ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಮಹಾನಗರ ಜಿಲ್ಲಾ ಘಟಕ ಅಧ್ಯಕ್ಷ ಗಾದಿಗೆ ತೀವ್ರ ಪೈಪೋಟಿ

ಧಾರವಾಡದ ಐವರು, ಹುಬ್ಬಳ್ಳಿಯ ಎಂಟು ಮಂದಿ ಅರ್ಜಿ ಸಲ್ಲಿಕೆ; ಐದು ಹೆಸರು ರಾಜ್ಯ ಘಟಕಕ್ಕೆ ಶಿಫಾರಸು
Last Updated 17 ಡಿಸೆಂಬರ್ 2019, 10:18 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಗಾದಿಗೆ ಪಕ್ಷದೊಳಗೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಒಟ್ಟು 13 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಇದರಲ್ಲಿ ಐವರ ಹೆಸರನ್ನು ಜಿಲ್ಲಾ ಕೋರ್‌ ಕಮಿಟಿ ಅಂತಿಮಗೊಳಿಸಿ ರಾಜ್ಯ ಘಟಕಕ್ಕೆ ಕಳುಹಿಸಿದೆ. ಮುಂದಿನ ಮೂರು ವರ್ಷಗಳ ಅವಧಿಗೆ ಯಾರು ನೂತನ ಅಧ್ಯಕ್ಷರಾಗಲಿದ್ದಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಧಾರವಾಡದಿಂದ ವೀರೇಶ ಅಂಚಟಗೇರಿ, ಸಂಜಯ ಕಪಟಕರ, ಅರವಿಂದ ಏಗನಗೌಡ, ಶಿವು ಹಿರೇಮಠ, ಪ್ರಕಾಶ ಗೋಡಬೊಲೆ ಹಾಗೂ ಹುಬ್ಬಳ್ಳಿಯಿಂದ ಮಲ್ಲಿಕಾರ್ಜುನ ಸಾವಕಾರ, ತಿಪ್ಪಣ್ಣ ಮಜ್ಜಗಿ, ಶಿವಾನಂದ ಮುತ್ತಣ್ಣವರ, ಸತೀಶ ಶೇಜವಾಡಕರ, ವೀರೇಶ ಸಂಗಳದ, ಸಿದ್ದು ಮೊಗಲಿಶೆಟ್ಟರ ಮತ್ತು ಶಿವು ಮೆಣಸಿನಕಾಯಿ ಅರ್ಜಿ ಸಲ್ಲಿಸಿದ್ದಾರೆ.

ಸಂಜಯ ಕಪಟಕರ, ವೀರೇಶ ಅಂಚಟಗೇರಿ, ಮಲ್ಲಿಕಾರ್ಜುನ ಸಾವಕಾರ, ತಿಪ್ಪಣ್ಣ ಮಜ್ಜಗಿ ಮತ್ತು ಸತೀಶ ಶೇಜವಾಡಕರ ಅವರ ಹೆಸರನ್ನು ಜಿಲ್ಲಾ ಕೋರ್‌ ಕಮಿಟಿ ಅಂತಿಮಗೊಳಿಸಿದೆ ಎಂದು ತಿಳಿದುಬಂದಿದೆ.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ರುವುದರಿಂದ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಳಕ್ಕೆ ಮುಖ್ಯ ಕಾರಣ ಎನ್ನಲಾಗಿದೆ.

ಈ ಬಾರಿ ಧಾರವಾಡಕ್ಕೆ ಅವಕಾಶ ನೀಡಬೇಕು ಎಂಬ ಒತ್ತಡ ಹೆಚ್ಚಾಗಿದೆ. ಅಲ್ಲದೇ, ಆಕಾಂಕ್ಷಿಗಳ ಸಂಖ್ಯೆ ಅಧಿಕ ಇರುವುದರಿಂದ ಯಾರನ್ನು ಆಯ್ಕೆ ಮಾಡಬೇಕು ಎಂಬುದು ಪಕ್ಷದ ವರಿಷ್ಠರಿಗೆ ತಲೆನೋವಾಗಿದೆ.

ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ 55 ವರ್ಷ ವಯೋಮಿತಿ ನಿಗದಿ ಪಡಿಸಲಾಗಿದೆ. ಹೀಗಾಗಿ ಪಕ್ಷಕ್ಕಾಗಿ ದುಡಿದ ಹಿರಿಯರು ಅವಕಾಶ ವಂಚಿತರಾಗಿದ್ದಾರೆ.

‘ಅರ್ಜಿ ಸಲ್ಲಿಸಿರುವ ಬಹುತೇಕರು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನ ನಿರ್ವಹಿಸಲು ಸಮರ್ಥರಿದ್ದಾರೆ. ಇವರಲ್ಲಿ ಪಕ್ಷ ಸಂಘಟನೆಗೆ ತೊಡಗಿಸಿಕೊಂಡವರು, ಕ್ಷೇತ್ರದ ಜನರು ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ಹೆಚ್ಚು ಒಡನಾಟ ಇಟ್ಟುಕೊಂಡವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತದೆ’ ಎಂದು ಮಹಾನಗರ ಜಿಲ್ಲಾ ಘಟಕದ ಹಾಲಿ ಅಧ್ಯಕ್ಷ ನಾಗೇಶ ಕಲಬುರ್ಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಂದು ವಾರದೊಳಗೆ ನೂತನ ಅಧ್ಯಕ್ಷರ ಹೆಸರನ್ನು ಅಂತಿಮಗೊಳಿಸಿ, ಘೋಷಣೆ ಮಾಡುವ ಸಾಧ್ಯತೆ ಇದೆ. 2020ಕ್ಕೆ ನೂತನ ಅಧ್ಯಕ್ಷರು ಅಧಿಕಾರ ವಹಿಸಿಕೊಳ್ಳಲಿದ್ದಾರೆ’ ಎಂದು ಹೇಳಿದರು.

ತಡ ರಾತ್ರಿ ವರೆಗೂ ಸಭೆ: ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷರ ಹೆಸರನ್ನು ಅಂತಿಮಗೊಳಿಸುವ ಸಂಬಂಧ ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಜಿಲ್ಲಾ ಕೋರ್‌ ಕಮಿಟಿ ಸಭೆ ಒಮ್ಮತಕ್ಕೆ ಬರುಲು ಸಾಧ್ಯವಾಗದ ಕಾರಣ ಸೋಮವಾರ ರಾತ್ರಿ ಮತ್ತೊಮ್ಮೆ ಸಭೆ ನಡೆಸಿತು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಜಗದೀಶ ಶೆಟ್ಟರ್‌, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ವಿಧಾನ ಪರಿಷತ್‌ ಸದಸ್ಯರಾದ ಪ್ರದೀಪ ಶೆಟ್ಟರ್‌, ಎಸ್‌.ವಿ.ಸಂಕನೂರ, ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ ಕಲಬುರ್ಗಿ, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಮಾ.ನಾಗರಾಜ ಹಾಗೂ ಚುನಾವಣಾ ಪ್ರಭಾರಿಗಳಾದ ಶ್ರೀಕಾಂತ ಕುಲಕರ್ಣಿ ಮತ್ತು ಉದಯ ಶೆಟ್ಟಿ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT