದ ಮಾಲೀಕ ಶಿವರಾಯಪ್ಪ ಡೊಳ್ಳಿನ ಮನವಿ ಮಾಡಿದರು.

ಕಲಘಟಗಿಯಲ್ಲಿ 2019ರ ಫೆಬ್ರುವರಿಯಲ್ಲಿ ಗ್ರಾಮದೇವಿ ಜಾತ್ರೆಯ ಅಂಗವಾಗಿ ಬಂದಿದ್ದ ವಿಶ್ವ ಭಾರತಿ ರಮ್ಯ ನಾಟಕ ಸಂಘ ನಾಟಕ ಪ್ರದರ್ಶನ ನೀಡಲಾಗದೆ ಪರಿತಪಿಸಿದೆ. ಸಮರ್ಪಕವಾಗಿ ಸಿಗದ ಪರಿಹಾರ ಅವರನ್ನು ಮತ್ತಷ್ಟು ಹೈರಾಣಾಗಿಸಿದೆ. ಲಾಕ್‌ಡೌನ್‌ ಅವಧಿಯಲ್ಲಿ ವಿವಿಧ ಸಂಘ, ಸಂಸ್ಥೆಗಳು, ದಾನಿಗಳು ನೀಡಿದ ನೆರವು ಆ ಸಂಘದ ಕಲಾವಿದರ ಹೊಟ್ಟೆಗೆ ನೆರವಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ರಂಗಭೂಮಿ ತೊರೆಯುವುದು ಅನಿವಾರ್ಯವಾಗಲಿದೆ ಎಂದು ಸಂಘದ ಕಲಾವಿದ ಬಸವರಾಜ ಬೆಂಗೇರಿ ನೊಂದು ನುಡಿದರು.

ಕುಂದಗೋಳ ತಾಲ್ಲೂಕಿನ ಹರ್ಲಾಪೂರ ಗ್ರಾಮದ ಸ್ವಾಮಿ ವಿವೇಕಾನಂದ ಹವ್ಯಾಸಿ ಯುವಕ ಮಂಡಳದ ಜಾನಪದ ಕಲಾವಿದ ಶಂಭಯ್ಯ ಹಿರೇಮಠ ಕಲಾ ತಂಡದವರು ಕಾರ್ಯಕ್ರಮಗಳನ್ನು ನೀಡಿ ಅದರಿಂದ ಬಂದ ಹಣದಲ್ಲಿ ಬದುಕು ಸಾಗಿಸುತ್ತಿದ್ದರು. ಒಬ್ಬ ಕಲಾವಿದನಿಗೆ ಈಗಿನಷ್ಟು ಕೆಟ್ಟ ಸ್ಥಿತಿ ಯಾವಾಗಲೂ ಬಂದಿರಲಿಲ್ಲ ಎಂದು ಶಂಭಯ್ಯ ನೋವು ತೋಡಿಕೊಂಡರು.

ಇಂಗಳಗಿಯ ಜಾನಪದ, ದೊಡ್ಡಾಟ ಕಲಾವಿದ ವೀರೇಶ ಬಡಿಗೇರ ಹಾಗೂ ಡೊಳ್ಳು ಪದದ ಕಲಾವಿದ ಮಹಾಂತೇಶ ಡೊಳ್ಳಿನ ’ಸರ್ಕಾರದಿಂದ ಯಾವ ಪರಿಹಾರ ಸಿಕ್ಕಿಲ್ಲ. ಕೃಷಿಯೇ ಈಗ ಜೀವನಕ್ಕೆ ಆಸರೆ. ನಾವೇ ಕಲೆ ಉಳಿಸಿದಿದ್ದರೆ ಮುಂದಿನ ಪೀಳಿಗೆಗೆ ಈ ಕೆಲ ಗೊತ್ತಾಗುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು.

***

ಸರ್ಕಾರದಿಂದ ಬರಬೇಕಾದ ಮಾಸಾಶನ ಇನ್ನು ಬಂದಿಲ್ಲ. ಕೋವಿಡ್‌ ಮತ್ತು ಲಾಕ್‌ಡೌನ್‌ನಿಂದಾಗಿ ದುಡಿಮೆಯೂ ಇಲ್ಲದ ಕಾರಣ ಜೀವನ ನಿರ್ವಹಣೆ ಕಷ್ಟವಾಗಿದೆ. ನನ್ನಂತೆಯೇ ನೂರಾರು ಕಲಾವಿದರು ಸಂಷಕ್ಟಕ್ಕೆ ಸಿಲುಕಿದ್ದಾರೆ. ಕಲಾವಿದರು ಬೀದಿಗೆ ಬೀಳುವ ಮೊದಲು ಎಚ್ಚೆತ್ತುಕೊಂಡು ಸರ್ಕಾರ ಮಾಸಾಶನ ಬಿಡುಗಡೆ ಮಾಡಬೇಕು
-ಅಶೋಕ ಅರ್ಕಸಾಲಿ, ರಂಗಭೂಮಿ ಕಲಾವಿದ, ಕಲಘಟಗಿ

***

ನಮ್ಮ ಕಲಾ ತಂಡಗಳು ಜಾನಪದ ಪರಂಪರೆಯನ್ನು ಉಳಿಸಿ, ಬೆಳಸಿಕೊಂಡು ಹೋಗುತ್ತಿವೆ. ಆದರೆ ಕಲಾವಿದರು ಉಳಿಯುವುದೇ ಕಷ್ಟವಿದೆ. ಕುಂದಗೋಳ ತಾಲ್ಲೂಕಿನಲ್ಲಿ 7 ಕಲಾ ತಂಡಗಳಲ್ಲಿರುವ 70ಕ್ಕೂ ಹೆಚ್ಚು ಕಲಾವಿದರಿಗೆ ಕೆಲಸವಿಲ್ಲ. ಮೂಲ ವೃತ್ತಿ ಬಿಟ್ಟು ಕೃಷಿ ಕೆಲಸದಲ್ಲಿ ತೊಡಗಿದ್ದೇವೆ
-ವಿರೇಶ ಬಡಿಗೇರ, ಇಂಗಳಗಿ ರಂಗಸಂಗಮ ಕಲಾತಂಡದ ನಾಯಕ, ಗುಡಗೇರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು