ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ: 8 ಸಾವು, 27 ಮಂದಿಗೆ ಗಾಯ
ಹುಬ್ಬಳ್ಳಿ: ಧಾರವಾಡದ ಬಾಡ ಕ್ರಾಸ್ನಲ್ಲಿ ನಡೆದ ಅಪಘಾತದ ನೆನಪು ಮಾಸುವ ಮುನ್ನವೇ, ಹುಬ್ಬಳ್ಳಿ ಹೊರವಲಯದ ಬೈಪಾಸ್ ರಸ್ತೆಯ ರೇವಡಿಹಾಳ ಸೇತುವೆ ಬಳಿ ಸೋಮವಾರ ಮಧ್ಯರಾತ್ರಿ ಬಸ್ ಮತ್ತು ಲಾರಿ ನಡುವೆ ಮತ್ತೊಂದು ಅಪಘಾತ ಸಂಭವಿಸಿದೆ. ಘಟನೆಯಲ್ಲಿ 8 ಮಂದಿ ಮೃತಪಟ್ಟಿದ್ದು, 27 ಜನ ಗಾಯಗೊಂಡಿದ್ದಾರೆ.
ಬಸ್ ಚಾಲಕರಾದ ಬೆಂಗಳೂರಿನ ಬ್ಯಾಡರಹಳ್ಳಿಯ ನಾಗರಾಜ ಆಚಾರ್ (56) ಹಾಗೂ ನಾಗಮಂಗಲದ ಅತಾವುಲ್ಲಾ ಖಾನ್ (40), ಲಾರಿ ಚಾಲಕ ಮಹಾರಾಷ್ಟ್ರದ ಕೊಲ್ಲಾಪುರದ ಅಕ್ಷಯ್ ಪಿಕಳೆ (28), ಮೈಸೂರಿನ ಮಂಡಿ ಮೊಹಲ್ಲಾದ ವಿದ್ಯಾರ್ಥಿ ಮೊಹಮ್ಮದ್ ದಯಾನ್ ಬೇಗ್ (17), ಇಚಲಕರಂಜಿಯ ಬಾಬಾಸೊ ಚೌಗಲೆ (59), ಉತ್ತರಪ್ರದೇಶದ ಲಖನೌನ ಅಕಿಫ್ (40), ಅಫಾಕ್ (40), ಆಂಧ್ರಪ್ರದೇಶದ ಚಿತ್ತೂರಿನ ಎಸ್. ಗೌಸ್ ಬಾಷಾ(50) ಮೃತರು.
ಗಾಯಾಳುಗಳ ಪೈಕಿ ಮಹಾರಾಷ್ಟ್ರದ 18 ಪ್ರಯಾಣಿಕರು, ನೇಪಾಳದ 5, ಕರ್ನಾಟಕದ ಮೂವರು ಹಾಗೂ ತಮಿಳುನಾಡಿನ ಒಬ್ಬರು ಇದ್ದಾರೆ. ಎಲ್ಲರೂ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆದು ಹೋಗಿದ್ದಾರೆ.
ರಾತ್ರಿ 12 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಬೆಂಗಳೂರಿನ ನ್ಯಾಷನಲ್ ಟ್ರಾವೆಲ್ಸ್ಗೆ ಸೇರಿದ ಬಸ್ 30 ಪ್ರಯಾಣಿಕರೊಂದಿಗೆ ಮಹಾರಾಷ್ಟ್ರದ ಕೊಲ್ಲಾಪುರದ ಇಚಲಕರಂಜಿಯಿಂದ ಬೆಂಗಳೂರಿಗೆ ಹೊರಟಿತ್ತು. ಕಿರಿದಾದ ಬೈಪಾಸ್ ರಸ್ತೆಯಲ್ಲಿ ಬಸ್ ಚಾಲಕ ನಾಗರಾಜ, ಮುಂದೆ ಹೋಗುತ್ತಿದ್ದ ಟ್ರಾಕ್ಟರ್ ಹಿಂದಿಕ್ಕಲು ಬಸ್ ಅನ್ನು ಬಲಕ್ಕೆ ತಿರುಗಿಸಿದ್ದಾರೆ. ಆಗ ಎದುರಿಗೆ ಬಂದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದಿಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಉತ್ತರ ಸಂಚಾರ ಠಾಣೆ ಪೊಲೀಸರು ತಿಳಿಸಿದರು.
ಇದನ್ನೂ ಓದಿ: ಧಾರವಾಡದ ಬಳಿ ರಸ್ತೆ ಭೀಕರ ಅಪಘಾತ: 9 ಮಂದಿ ಸಾವು, 13 ಜನರಿಗೆ ಗಾಯ
ಮಹಾರಾಷ್ಟ್ರದ ಲಾರಿಯು ದಾವಣಗೆರೆಯಿಂದ ಪುಣೆಗೆ ಅಕ್ಕಿ ಚೀಲಗಳನ್ನು ತುಂಬಿಕೊಂಡು ಹೊರಟಿತ್ತು. ಲಾರಿ ಮಾಲೀಕ ಅಕ್ಷಯ್ ಅವರೇ ಲಾರಿ ಚಾಲನೆ ಮಾಡುತ್ತಿದ್ದರು. ಘಟನೆಯಲ್ಲಿ ಟ್ರಾಕ್ಟರ್ನಲ್ಲಿದ್ದ ನಾಲ್ವರು ಅಚ್ಚರಿಯ ರೀತಿಯಲ್ಲಿ ಪಾರಾಗಿದ್ದಾರೆ ಎಂದು ಹೇಳಿದರು.
ಕಂಬನಿ ಮಿಡಿದ ಪ್ರಧಾನಿ: ಮೃತರ ಕುಟುಂಬಕ್ಕೆ ಕೇಂದ್ರ, ರಾಜ್ಯದಿಂದ ಲಕ್ಷ ಪರಿಹಾರ
ಘಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಟ್ವಿಟರ್ನಲ್ಲಿ ಕಂಬನಿ ಮಿಡಿದಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದಿರುವ ಅಪಘಾತವು ಮನಸ್ಸಿಗೆ ನೋವನ್ನುಂಟು ಮಾಡಿದೆ. ಅವರ ಕುಟುಂಬದ ನೋವಿನಲ್ಲಿ ನಾನೂ ಭಾಗಿ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದಿರುವ ಅವರು, ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿಎಂಎನ್ಆರ್ಎಫ್) ಮೃತರ ಕುಟುಂಬದವರಿಗೆ ತಲಾ ₹2 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ₹50 ಸಾವಿರ ಪರಿಹಾರ ಘೋಷಿಸಿದ್ದಾರೆ.
ಪ್ರಧಾನಿ ಟ್ವೀಟ್ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಟ್ವೀಟ್ ಮಾಡಿದ್ದು, ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ₹5 ಲಕ್ಷ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ. ಇದರೊಂದಿಗೆ, ಮೃತರ ಕುಟುಂಬದವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ತಲಾ ₹7 ಲಕ್ಷ ಪರಿಹಾರ ಸಿಕ್ಕಂತಾಗಿದೆ.
ಅಪಘಾತಕ್ಕೀಡಾದ ಲಾರಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.