ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯ ಕೊರತೆಯ ಊರು ಹಿರೇನರ್ತಿ

ಕಿರಾಣಿ ಅಂಗಡಿಗಳಲ್ಲಿ ಪೆಟ್ರೋಲ್ ಮಾರಾಟ * ಶುದ್ಧ ನೀರಿನ ಘಟಕ ಬಂದ್
ಬಸನಗೌಡ ಪಾಟೀಲ
Published 29 ಮೇ 2024, 4:49 IST
Last Updated 29 ಮೇ 2024, 4:49 IST
ಅಕ್ಷರ ಗಾತ್ರ

ಕುಂದಗೋಳ: ಎಂಟರಿಂದ ಹತ್ತು ದಿನಗಳಿಗೊಮ್ಮೆ ಪೂರೈಕೆ ಆಗುವ ಕುಡಿಯುವ ನೀರು. ದಿನನಿತ್ಯದ ಬಳಕೆಗೆ ಹಳ್ಳದ ಗುಂಡಿಯಲ್ಲಿರುವ ನೀರೇ ಗತಿ...

ಇದು 607 ಮನೆಗಳು, 3,010 ಜನಸಂಖ್ಯೆ ಹೊಂದಿರುವ ತಾಲ್ಲೂಕಿನ ಪುಟ್ಟ ಗ್ರಾಮ ಹಿರೇನರ್ತಿಯ ಜನರ ಬವಣೆಗೆ ಹಿಡಿದ ಕನ್ನಡಿ.

ಮುಂದುವರಿದು, ಗ್ರಾಮದಲ್ಲಿ ಈಗಲೂ ಬಯಲು ಮಲ ವಿಸರ್ಜನೆ ಜೀವಂತವಾಗಿದೆ. ಪ್ರಮುಖ ಕಾಂಕ್ರೀಟ್ ರಸ್ತೆಗಳು ಅಲ್ಲಲ್ಲಿ ಗುಂಡಿಮಯವಾಗಿದೆ. ಬಸ್ ನಿಲ್ದಾಣದ ನೆಲಹಾಸು ಕಿತ್ತಿದೆ. ಊರಿನ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಪೆಟ್ರೋಲ್ ಮಾರಾಟ ನಿರಾತಂಕವಾಗಿ ನಡೆಯುತ್ತಿದೆ. ಬಸಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಅಕ್ಕ ಪಕ್ಕದ ಹೊಲಗಳು ಇಸ್ಪೀಟ್ ಆಟದ ಅಡ್ಡೆಗಳಾಗಿವೆ. ಚಿಕ್ಕನರ್ತಿ ಮತ್ತು ಹಿರೇನರ್ತಿ ಮದ್ಯವಿರುವ ಹಳ್ಳಕ್ಕೆ ತಡೆಗೋಡೆಯಿಲ್ಲ.

ಸರ್ಕಾರಿ ಆಸ್ಪತ್ರೆ (ಆಯುಷ್ಮಾನ್ ಆರೋಗ್ಯ ಮಂದಿರ) 15 ದಿನಕ್ಕೊಮ್ಮೆ ಬಾಗಿಲು ತೆರೆಯುತ್ತಿದ್ದು, ಊರಿನ ಜನರು ಅನಾರೋಗ್ಯಕ್ಕೆ ತುತ್ತಾದರೆ ಪಕ್ಕದ ಕುಂದಗೋಳಕ್ಕೆ ಹೋಗುಬೇಕು. ಗ್ರಾಮದ ಮಧ್ಯ ಇರುವ ಹಳೇ ಗ್ರಾಮ ಪಂಚಾಯಿತಿ ಕಟ್ಟಡದ ಒಂದು ಸಣ್ಣ ಕೋಣೆಯಲ್ಲಿ ಅಂಚೆ ಕಚೇರಿಯಿದೆ. ಗ್ರಾಮ ಆಡಳಿತ ಅಧಿಕಾರಿ ಕಚೇರಿ ಎದುರಿನ ರಸ್ತೆಯಲ್ಲಿ ಚರಂಡಿ ನೀರು ಹರಡಿದೆ.

ಗ್ರಾಮದ ಮುಖ್ಯ ಕೆರೆಯಲ್ಲಿ ನೀರಿಲ್ಲ, ಕೆರೆಗೆ ತಡೆಗೋಡೆಯಿಲ್ಲ, ಕೆರೆಯ ಸುತ್ತ ಕಸ ಬೆಳೆದಿದ್ದು ಮೆಟ್ಟಿಲುಗಳು ಕಿತ್ತಿವೆ. ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಆರು ತಿಂಗಳಾಗಿದ್ದು, ಅದರ ಆವರಣ ದನ ಕಟ್ಟುವ ಜಾಗವಾಗಿ ಬದಲಾಗಿದೆ.

ಬಸ್ ನಿಲ್ದಾಣದ ಪಕ್ಕದ ಅಂಗನಾವಡಿಯ ಹಿಂಬದಿಯ ಪಕ್ಕದಲ್ಲಿ ತೆರೆದ ಚರಂಡಿಯಿದೆ. ಬಸವೇಶ್ವರ ಫ್ಲಾಟ್‍ನಲ್ಲಿನ ಕಾಂಕ್ರೀಟ್ ರಸ್ತೆ ಅಲ್ಲಲ್ಲಿ ಕಿತ್ತಿದೆ. ಕುರುಬಗೇರಿಯಲ್ಲಿನ ಚರಂಡಿ ತುಂಬಿವೆ. ಅಂಗನವಾಡಿ ಕೇಂದ್ರ–1ರಲ್ಲಿ ಮಕ್ಕಳಿಗೆ ಶೌಚಾಲಯವಿಲ್ಲ. ಅಂಗನವಾಡಿ ಕೇಂದ್ರ–2ನ್ನು ‘ನಂದ ಘರ್’ (ಅತ್ಯಾಧುನಿಕ ಅಂಗನವಾಡಿ) ಯೋಜನೆಯಡಿ ಮೇಲ್ದರ್ಜೆಗೇರಿಸಿದ್ದರೂ ಅಲ್ಲಿ ಸೋಲಾರ್, ಟಿ.ವಿ ವ್ಯವಸ್ಥೆಯಿಲ್ಲ.

ಊರಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಜನ ಪ್ರತಿನಿಧಿಗಳು ನಿದ್ದೆ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಹಳ್ಳದಲ್ಲಿನ ನೀರನ್ನು ತೆಂಗಿನ ಚಿಪ್ಪು ಬಳಸಿ ಕೊಡದಲ್ಲಿ ತುಂಬಿಕೊಂಡು ಬಂದಿದ್ದೇವೆ’ ಎಂದು ಸಮಸ್ಯೆಯ ತೀವ್ರತೆಯನ್ನು ಗ್ರಾಮಸ್ಥ ಯಲ್ಲಪ್ಪ ವಿವರಿಸುತ್ತಾರೆ.

‘ಗ್ರಾಮದಲ್ಲಿನ ಚರಂಡಿಗಳಲ್ಲಿ ನೀರು ತುಂಬಿರುವ ಕಾರಣ ರಾತ್ರಿ ಸೊಳ್ಳೆ ಕಾಟ ಹೆಚ್ಚಾಗಿದೆ. ಕಸದ ವಿಲೇವಾರಿ ಮಾಡುವಲ್ಲಿ ಗ್ರಾಮ ಪಂಚಾಯಿತಿ ವಿಫಲವಾಗಿದೆ’ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ. ಹತ್ತಾರು ಸಮಸ್ಯೆಗಳಲ್ಲಿ ಕೆಲವಾದರೂ ಪರಿಹರಿಸಿದರೆ ಒಂದಷ್ಟು ನೆಮ್ಮದಿ ಕಾಣುವ ನಿರೀಕ್ಷೆ ಗ್ರಾಮಸ್ಥರದ್ದು.

ಕುಂದಗೋಳ ತಾಲ್ಲೂಕಿನ ಹಿರೇನರ್ತಿ ಗ್ರಾಮದ ಅಡಳಿತ ಅಧಿಕಾರಿ ಕಚೇರಿ ಎದುರಿನ ರಸ್ತೆಯಲ್ಲಿ ಹರಿದ ಚರಂಡಿ ನೀರು
ಕುಂದಗೋಳ ತಾಲ್ಲೂಕಿನ ಹಿರೇನರ್ತಿ ಗ್ರಾಮದ ಅಡಳಿತ ಅಧಿಕಾರಿ ಕಚೇರಿ ಎದುರಿನ ರಸ್ತೆಯಲ್ಲಿ ಹರಿದ ಚರಂಡಿ ನೀರು
ಕುಂದಗೋಳ ತಾಲ್ಲೂಕಿನ ಹಿರೇನರ್ತಿ ಗ್ರಾಮದಲ್ಲಿ ಕೆಟ್ಟಿರುವ ಶುದ್ಧ ಕುಡಿಯುವ ನೀರಿನ ಘಟಕದ ಮುಂದೆ ದನಗಳನ್ನು ಕಟ್ಟಲಾಗಿದೆ
ಕುಂದಗೋಳ ತಾಲ್ಲೂಕಿನ ಹಿರೇನರ್ತಿ ಗ್ರಾಮದಲ್ಲಿ ಕೆಟ್ಟಿರುವ ಶುದ್ಧ ಕುಡಿಯುವ ನೀರಿನ ಘಟಕದ ಮುಂದೆ ದನಗಳನ್ನು ಕಟ್ಟಲಾಗಿದೆ

ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಜಾಗವಿಲ್ಲದ ಕಾರಣ ಕಸದ ವಿಲೇವಾರಿ ಮಾಡುವುದು ಕಷ್ಟಕರವಾಗಿದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರುವೆ

–ಶೈಲಾ ನೀಲಗಾರ ಪಿಡಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT