ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ–ಧಾರವಾಡ | ಸ್ಮಾರ್ಟ್‌ ಸಿಟಿ: 59 ಯೋಜನೆ ಹಸ್ತಾಂತರ

ಹುಬ್ಬಳ್ಳಿ–ಧಾರವಾಡ ಮಹಾನಗರದಲ್ಲಿ ಎಚ್‌ಡಿಎಸ್‌ಸಿಎಲ್‌ನಿಂದ ಅಭಿವೃದ್ಧಿ ಕಾಮಗಾರಿ
Published 19 ಜೂನ್ 2024, 4:48 IST
Last Updated 19 ಜೂನ್ 2024, 4:48 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಸ್ಮಾರ್ಟ್‌ ಸಿಟಿ ಲಿಮಿಟೆಡ್‌ನಿಂದ (ಎಚ್‌ಡಿಎಸ್‌ಸಿಎಲ್‌) ಮಹಾನಗರ ವ್ಯಾಪ್ತಿಯಲ್ಲಿ ಕೈಗೊಂಡಿರುವ ಒಟ್ಟು 62 ಅಭಿವೃದ್ಧಿ ಯೋಜನೆಗಳ ಪೈಕಿ 59 ಯೋಜನೆಗಳು ಈಗಾಗಲೇ ಪೂರ್ಣಗೊಂಡಿದ್ದು, ಇತ್ತೀಚೆಗೆ ಅವುಗಳನ್ನು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಗೆ ಅಧಿಕೃತವಾಗಿ ಹಸ್ತಾಂತರ ಮಾಡಲಾಗಿದೆ.

ಹುಬ್ಬಳ್ಳಿಯಲ್ಲಿ ಹಲವು ಹಂತದಲ್ಲಿ ತೋಳನಕೆರೆ ಅಭಿವೃದ್ಧಿ ಮಾಡಿರುವುದು, ಜನತಾ ಬಜಾರ್‌ನಲ್ಲಿ ಮಾರುಕಟ್ಟೆ ನಿರ್ಮಾಣ, ಈಜುಗೋಳ ಮರುನಿರ್ಮಾಣ, ಉಣಕಲ್‌ಕೆರೆ ಅಭಿವೃದ್ಧಿ ಮಾಡಿರುವುದು ಸೇರಿ ಒಟ್ಟು 59 ಯೋಜನೆಗಳ ಕಾಮಗಾರಿ ಎಚ್‌ಡಿಎಸ್‌ಸಿಎಲ್‌ನಿಂದ ಪೂರ್ಣಗೊಂಡಿದೆ. ಸಿದ್ಧವಾಗಿದ್ದ ಬಹುತೇಕ ಯೋಜನೆಗಳನ್ನು ಈ ಭಾಗದ ಜನಪ್ರತಿನಿಧಿಗಳು 2023 ವರ್ಷಾರಂಭದಲ್ಲಿಯೇ ಲೋಕಾರ್ಪಣೆ ಕೂಡಾ ನೆರವೇರಿಸಿದ್ದಾರೆ. ಅದರಲ್ಲಿ ಕೆಲವು ಯೋಜನೆಗಳು ಇನ್ನೂ ಬಳಕೆಗೆ ತೆರೆದುಕೊಂಡಿಲ್ಲ.

ಈ ವರ್ಷ ನಡೆದ ಲೋಕಸಭೆ ಚುನಾವಣೆ ಮುಕ್ತಾಯವಾದ ಬಳಿಕವಷ್ಟೇ ಕಳೆದ ವಾರ ಎಲ್ಲ 59 ಯೋಜನೆಗಳನ್ನು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಗೆ ಎಚ್‌ಡಿಎಸ್‌ಸಿಎಲ್‌ ಅಧಿಕಾರಿಗಳು ಅಧಿಕೃತವಾಗಿ ಹಸ್ತಾಂತರಿಸಿದ್ದಾರೆ. ಹಸ್ತಾಂತರ ಪ್ರಕ್ರಿಯೆಗೂ ಮೊದಲೇ ₹8.5 ಕೋಟಿ ವೆಚ್ಚದ ಪಬ್ಲಿಕ್‌ ಬೈಸೈಕಲ್‌ ಶೇರಿಂಗ್‌ ಯೋಜನೆ, ₹20.51 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಿದ ತೋಳನಕೆರೆ, ₹2.59 ಕೋಟಿ ವೆಚ್ಚದ ವಿದ್ಯುತ್‌ ಚಿತಾಗಾರ, ₹21.44 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಿದ ನೆಹರು ಮೈದಾನ ಸೇರಿ ಬಹುತೇಕ ಯೋಜನೆಗಳು ಜನರು ಬಳಕೆ ಮಾಡುತ್ತಿದ್ದಾರೆ. ಆದರೆ, ಮಹಾನಗರ ಪಾಲಿಕೆಗೆ ಈಗಷ್ಟೇ ಹಸ್ತಾಂತರ ಮಾಡಲಾಗಿದೆ.

‘ಸ್ಮಾರ್ಟ್‌ ಸಿಟಿ ಯೋಜನೆಯಡಿ ಮಹಾನಗರ ವ್ಯಾಪ್ತಿಯಲ್ಲಿ ಕೈಗೊಂಡಿದ್ದ ವಿವಿಧ ಯೋಜನೆಗಳ ಪೈಕಿ ಪೂರ್ಣವಾದ 59 ಯೋಜನೆಗಳನ್ನು ಎಚ್‌ಡಿಎಸ್‌ಸಿಎಲ್‌ ಅಧಿಕಾರಿಗಳು ಇತ್ತೀಚೆಗೆ ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಿದ್ದಾರೆ. ಈ ಬಗ್ಗೆ ಸವಿಸ್ತಾರ ವಿಷಯವನ್ನು ಮುಂಬರುವ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳಲಾಗುವುದು. ಪಾಲಿಕೆ ಸಾಮಾನ್ಯಸಭೆ ಅನುಮೋದನೆ ಹಾಗೂ ಸರ್ಕಾರದ ನಿರ್ದೇಶನಗಳನ್ನು ಆಧರಿಸಿ ನೂತನ ಮಾರುಕಟ್ಟೆಗಳ ಮಳಿಗೆಗಳನ್ನು ಹಸ್ತಾಂತರಿಸಲಾಗುವುದು’ ಎಂದು ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ‘ಪ್ರಜಾವಾಣಿ‘ಗೆ ತಿಳಿಸಿದರು.

‘ಹುಬ್ಬಳ್ಳಿಯ ಗಣೇಶಪೇಟೆಯಲ್ಲಿ ₹5.07 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಮೀನು ಮಾರುಕಟ್ಟೆ ಹಾಗೂ ಚನ್ನಮ್ಮ ವೃತ್ತ ಪಕ್ಕದ ಜನತಾ ಬಜಾರ್‌ನಲ್ಲಿ ₹18.35 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಮಾರುಕಟ್ಟೆಗಳು ಉದ್ಘಾಟನೆ ಆಗಿದ್ದರೂ ಬಳಕೆ ಆಗುತ್ತಿಲ್ಲ. ಇದರಿಂದ ಕೆಲವು ಸಮಸ್ಯೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಆದಷ್ಟು ಬೇಗನೆ ಪಾಲಿಕೆ ಸಭೆ ಅನುಮೋದನೆ ಪಡೆದು ಮಳಿಗೆಗಳನ್ನು ಸರ್ಕಾರಿ ನಿಯಮಾನುಸಾರ ಹಂಚಿಕೆ ಮಾಡುತ್ತೇವೆ. ನೂತನ ಮಾರುಕಟ್ಟೆ ನಿರ್ಮಾಣದ ಮೊದಲು ಹಳೇ ಮಳಿಗೆಗಳನ್ನು ಹೊಂದಿದವರಿಗೇ ಪ್ರಾಶಸ್ತ್ಯದಲ್ಲಿ ನೂತನ ಮಳಿಗೆ ವಹಿಸಲಾಗುತ್ತಿದೆ. ಚಾಲ್ತಿಯಲ್ಲಿರುವ ದರ ಆಧರಿಸಿ ಮಾರುಕಟ್ಟೆ ಬಾಡಿಗೆಯನ್ನೇ ನಿಗದಿ ಮಾಡಲಾಗುವುದು’ ಎಂದು ಹೇಳಿದರು.

ಸ್ಮಾರ್ಟ್‌ ಸಿಟಿ ಯೋಜನೆಯಡಿ ನಿರ್ಮಿಸಿರುವ ನೂತನ ಕಟ್ಟಡಗಳನ್ನು ಈಚೆಗೆ ಹಸ್ತಾಂತರ ಮಾಡಿದ್ದಾರೆ. ಈ ತಿಂಗಳು ನಡೆಯುವ ಪಾಲಿಕೆ ಸಾಮಾನ್ಯ ಸಭೆಯಲ್ಲಿ ವಿಷಯ ಮಂಡಿಸಿ ಕಟ್ಟಡಗಳ ಬಳಕೆಗೆ ಕ್ರಮ ವಹಿಸಲಾಗುವುದು

-ಈಶ್ವರ ಉಳ್ಳಾಗಡ್ಡಿ ಹು–ಧಾ ಪಾಲಿಕೆ ಆಯುಕ್ತ

ಮೂರು ಯೋಜನೆಗಳು ಬಾಕಿ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 50:50 ಅನುಪಾತದಲ್ಲಿ ಹುಬ್ಬಳ್ಳಿ–ಧಾರವಾಡ ಸ್ಮಾರ್ಟ್‌ ಸಿಟಿ ಯೋಜನೆಗೆ ಸಾವಿರ ಕೋಟಿ ಅನುದಾನಕ್ಕೆ ಮಂಜೂರಿ ನೀಡಿದ್ದು ಅಲ್ಲದೇ ಈವರೆಗೆ ₹857 ಕೋಟಿ ಅನುದಾನ ಬಿಡುಗಡೆ ಮಾಡಿವೆ. ಅದರಲ್ಲಿ ಎಚ್‌ಡಿಎಸ್‌ಸಿಎಲ್‌ ₹806 ಕೋಟಿ ವೆಚ್ಚಮಾಡಿ 59 ಯೋಜನೆಗಳನ್ನು ಪೂರ್ಣಗೊಳಿಸಿದೆ. ಉಣಕಲ್‌ ಕೆರೆ ಎರಡನೇ ಹಂತದಲ್ಲಿ ₹36.59 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡುವುದು ₹39.63 ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿ ಹಳೇ ಬಸ್‌ ನಿಲ್ದಾಣ ನಿರ್ಮಾಣ ಹಾಗೂ ₹160 ಕೋಟಿ ವೆಚ್ಚದಲ್ಲಿ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ ನಿರ್ಮಾಣ ಮಾಡುವುದು ಸೇರಿ ಒಟ್ಟು ಮೂರು ಯೋಜನೆಗಳು ಇನ್ನೂ ಪ‍್ರಗತಿಯಲ್ಲಿವೆ. ಮೊದಲಿನ ಎರಡು ಕಾಮಗಾರಿಗಳು ಮುಕ್ತಾಯ ಹಂತಕ್ಕೆ ತಲುಪಿವೆ. ಆದರೆ ಕ್ರೀಡಾ ಸಂಕೀರ್ಣ ನಿರ್ಮಾಣ ಕಾಮಗಾರಿ ಶೇ 40 ರಷ್ಟು ಮಾತ್ರ ಪೂರ್ಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT