ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ ನಗರದ ಅರ್ಧದಷ್ಟು ಆಟೊಗಳಿಗೂ ಎಫ್‌ಸಿ ಇಲ್ಲ

ಹಣ ಉಳಿಸಲು ನಿಯಮ ಪಾಲಿಸದೆ ಚಾಲಕರು
Last Updated 5 ಜುಲೈ 2018, 14:17 IST
ಅಕ್ಷರ ಗಾತ್ರ

ಹುಬ್ಬಳ್ಳಿ:ಪೂರ್ವ ವಿಭಾಗದ ಪ್ರಾದೇಶಿಕ ಸಾರಿಗೆ ಕಚೇರಿ ವ್ಯಾಪ್ತಿಯಲ್ಲಿ 14 ಸಾವಿರ ಆಟೊ ರಿಕ್ಷಾ ಇದ್ದರೂ, ಅವುಗಳಲ್ಲಿ ಪ್ರತಿ ವರ್ಷ ಸುಸ್ಥಿತಿ ಪ್ರಮಾಣ ಪತ್ರ (ಫಿಟ್‌ನೆಸ್ ಸರ್ಟಿಫಿಕೆಟ್) ಪಡೆಯುವವರು ಸಂಖ್ಯೆ ಕೇವಲ 5 ಸಾವಿರ ಮಾತ್ರ! ಅಲ್ಲದೆ ಅರ್ಧಕ್ಕಿಂತ ಹೆಚ್ಚಿನ ಮಂದಿ ವಿಮೆ ನವೀಕರಣ ಸಹ ಮಾಡುವುದಿಲ್ಲ.

ಆಟೊ ಮಾಲೀಕರ ಇಂತಹ ಪ್ರವೃತ್ತಿಗೆ ಕಡಿವಾಣ ಹಾಕಲು ನಿರ್ಧರಿಸಿರುವ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳು ಎಫ್‌ಸಿ ಪಡೆಯದ, ವಿಮೆ ಮಾಡಿಸದ, ಪರ್ಮಿಟ್ ನವೀಕರಣ ಮಾಡದವರ ವಿರುದ್ಧ ಇದೇ 13ರಿಂದ ಅಭಿಯಾನ ನಡೆಸಲು ಸಿದ್ಧತೆ ನಡೆಸಿದ್ದಾರೆ. ಹುಬ್ಬಳ್ಳಿ– ಧಾರವಾಡ ಸಂಚಾರ ವಿಭಾಗದ ಪೊಲೀಸ್ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸುವ ಅಧಿಕಾರಿಗಳು ಅಕ್ರಮ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ.

ಮೋಟಾರು ವಾಹನ ಕಾಯ್ದೆಯ ಅನ್ವಯ ಮೂರನೇ ವ್ಯಕ್ತಿಯ ವಿಮೆ ಮಾಡಿಸುವುದು ಕಡ್ಡಾಯ. ಇದು ಇಲ್ಲದಿದ್ದರೆ ಅಪಘಾತ ಸಂಭವಿಸಿ ಪ್ರಯಾಣಿಕರಿಗೆ ಪ್ರಾಣ ಹಾನಿಯಾದರೆ ವಿಮಾ ಮೊತ್ತ ಸಿಗುವುದಿಲ್ಲ. ಹಣ ಉಳಿಸಲು ಮುಂದಾಗುವ ಚಾಲಕರು ವಿಮಾ ಮೊತ್ತವನ್ನೂ ಭರಿಸುತ್ತಿಲ್ಲ. ಪ್ರತಿ ವರ್ಷ ಎಫ್‌ಸಿ ಸಹ ಪಡೆದುಕೊಳ್ಳಬೇಕು. ಅದಕ್ಕಾಗಿ ₹500 ಶುಲ್ಕ ಭರಿಸಬೇಕಾಗುತ್ತದೆ. ವಾಹನವನ್ನು ಪರೀಕ್ಷಿಸುವ ಆರ್‌ಟಿಒ ಸಿಬ್ಬಂದಿ ಅದು ಬಳಕೆಗೆ ಯೋಗ್ಯ ಇದೆ ಎಂದು ಖಚಿತವಾದ ನಂತರ ಪ್ರಮಾಣ ಪತ್ರ ನೀಡುತ್ತಾರೆ. ಚಾಲಕರು ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ಇರುವ ಈ ನಿಯಮವನ್ನೂ ಗಾಳಿಗೆ ತೂರಲಾಗುತ್ತಿದೆ.

ವಾಹನ ಚಾಲನಾ ಪರವಾನಗಿ ಇಲ್ಲದ ನೂರಾರು ಚಾಲಕರು ಇದ್ದಾರೆ ಎಂಬ ವಿಷಯವೂ ರಹಸ್ಯವಾಗಿ ಉಳಿದಿಲ್ಲ. ಖುದ್ದು ಪೊಲೀಸ್ ಕಮಿಷನರ್ ಅಂತಹ ಚಾಲಕರಿಗೆ ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು. ಸುಮಾರು 200 ಮಂದಿಗೆ ಡಿಎಲ್ ಪಡೆದುಕೊಳ್ಳಲು ಖುದ್ದು ಪೊಲೀಸರು ಸಹಾಯ ಮಾಡಿದ್ದಾರೆ. ಅರ್ಜಿ ನೀಡಿರುವವರ ಡಿಎಲ್ ಕೈಗೆ ಬರುವವರೆಗೂ ಯಾವುದೇ ಕಾರಣಕ್ಕೂ ಆಟೊ ಓಡಿಸಬಾರದು ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.

‘ನಮ್ಮ ವಿಭಾಗದ ವ್ಯಾಪ್ತಿಯಲ್ಲಿ ಸುಮಾರು 14 ಸಾವಿರ ಆಟೊ ರಿಕ್ಷಾಗಳು ಇವೆ. ಅವುಗಳಲ್ಲಿ ಶೇ20ರಷ್ಟು ಸ್ಕ್ರಾಪ್ ಆಗಿವೆ ಎಂದುಕೊಂಡರೂ ಉಳಿದ ವಾಹನಗಳ ಮಾಲೀಕರು ಎಫ್‌ಸಿ ಮಾಡಿಸಬೇಕು. ಆದರೆ ಅಷ್ಟೊಂದು ಸಂಖ್ಯೆಯಲ್ಲಿ ಪ್ರತಿ ವರ್ಷ ಎಫ್‌ಸಿ ಪಡೆಯುತ್ತಿಲ್ಲ. ಆದ್ದರಿಂದ ವಾಹನಗಳ ದಾಖಲೆ ಪರಿಶೀಲನೆ ಮಾಡುವ ಅಭಿಯಾನವನ್ನೇ ನಡೆಸಲಾಗುತ್ತಿದೆ’ ಎನ್ನುತ್ತಾರೆ ಪ್ರಾದೇಶಿಕ ಸಾರಿಗೆ ಅಧಿಕಾರಿ (ಪೂರ್ವ) ಅಪ್ಪಯ್ಯ ನಾಲತವಾಡ.

‘ಕ್ರಮ ಕೈಗೊಳ್ಳುವ ಮಾಹಿತಿ ಸಿಕ್ಕ ನಂತರ ಎಫ್‌ಸಿ ಪಡೆಯಲು ಬರುವ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಮೊದಲು ದಿನಕ್ಕೆ ಎರಡು– ಮೂರು ಬರುತ್ತಿದ್ದವು. ಆದರೆ ಈಗ ಏಳೆಂಟು ಬರುತ್ತಿವೆ. ಎಲ್ಲ ಆಟೊ ಚಾಲಕರು ಈ ಕೂಡಲೇ ವಾಹನದ ಎಫ್‌ಸಿ ಮಾಡಿಸಿಕೊಳ್ಳಬೇಕು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT