ಮಂಗಳವಾರ, ಜೂನ್ 28, 2022
25 °C
ಪಾಲಿಕೆ ಚುನಾವಣೆ ಇಂದು: ತಡರಾತ್ರಿವರೆಗೂ ಅಭ್ಯರ್ಥಿ ಆಯ್ಕೆಗೆ ಬಿಜೆಪಿ ಕಸರತ್ತು

ಹುಬ್ಬಳ್ಳಿ:ಯಾರಿಗೆ ಒಲಿಯಲಿದೆ ಮೇಯರ್‌ ಪಟ್ಟ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಫಲಿತಾಂಶ ಬಂದು ಒಂಬತ್ತು ತಿಂಗಳ ಬಳಿಕ 21ನೇ ಅವಧಿಯ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಮೇಯರ್‌ ಹಾಗೂ ಉಪಮೇಯರ್‌ ಚುನಾವಣೆ ನಡೆಯಲಿದ್ದು, ಯಾರಿಗೆ ಒಲಿಯಲಿದೆ ಅದೃಷ್ಟ ಎನ್ನುವ ಕುತೂಹಲ ಮನೆ ಮಾಡಿದೆ.

ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವಾಗಿರುವುದರಿಂದ ಆ ಪಕ್ಷದವರಲ್ಲಿ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿದೆ. ಹೀಗಾಗಿ ಬಿಜೆಪಿಯಲ್ಲಿ ಶುಕ್ರವಾರ ತಡರಾತ್ರಿ ತನಕವೂ ಚುರುಕಿನ ಚಟುವಟಿಕೆಗಳು ನಡೆದವು. ಇಲ್ಲಿನ ಮಹಾನಗರ ಪಾಲಿಕೆ ಕಚೇರಿಯಲ್ಲಿ ಶನಿವಾರ ಬೆಳಿಗ್ಗೆ 9.30  ಮೇಯರ್‌ ಹಾಗೂ ಉಪ ಮೇಯರ್‌ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ.

ಅಧಿಕಾರದ ಚುಕ್ಕಾಣಿ ಹಿಡಿಯಲು ಉಭಯ ಪಕ್ಷಗಳಿಗೂ 42 ಸದಸ್ಯರ ಬಲ ಅಗತ್ಯವಿದೆ. ಪಕ್ಷೇತರರಾಗಿ ಗೆಲುವು ಪಡೆದ ಒಬ್ಬರು ಈ ಹಿಂದೆಯೇ ಬಿಜೆಪಿ ಸೇರ್ಪಡೆಯಾಗಿದ್ದರಿಂದ ಈ ಪಕ್ಷದ ಬಲ 40ಕ್ಕೆ ಏರಿಕೆಯಾಗಿತ್ತು. ಪಕ್ಷೇತರ ಅಭ್ಯರ್ಥಿಗಳಾಗಿ ಗೆದ್ದಿರುವ ಚಂದ್ರಿಕಾ ಮೇಸ್ತ್ರಿ ಮತ್ತು ಕಿಶನ್‌ ಬೆಳಗಾವಿ ಅವರು ಶುಕ್ರವಾರ ರಾತ್ರಿ ಬಿಜೆಪಿ ಸೇರ್ಪಡೆಯಾದರು. ಹೀಗಾಗಿ ಪಕ್ಷದ ಸಂಖ್ಯಾಬಲ ಇನ್ನಷ್ಟು ಹೆಚ್ಚಳವಾಗಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಶಾಸಕ ಜಗದೀಶ ಶೆಟ್ಟರ್‌ ಸಮ್ಮುಖದಲ್ಲಿ ಪಕ್ಷೇತರರು ಬಿಜೆಪಿ ಸೇರ್ಪಡೆಯಾದರು.

ಅಭಿಪ್ರಾಯ ಸಂಗ್ರಹ: ಪ್ರಲ್ಹಾದ ಜೋಶಿ ಮತ್ತು ಜಗದೀಶ ಶೆಟ್ಟರ್‌ ನೇತೃತ್ವದಲ್ಲಿ ಪಾಲಿಕೆಯ ಬಿಜೆಪಿ ಸದಸ್ಯರು ಸುದೀರ್ಘ ಚರ್ಚೆ ನಡೆಸಿದರು. ಜಾತಿ ಲೆಕ್ಕಾಚಾರ ಮತ್ತು ಮುಂಬರುವ ವಿಧಾನಸಭಾ ಚುನಾವಣೆ ಮುಂದಿಟ್ಟುಕೊಂಡು ಅಭಿಪ್ರಾಯ ಸಂಗ್ರಹಿಸಿದರು.

ಮೇಯರ್‌ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಪಾಲಿಕೆ ಸದಸ್ಯರಾದ ಧಾರವಾಡದ ವೀರೇಶ ಅಂಚಟಗೇರಿ, ಹುಬ್ಬಳ್ಳಿಯ ವೀರಣ್ಣ ಸವಡಿ, ವಿಜಯಾನಂದ ಶೆಟ್ಟಿ, ಶಿವು ಮೆಣಸಿನಕಾಯಿ ಅವರ ಹೆಸರುಗಳು ಮುಂಚೂಣಿಯಲ್ಲಿದ್ದವು. ಧಾರವಾಡ ಪ್ರತ್ಯೇಕ ಪಾಲಿಕೆ ಕೂಗು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಮೊದಲ ಅವಧಿಗೆ ಮೇಯರ್‌ ಸ್ಥಾನ ಧಾರವಾಡಕ್ಕೆ ಬಿಟ್ಟುಕೊಟ್ಟರೆ ವೀರೇಶ ಅಂಚಟಗೇರಿ ಮತ್ತು ವಿಜಯಾನಂದ ಶೆಟ್ಟಿ ಮೇಯರ್‌ ಆಗಬಹುದು. 

ಹಿರಿತನದ ಆಧಾರದ ಮೇಲೆ ಮೇಯರ್‌ ಸ್ಥಾನ ನೀಡುವುದಾದರೆ ವೀರಣ್ಣ ಸವಡಿಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಆದರೆ, ರಾಜಣ್ಣ ಕೊರವಿ ಕೂಡ ಮೇಯರ್‌ ಸ್ಥಾನದ ಆಕಾಂಕ್ಷಿಯಾಗಿದ್ದು, ಪೈಪೋಟಿ ಹೆಚ್ಚಿದೆ. ಬಿಜೆಪಿ ತನ್ನ ಎಲ್ಲಾ ಸದಸ್ಯರಿಗೂ ವಿಪ್‌ ಜಾರಿ ಮಾಡಿದ್ದು, ಪಕ್ಷ ಸೇರ್ಪಡೆಯಾದ ಚಂದ್ರಿಕಾ ಮೇಸ್ತ್ರಿ ಮತ್ತು ಕಿಶನ್‌ ಅವರಿಗೆ ಪ್ರಾಥಮಿಕ ಸದಸ್ಯತ್ವ ನೀಡಿ ಪಕ್ಷಕ್ಕೆ ಬೆಂಬಲ ನೀಡುವ ಕುರಿತು ಪತ್ರ ಬರೆಯಿಸಿಕೊಂಡಿದ್ದಾರೆ.

ಬಹುಮತದ ಕೊರತೆ ಎದುರಿಸುತ್ತಿರುವ ಕಾಂಗ್ರೆಸ್ ಕೂಡ ಕೊನೆಯ ಹಂತದ ಸರ್ಕಸ್‌ ನಡೆಸುತ್ತಿದ್ದು, ಮೇಯರ್ ಸ್ಥಾನಕ್ಕೆ ಮಯೂರ್ ಮೋರೆ ಹಾಗೂ ಉಪಮೇಯರ್‌ ಸ್ಥಾನಕ್ಕೆ ದೀಪಾ ಸಂತೋಷ ನೀರಲಕಟ್ಟಿ ಅವರನ್ನು ಅಭ್ಯರ್ಥಿಗಳನ್ನಾಗಿ ಘೋಷಿಸಿದೆ.

ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ ಸಭೆ ಇಂದು
ಹುಬ್ಬಳ್ಳಿ:
ಮೇಯರ್‌ ಹಾಗೂ ಉಪಮೇಯರ್‌ ಆಯ್ಕೆಗೆ ಶುಕ್ರವಾರ ತಡರಾತ್ರಿಯವರೆಗೂ ಬಿಜೆಪಿ ಕಸರತ್ತು ನಡೆಸಿತು. ಎಲ್ಲಾ ಸದಸ್ಯರ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಶನಿವಾರ ಬೆಳಿಗ್ಗೆ 9 ಗಂಟೆಗೆ ನಿಗದಿಯಾಗಿರುವ ಪಕ್ಷದ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ಶುಕ್ರವಾರ ಮೊದಲು ಜೋಶಿ ಹಾಗೂ ಶೆಟ್ಟರ್‌ ಮೇಯರ್‌ ಆಕಾಂಕ್ಷಿಗಳ ಅಭಿಪ್ರಾಯ ಸಂಗ್ರಹಿಸಿದರು. ಬಳಿಕ ಪ್ರದೀಪ ಶೆಟ್ಟರ್‌, ಲಿಂಗರಾಜ ಪಾಟೀಲ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಕಪಟಕರ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ಪಕ್ಷದ ಪಾಲಿಕೆ ಸದಸ್ಯರ ಅಭಿಪ್ರಾಯ ಪಡೆದರು. ಅಲ್ಲಿ ವ್ಯಕ್ತವಾದ ಅಭಿಪ್ರಾಯವನ್ನು ಮುಖಂಡರು ಜೋಶಿ ಹಾಗೂ ಶೆಟ್ಟರ್‌ ಅವರಿಗೆ ತಿಳಿಸಲಿದ್ದು, ಬಳಿಕವಷ್ಟೇ ತೀರ್ಮಾನ ಹೊರಬೀಳಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು