ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ–ಧಾರವಾಡ| ನನಸಾಗದ ನಿರಂತರ ನೀರಿನ ಕನಸು: ಮಹತ್ವಾಕಾಂಕ್ಷಿ ಯೋಜನೆ ವಿಳಂಬ

ವಿಳಂಬಗೊಂಡ ಮಹತ್ವಾಕಾಂಕ್ಷಿ ಯೋಜನೆ; ಎರಡು ವರ್ಷದ ಹಿಂದೆ ಮರು ಟೆಂಡರ್‌
Last Updated 9 ಜೂನ್ 2022, 6:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಿರಂತರ ನೀರು ಪಡೆಯುವ ಅವಳಿನಗರದ ನಾಗರಿಕರ ಕನಸು ವರ್ಷಗಳಾದರೂ ನನಸಾಗಿಲ್ಲ. ಯೋಜನೆ ಆರಂಭವಾದಾಗ ಅವರ ಮನಸ್ಸಲ್ಲಿ ಚಿಗುರೊಡೆದಿದ್ದ ಕನಸು, ಏಳೆಂಟು ವರ್ಷಗಳಾದರೂ ಮುಗಿಯದ ಕಾಮಗಾರಿಯಿಂದಾಗಿ ಕಮರಿದೆ. ‘ಸರ್ಕಾರಿ ಯೋಜನೆಗಳೇ ಹೀಗೆ...’ ಎಂಬ ಹತಾಶೆಯನ್ನು ಮೂಡಿಸಿದೆ.

24/7 ನೀರಿನ ಕನಸು ಚಿಗುರೊಡೆದಿದ್ದು 2008ರಲ್ಲಿ. ಪ್ರಾಯೋಗಿಕವಾಗಿ 8 ವಾರ್ಡ್‌ಗಳಿಗೆ ನೀರು ಹರಿದಾಗ, ಇಡೀ ಮಹಾ
ನಗರಕ್ಕೆ ಯೋಜನೆಯನ್ನು ವಿಸ್ತರಿಸಲು ಆಸಕ್ತಿ ತೋರಿದ ಅಂದಿನ ಸರ್ಕಾರ, ಸಮಗ್ರ ಯೋಜನೆ ರೂಪಿಸುವಂತೆ ಸೂಚನೆ ನೀಡಿತ್ತು. ಅದರಂತೆ ತಯಾರಾದ ಯೋಜನೆಯನ್ನು ವಿಶ್ವಬ್ಯಾಂಕ್‌ನ ಆರ್ಥಿಕ ನೆರವಿನೊಂದಿಗೆ ಎರಡು ಹಂತಗಳಲ್ಲಿ,ಜಾರಿಗೆ ತರಲು ಸರ್ಕಾರ 2013ರಲ್ಲಿ ಸರ್ಕಾರ ಅನುಮೋದನೆ ನೀಡಿತು. ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಅಭಿವೃದ್ಧಿ ನಿಗಮಕ್ಕೆ (ಕೆಯುಐಡಿಎಫ್‌ಸಿ) ಅದರ ಹೊಣೆ ನೀಡಲಾಯಿತು.

ಮೊದಲ ಹಂತದಲ್ಲಿ, 32 ವಾರ್ಡ್‌ಗಳಿಗೆ (ಅಂದು ಇದ್ದ 67 ವಾರ್ಡ್‌ಗಳ ಪೈಕಿ) 24/7 ನೀರು ಒದಗಿಸುವ ಯೋಜನೆಯನ್ನು ಕೆಯುಐಡಿಎಫ್‌ಸಿ ರೂಪಿಸಲಾಯಿತು. ಅಂತಿಮವಾಗಿ 18 ವಾರ್ಡ್‌ಗಳಿಗಷ್ಟೇ ನೀರು ಹರಿಯಿತು. ನಂತರ, 2017ರಲ್ಲಿ ವಿವೋಲಿಯಾ ಇಂಡಿಯಾ ವಾಟರ್‌ ಲಿಮಿಟೆಡ್ ಕಂಪನಿಗೆ ಟೆಂಡರ್ ಪಡೆದರೂ, ಅಂದುಕೊಂಡಂತೆ ಕಾಮಗಾರಿ ನಡೆಯಲಿಲ್ಲ. ಹಾಗಾಗಿ, ಕಂಪನಿಯ ಟೆಂಡರ್ ರದ್ದುಪಡಿಸಲಾಯಿತು.

ಮರು ಟೆಂಡರ್: 2020ರಲ್ಲಿ ಕೆಯುಐಡಿಎಫ್‌ಸಿ ಕರೆದ ಮರು ಟೆಂಡರ್ ಚೆನ್ನೈ ಮೂಲದ ಎಲ್‌ ಆ್ಯಂಡ್ ಟಿ ಕಂಪನಿ ಪಾಲಾಯಿತು. ನಂತರ, ಕಾಮಗಾರಿ ತುಸು ಚುರುಕುಗೊಂಡಿದ್ದರಿಂದ ಸದ್ಯ ನೃಪತುಂಗ ಬೆಟ್ಟ, ಕೇಶ್ವಾಪುರ ಹಾಗೂ ಪಾಲಿಕೆ ಬಳಿ ಇರುವ ಜಲ ಸಂಗ್ರಹಾಗಾರಗಳಿಂದ ಹೆಚ್ಚುವರಿಯಾಗಿ 8 ವಾರ್ಡ್‌ಗಳಿಗೆ ನೀರು ಬಂತು. ಸದ್ಯ 26 ವಾರ್ಡ್‌ಗಳು ನಿರಂತರ ನೀರಿನ ಪ್ರಯೋಜನ ಪಡೆಯುತ್ತಿದೆ. ಉಳಿದ 56 ವಾರ್ಡ್‌ಗಳಿಗೆ ನೀರು ಹರಿಸುವ ಕಾಮಗಾರಿ ಪ್ರಗತಿಯಲ್ಲಿದೆ ಎನ್ನುತ್ತಾರೆ ಜಲಮಂಡಳಿ ಅಧಿಕಾರಿಗಳು.

ಮಲಪ್ರಭಾದಿಂದ ನಗರಕ್ಕೆ ಹೆಚ್ಚುವರಿ ನೀರು ಹರಿಸುವ ಪೈಪ್‌ಲೈನ್ ಕಾಮಗಾರಿ, ನಗರದೊಳಗೆ ಪೈಪ್‌ಲೈನ್ ಜಾಲ ವಿಸ್ತರಣೆ, ಜಲಸಂಗ್ರಹಾಗಾರ ಹಾಗೂ ಜಾಕ್‌ವೆಲ್‌ ನಿರ್ಮಾಣ ಕಾರ್ಯಗಳು ಪ್ರಗತಿಯಲ್ಲಿವೆ. ಸದ್ಯ ಗರಿಷ್ಠ ಏಳು ದಿನಗಳವರೆಗೆ ನೀರು ಪೂರೈಕೆಯಾಗುತ್ತಿರುವುದನ್ನು ಎರಡು ಮೂರು ದಿನಗಳಿಗೆ ಇಳಿಸುವುದಾಗಿ ಕಂಪನಿ ಹೇಳಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಯೋಜನಾ ವೆಚ್ಚ ಹೆಚ್ಚಳ:ಯೋಜನೆಯ ವಿಳಂಬದಿಂದಾಗಿ ಆರಂಭದಲ್ಲಿ ₹763 ಕೋಟಿ ಇದ್ದ ಯೋಜನಾ ವೆಚ್ಚ ಇದೀಗ ₹1,207 ಕೋಟಿಗೆ ಏರಿಕೆಯಾಗಿದೆ. ಸದ್ಯ ಗುತ್ತಿಗೆ ಪಡೆದಿರುವ ಕಂಪನಿಯುಐದು ವರ್ಷಗಳೊಳಗೆ ಕಾಮಗಾರಿ ಮುಗಿಸಬೇಕು. ನಂತರ ಏಳು ವರ್ಷ ನಿರ್ವಹಣೆ ಮಾಡಿ, ಮಹಾನಗರ ಪಾಲಿಕೆಗೆ ಹಸ್ತಾಂತರಿಸಬೇಕು.

‘ಮಹಾನಗರದ 24/7 ನೀರಿನ ಕನಸಿಗೆ ಚಾಲನೆ ಸಿಕ್ಕಿದ್ದು ಬಿ.ಎಸ್. ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ. ನಂತರ, ವಿವಿಧ ಕಾರಣಗಳಿಗೆ ಯೋಜನೆಯು ವಿಳಂಬವಾಗುತ್ತಾ ಬಂತು. ಬೇಗನೇ ಮುಗಿಸಬಹುದಾಗಿದ್ದ ಯೋಜನೆ ಇಷ್ಟು ವರ್ಷವಾದರೂ ಕುಂಟುತ್ತಾ ಸಾಗಿರುವುದಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಕಾರಣ’ ಎಂದು ಮಾಜಿ ಮೇಯರ್‌ ಡಾ. ಪಾಂಡುರಂಗ ಪಾಟೀಲ ಬೇಸರ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT