ಸೋಮವಾರ, ಮಾರ್ಚ್ 20, 2023
30 °C

ಹುಬ್ಬಳ್ಳಿ: ಧಾರಾಕಾರ ಸುರಿದ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಗರದಲ್ಲಿ ಸೋಮವಾರ ಧಾರಾಕಾರ ಮಳೆ ಸುರಿಯಿತು. ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣ ಹುಟ್ಟಿಸಿದ್ದ ಭಾರೀ ಮಳೆಯ ನಿರೀಕ್ಷೆ ಸಂಜೆಯ ಹೊತ್ತಿಗೆ ನಿಜವಾಯಿತು. ಕೆಲ ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆರಾಯ ಕಡೆಗೂ ಭೂಮಿಗೆ ತಂಪನೆರೆದ.

ಮಳೆ ಅಬ್ಬರಕ್ಕೆ ನಗರದ ಅನೇಕ ರಸ್ತೆಗಳು ಜಲಾವೃತವಾದವು. ಉಣಕಲ್ ಕೆಳ ಸೇತುವೆ ರಸ್ತೆ, ಸ್ಟೇಷನ್ ರಸ್ತೆ, ಜನತಾ ಬಜಾರ್, ದಾಜಿಬಾನ ಪೇಟೆಯ ಸಹಸ್ರಾರ್ಜುನ ವೃತ್ತ, ವಿದ್ಯಾನಗರ, ಕಾರವಾರ ರಸ್ತೆ, ಹೊಸೂರು ವೃತ್ತ ಸೇರಿದಂತೆ ನಗರದ ಹಲವು ರಸ್ತೆಗಳು ಕೆಲ ಹೊತ್ತು ಹಳ್ಳಗಳಂತಾದವು. ರಸ್ತೆ, ಒಳ ಚರಂಡಿ ಸೇರಿದಂತೆ ವಿವಿಧ ಕಾಮಗಾರಿಗಳು ನಡೆಯುತ್ತಿರುವ ರಸ್ತೆಗಳಲ್ಲಿ ಮಳೆ ನೀರಿನಿಂದಾಗಿ ಸಂಚಾರ ದುಸ್ತರವಾಯಿತು.

ಉಣಕಲ್‌ನ ಸಂತೆಬೈಲ್ ಉಳವಿ ಬಸವೇಶ್ವರ ದೇವಸ್ಥಾನ ಮತ್ತು ವಿಠ್ಠಲ ಹರಿಮಂದಿರದ ಬಳಿಯ ಬಿಆರ್‌ಟಿಎಸ್ ರಸ್ತೆಯಲ್ಲಿ ಮಳೆ ನೀರು ಹರಿದು ಹೋಗದೆ ಕಟ್ಟಿಕೊಂಡಿತು. ಜಲಾವೃತಗೊಂಡ ರಸ್ತೆಯಲ್ಲಿ ವಾಹನಗಳ ಸವಾರರು ಹೋಗಲು ಪರದಾಡಬೇಕಾಯಿತು.

‘ಪ್ರತಿ ಸಲ ಮಳೆ ಬಂದಾಗಲೂ ಇಲ್ಲಿನ ರಸ್ತೆಯಲ್ಲಿ ನೀರು ಕಟ್ಟಿಕೊಳ್ಳುತ್ತದೆ. ಅಕ್ಕಪಕ್ಕದ ಪ್ರದೇಶಗಳಿಗೂ ಇದರಿಂದ ತೊಂದರೆಯಾಗುತ್ತಿದೆ. ಬಿಆರ್‌ಟಿಎಸ್‌ನವರು ಕೂಡಲೇ ಇದಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕು. ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು’ ಎಂದು ಸ್ಥಳೀಯರಾದ ಶಿವಾನಂದ ಪಡೆಸೂರ, ವೀರೇಶ ಉಂಡಿ,  ಹನಮಂತಪ್ಪ ಸುತಗಟ್ಟಿ, ಸಿದ್ದು ಕೆಂಚ್ಚಣ್ಣವರ, ಸಿದ್ದು ವರಪೇನ್ನವರ, ರವಿ ಜಾಧವ, ಶಿವಕುಮಾರ್ ಸಾಲಿ ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು