ಶನಿವಾರ, ಏಪ್ರಿಲ್ 17, 2021
27 °C
ನಿರಂತರ, ನಿಯಮಿತ ಚಿಕಿತ್ಸೆ ಅಗತ್ಯ: ರೋಗಿಯ ಮಾನಸಿಕ ಸ್ಥಿತಿ ಸುಧಾರಿಸಲು ಆಪ್ತ ಸಮಾಲೋಚನೆ ಉತ್ತಮ ಮಾರ್ಗ

ಏಡ್ಸ್: ಒಂದು ಕಾಯಿಲೆ ಅಷ್ಟೆ...

ಗಣೇಶ ವೈದ್ಯ Updated:

ಅಕ್ಷರ ಗಾತ್ರ : | |

ಏಡ್ಸ್– ಹೆಸರು ಕೇಳಿದರೇ ಬೆಚ್ಚುತ್ತೇವೆ. ಗುಣವಾಗದ, ಮಾರಣಾಂತಿಕ ಕಾಯಿಲೆ ಎಂಬ ಕುಖ್ಯಾತಿ ಇದರದ್ದು. ಏಡ್ಸ್ ಕಾಯಿಲೆ ಹೊಂದಿರುವವರನ್ನು ಸಮಾಜ ಕಡೆಗಣ್ಣಿನಿಂದ ನೋಡುತ್ತದೆ. ಅವರನ್ನು ಅಸ್ಪೃಶ್ಯರಂತೆ, ನಮ್ಮೊಳಗೊಬ್ಬರಲ್ಲ ಎನ್ನುವಂತೆ ಕಾಣುತ್ತದೆ. ಏಡ್ಸ್ ಗುಣವಾಗದ ರೋಗವೇನೋ ಹೌದು. ಆದರೆ ಬಾಧಿತರನ್ನು ಕೀಳಾಗಿ ಕಾಣುವ ಅಗತ್ಯವಿಲ್ಲ. 

ಏಡ್ಸ್ ಹೊಂದಿರುವವರು ಸಮಾಜಕ್ಕೆ ಕಳಂಕ ಅಲ್ಲ. ಅದು ಕೂಡ ಬೇರೆಲ್ಲ ಕಾಯಿಲೆಗಳಂತೆ ಒಂದು ಕಾಯಿಲೆ ಎಂಬುದನ್ನು ಸಮುದಾಯಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಮತ್ತು ವೈದ್ಯರು ನಡೆಸುತ್ತಿದ್ದಾರೆ. ಅದಕ್ಕಾಗಿ ಸಾಕಷ್ಟು ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ. ಅದರ ಪರಿಣಾಮವಾಗಿಯೇ ಏಡ್ಸ್ ಇರುವವರು, ತಾವೂ ಸಮಾಜದಲ್ಲಿ ಬದುಕಲು ಅರ್ಹರು ಎಂಬ ಧೈರ್ಯ ತಂದುಕೊಳ್ಳುವಂತಾಗಿದೆ.

‘ಮಧುಮೇಹ ಕಾಯಿಲೆಗೆ ನಿರಂತರವಾಗಿ ಔಷಧ ತೆಗೆದುಕೊಂಡರೆ ಹೇಗೆ ನಿಯಂತ್ರಣದಲ್ಲಿ ಇಡಬಹುದೋ ಅದೇ ರೀತಿ ಏಡ್ಸ್ ಕೂಡ. ನಿರಂತರವಾಗಿ, ನಿಯಮಿತವಾಗಿ ಚಿಕಿತ್ಸೆ, ಔಷಧ ಪಡೆಯುವ ಜೊತೆಗೆ ಆಪ್ತ ಸಮಾಲೋಚನೆಗೆ ಒಳಗಾಗುತ್ತಿದ್ದರೆ ಅವರು ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗುತ್ತಾರೆ. ಅದರಿಂದಾಗಿ ಜೀವಿತಾವಧಿಯಂತೂ ಖಂಡಿತ ಹೆಚ್ಚಾಗುತ್ತದೆ’ ಎಂಬುದು ಹುಬ್ಬಳ್ಳಿಯ ಕಿಮ್ಸ್‌ನ ಎಆರ್‌ಟಿ ಪ್ಲಸ್ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಬಿರಾದಾರ ಉಮೇಶ್ಚಂದ್ರ ಅವರ ಮಾತು.

‘ಏಡ್ಸ್ ಬಾಧಿತರು ಕಾಯಿಲೆ ಜೊತೆಗೆ ಹೋರಾಡುವುದಲ್ಲದೇ ಹೊರ ಜಗತ್ತನ್ನೂ ಎದುರಿಸುವ ಸಾಮರ್ಥ್ಯ ಮೈಗೂಡಿಸಿಕೊಳ್ಳಬೇಕು. ಅದೇ ಕಾರಣದಿಂದ ಎಆರ್‌ಟಿ ಕೇಂದ್ರಕ್ಕೆ ಬರುವ ರೋಗಿಗಳಿಗೆ ಚಿಕಿತ್ಸೆ ಕೊಡುವ ಜೊತೆಗೆ ಆಪ್ತ ಸಮಾಲೋಚನೆಯನ್ನೂ ನಡೆಸಲಾಗುತ್ತದೆ. ಅವರಲ್ಲಿನ ಆತಂಕ, ಕೀಳರಿಮೆಯನ್ನು ಹೋಗಲಾಡಿಸುವ ಪ್ರಯತ್ನ ನಿರಂತರವಾಗಿರುತ್ತದೆ. ಸಮಾಜವನ್ನು ಎದುರಿಸಲು ರೋಗಿಯು ಆರ್ಥಿಕವಾಗಿ ಸ್ವಾವಲಂಬಿಯಾಗುವುದೂ ಅತ್ಯಗತ್ಯ’ ಎಂಬುದು ಉಮೇಶ್ಚಂದ್ರ ಅವರ ಅಭಿಪ್ರಾಯ.

‘ರೋಗಿಯು ಬೇರೆಯವರ ಮಾತಿಗೆ ತಲೆ ಕೆಡಿಸಿಕೊಳ್ಳಬಾರದು, ಧೈರ್ಯ ಕಳೆದುಕೊಳ್ಳಬಾರದು. ಆರ್ಥಿಕವಾಗಿ ಸಬಲರಾದರೆ ಅದು ಸುಲಭಸಾಧ್ಯ. ಹಣಕ್ಕಾಗಿ ಬೇರೆಯವರನ್ನು ಅವಲಂಬಿಸಿದರೆ ಅವರ ಚುಚ್ಚು ಮಾತುಗಳನ್ನೂ ಕೇಳಬೇಕಾಗುತ್ತದೆ’ ಎಂದು ಅವರು ಹೇಳುತ್ತಾರೆ.

‘ನಮ್ಮ ಬಳಿ ಬರುವ ರೋಗಿಗಳು ಆರಂಭದಲ್ಲಿ ತುಂಬ ಅಧೀರರಾಗಿರುತ್ತಾರೆ. ನಾವು ಅವರನ್ನು ನಿರಂತರವಾಗಿ ಚಿಕಿತ್ಸೆಗೆ ಒಳಪಡಿಸಿದಾಗ ಆರು ತಿಂಗಳಲ್ಲಿ ಅವರಲ್ಲಿ ಸ್ವಲ್ಪ ಆತ್ಮವಿಶ್ವಾಸ ಕಾಣಿಸುತ್ತದೆ. ಏಡ್ಸ್ ಇರುವವರ ಜೊತೆ ಅವರ ಒಡಹುಟ್ಟಿದವರೇ ಒಡನಾಡಲು ಬಯಸುವುದಿಲ್ಲ. ಜೊತೆಗೆ ಕೂತು ಊಟ ಮಾಡುವುದಿಲ್ಲ. ಅವರನ್ನು ಮಾತನಾಡಿಸುವವರಿಲ್ಲ. ಹೀಗಾಗಿ ಅವರಿಗೆ ಏಕಾಂಗಿತನ ಕಾಡುತ್ತದೆ. ಅಂಥ ಸಂದರ್ಭದಲ್ಲಿ ನಾವು ರೋಗಿಯ ಸಂಬಂಧಿಯೊಂದಿಗೂ ಸಮಾಲೋಚನೆ ನಡೆಸುತ್ತೇವೆ. ಅವರೊಂದಿಗಿನ ಒಡನಾಟದಿಂದ ಏನೂ ತೊಂದರೆ ಇಲ್ಲ. ಲೈಂಗಿಕ ಸಂಪರ್ಕ ಮತ್ತು ರಕ್ತ ಪಡೆಯುವ ಮೂಲಕ ಮಾತ್ರ ಈ ಕಾಯಿಲೆ ಹರಡುತ್ತದೆಯೇ ವಿನಾ ಸಾಂಕ್ರಾಮಿಕ ಅಲ್ಲ ಎಂದು ಅವರಿಗೂ ಮನವರಿಕೆ ಮಾಡಿಕೊಡುತ್ತೇವೆ’ ಎನ್ನುತ್ತಾರೆ ಡಾ.ಬಿರಾದಾರ.

ಗಮನಿಸಬೇಕಾದ ಅಂಶವೆಂದರೆ, ಎಚ್ಐವಿ ಏಡ್ಸ್ ಇರುವ ಪತಿ–ಪತ್ನಿ ಸರಿಯಾಗಿ ಚಿಕಿತ್ಸೆ ಪಡೆದು, ತಪ್ಪದೆ ಔಷಧ ತೆಗೆದುಕೊಳ್ಳುತ್ತ, ಉತ್ತಮ ಜೀವನಶೈಲಿ ಅಳವಡಿಸಿಕೊಂಡರೆ ಅವರಿಗೆ ಹುಟ್ಟುವ ಮಗುವಿಗೆ ಈ ಸೋಂಕು ಖಂಡಿತ ಹರಡುವು
ದಿಲ್ಲ ಎಂದು ವೈದ್ಯರು ಖಾತರಿ ಕೊಡುತ್ತಾರೆ.

ಹೆದ್ದಾರಿ ಅಪಾಯಕಾರಿ...

ಏಡ್ಸ್ ರೋಗಿಗಳ ಸಂಖ್ಯೆ ರಾಷ್ಟ್ರೀಯ ಹೆದ್ದಾರಿ ಅಕ್ಕ–ಪಕ್ಕದಲ್ಲಿಯೇ ಹೆಚ್ಚಾಗಿರುವುದು ಗಮನಾರ್ಹ ಅಂಶ. ಲಾರಿ ಚಾಲಕರು ಈ ರೋಗ ಹರಡುವ ಪ್ರಮುಖ ವಾಹಕಗಳೆನಿಸಿಕೊಂಡಿದ್ದಾರೆ.

ಲಾರಿ ಚಾಲಕರು ದೂರದ ಊರು, ಬೇರೆ ರಾಜ್ಯಗಳಿಗೆ ಒಮ್ಮೆ ಲಾರಿ ತೆಗೆದುಕೊಂಡು ಹೊರಟರೆ ಅವರು ಮನೆಗೆ ವಾಪಸಾಗುವುದು 15–20 ದಿನಗಳೇ ಆಗಬಹುದು. ಆ ಸಂದರ್ಭದಲ್ಲಿ ಅವರು ಹೆದ್ದಾರಿಗುಂಟ ಇರುವ ವೇಶ್ಯಾಗೃಹಗಳಲ್ಲಿ ಅಸುರಕ್ಷಿತವಾಗಿ ಲೈಂಗಿಕ ಸಂಪ‍ರ್ಕ ನಡೆಸುತ್ತಾರೆ. ಅಂಥ ಚಾಲಕರು ಮನೆಗೆ ಬಂದು ತಮ್ಮ ಹೆಂಡಿಗೂ ರೋಗವನ್ನು ಹರಡುತ್ತಾರೆ.

ಬೆಂಬಲಕ್ಕೆ ಕ್ರಮಗಳು ಹಲವು

l ಎಚ್ಐವಿ ಪೀಡಿತರು ಸ್ವಂತ ಉದ್ಯೋಗ ಆರಂಭಿಸಲು ಸಾಲ, ಶಿಕ್ಷಣಕ್ಕಾಗಿ ಸಾಲ ಸೌಲಭ್ಯವಿದೆ

l ಚಿಕಿತ್ಸಾ ಕೇಂದ್ರಗಳಲ್ಲಿ ನೋಂದಾಯಿಸಿ
ಕೊಂಡ ಎಚ್‌ಐವಿ ಸೋಂಕಿತರಿಗಾಗಿ ವಧು–ವರರ ಸಮಾವೇಶ ನಡೆಯುತ್ತದೆ. ಪರಸ್ಪರ ಸೋಂಕು ಇರುವವರೇ ವಿವಾಹವಾದರೆ ಬೇರೆಯವರಿಗೆ ಸೋಂಕು ಹರಡುವುದನ್ನು ತಡೆಯಬಹುದು ಎಂಬುದು ಇದರ ಆಶಯ

l ಪಿಯುಸಿ ಮುಗಿಸಿ ಪದವಿಗೆ ಪ್ರವೇಶ ಪಡೆದ ಎಚ್ಐವಿ ಸೋಂಕಿತ ವಿದ್ಯಾರ್ಥಿಗಳು ಮತ್ತು ಏಡ್ಸ್ ಬಾಧಿತ ಪಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ

l ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧೋಪಚಾರ

l ಎಆರ್‌ಟಿ ಪ್ಲಸ್ ಕೇಂದ್ರಗಳಲ್ಲಿ ಸಿ‌ಬ್ಬಂದಿ ನೇಮಕದಲ್ಲಿ ಎಚ್‌ಐವಿ ಸೋಂಕಿತರಿಗೆ ಮೀಸಲಾತಿ ಸೌಲಭ್ಯ

 

ಧಾರವಾಡ ಜಿಲ್ಲೆಯಲ್ಲಿನ ಕಾರ್ಯಕ್ರಮಗಳು...

l ಮನೆ ಮನೆಗೆ ಮಾಹಿತಿ ಕಾರ್ಯಕ್ರಮದ ಅಡಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಜಾನಪದ ಕಲಾ ತಂಡಗಳ ಮೂಲಕ ಅರಿವು ಮೂಡಿಸುವುದು

l ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ

l ಕರಪತ್ರ, ಪೋಸ್ಟರ್, ಬ್ಯಾನರ್, ಭಿತ್ತಿಪತ್ರ, ಗೋಡೆ ಬರಹ ಹಾಗೂ ಟಿ.ವಿ. ಕಾರ್ಯಕ್ರಮಗಳ ಮೂಲಕ ಅರಿವು

l ಅನಾಥ ಮತ್ತು ಅಪಾಯದ ಅಂಚಿನಲ್ಲಿರುವ ಮಕ್ಕಳಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ರಕ್ಷಣೆ (2014ರಿಂದ ಈವರೆಗೆ 4487 ಮಕ್ಕಳಿಗೆ ಸೌಲಭ್ಯ)

l ವಸತಿ, ಪಡಿತರ, ವೃತ್ತಿ ಕೌಶಲ ತರಬೇತಿ ಸೌಲಭ್ಯ (ರಾಜೀವ ಗಾಂಧಿ ವಸತಿ ಯೋಜನೆಯಲ್ಲಿ 476 ಫಲಾನುಭವಿಗಳಿಗೆ ಮನೆ, ಅಂತ್ಯೋದಯ ಯೋಜನೆ ಅಡಿ 35 ಫಲಾನುಭವಿಗಳಿಗೆ ಪಡಿತರ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು