ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಇ–ಬಸ್‌ ಸಂಚಾರಕ್ಕೆ ವಾಯವ್ಯ ಸಾರಿಗೆ ಉತ್ಸುಕ

ಬೆಂಗಳೂರು ಮಾದರಿ: 450 ಇ–ಬಸ್‌ ಪಡೆಯಲು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆ
Published 13 ಆಗಸ್ಟ್ 2023, 5:43 IST
Last Updated 13 ಆಗಸ್ಟ್ 2023, 5:43 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬೆಂಗಳೂರು ಮಾದರಿಯಲ್ಲಿ ವಿದ್ಯುತ್‌ ಚಾಲಿತ ಬಸ್‌ (ಇ–ಬಸ್‌)ಗಳ ಕಾರ್ಯಾಚರಣೆ ಆರಂಭಿಸುವುದಕ್ಕೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲುಕೆಆರ್‌ಟಿಸಿ) ಉತ್ಸುಕವಾಗಿದೆ.

‘ಒಟ್ಟು 450 ಇ–ಬಸ್‌ಗಳನ್ನು ನಿವ್ವಳ ವೆಚ್ಚ ಕಡಿತ (ಜಿಸಿಸಿ) ಒಪ್ಪಂದದಿಂದ ಪಡೆದುಕೊಳ್ಳಲು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇದರಿಂದ ಸಂಸ್ಥೆಗೆ ಹೆಚ್ಚಿನ ಆದಾಯ ಸಂಗ್ರಹವಾಗಲಿದೆ. ಡೀಸೆಲ್‌ ಖರ್ಚು, ಚಾಲಕರ ವೇತನ, ಬಸ್‌ ನಿರ್ವಹಣೆ ಸೇರಿ ಹಲವು ವೆಚ್ಚಗಳನ್ನು ಸಂಸ್ಥೆಯು ಭರಿಸುವುದು ಇರುವುದಿಲ್ಲ’ ಎಂದು ಅಧಿಕಾರಿಗಳು ಹೇಳುತ್ತಾರೆ.

ಏನಿದು ಜಿಸಿಸಿ: ‘ಒಂದು ವಿದ್ಯುತ್‌ ಚಾಲಿತ ಬಸ್‌ ದರ ₹1.5 ಕೋಟಿ. ಇಷ್ಟು ದೊಡ್ಡ ಮೊತ್ತ ಪಾವತಿಸಿ ನೂರಾರು ಬಸ್‌ಗಳನ್ನು ಖರೀದಿಸುವುದು ಸಾರಿಗೆ ಸಂಸ್ಥೆಗೆ ಸದ್ಯಕ್ಕೆ ಆಗುವುದಿಲ್ಲ. ಪ್ರತಿ ಕಿಲೋಮಿಟರ್‌ಗೆ ಇಂತಿಷ್ಟು ಹಣ ನಿಗದಿಗೊಳಿಸಿ, ಇ– ಬಸ್‌ ಹಾಗೂ ಚಾಲಕರನ್ನು ಒದಗಿಸುವಂತೆ ಟೆಂಡರ್‌ ಆಹ್ವಾನಿಸಲಾಗುವುದು. ಸಂಸ್ಥೆಯಿಂದ ಬಸ್‌ ನಿರ್ವಾಹಕರನ್ನು ಮಾತ್ರ ಕಳುಹಿಸಿ ಕಾರ್ಯಾಚರಣೆ ಆರಂಭಿಸಲಾಗುವುದು. ಬೆಂಗಳೂರಿನಲ್ಲಿ ಈಗಾಗಲೇ ಜಿಸಿಸಿ ಮಾದರಿ ಆರಂಭವಾಗಿದೆ’ ಎಂದು ಎನ್‌ಡಬ್ಲುಕೆಆರ್‌ಟಿಸಿ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಂಗಳೂರಿನಲ್ಲಿ ಜಿಸಿಸಿ ಮಾದರಿಯಲ್ಲಿ ಪ್ರತಿ ಇ– ಬಸ್‌ ಖರೀದಿಗೆ ಕೇಂದ್ರ ಸರ್ಕಾರವು ಸುಮಾರು ₹50 ಲಕ್ಷ ನೆರವು ನೀಡಿದೆ. ಬಸ್‌ ಒದಗಿಸಲು ಟೆಂಡರ್ ಪಡೆದ ಕಂಪನಿಗೆ ಪ್ರತಿ ಕಿಲೋ ಮೀಟರ್‌ ಬಸ್‌ ಓಡಿಸಲು ಪಾವತಿಸುವ ಮೊತ್ತ ಕಡಿಮೆ ಇದೆ. ಆದರೆ ಎನ್‌ಡಬ್ಲುಕೆಆರ್‌ಟಿಸಿ ವ್ಯಾಪ್ತಿಯಲ್ಲಿ ಇ–ಬಸ್‌ಗಳ ಖರೀದಿಗೆ ಖಾಸಗಿ ಕಂಪೆನಿಗಳೇ ಸಂಪೂರ್ಣ ವೆಚ್ಚ ಭರಿಸಬೇಕಿದೆ.

ಧಾರವಾಡದಲ್ಲಿವೆ ಇ–ಬಸ್‌: ಟಾಟಾ ಕಂಪನಿಯು ಇ–ಬಸ್‌ಗಳನ್ನು ಧಾರವಾಡದಲ್ಲಿರುವ ತನ್ನ ಘಟಕದಲ್ಲಿಯೆ ತಯಾರಿಸುತ್ತಿದೆ. ಬೆಂಗಳೂರಿನಗೆ ಇ–ಬಸ್‌ಗಳೆಲ್ಲವೂ ಧಾರವಾಡದಿಂದಲೇ ಪೂರೈಕೆಯಾಗಿವೆ. ಹುಬ್ಬಳ್ಳಿಯಲ್ಲಿ ಇ–ಬಸ್‌ ಆರಂಭಿಸಲು ಸರ್ಕಾರ ಅನುಮತಿ ನೀಡಿದರೆ, ಬಸ್‌ಗಳನ್ನು ಪಡೆಯುವುದು ಸುಲಭವಾಗಲಿದೆ. ಟಾಟಾ ಕಂಪನಿಯವರೇ ಬೆಂಗಳೂರು ಸಾರಿಗೆ ಸಂಸ್ಥೆಗಳ ಟೆಂಡರ್‌ ಪಡೆದು ಚಾಲಕರನ್ನು ಮತ್ತು ಇ–ಬಸ್‌ಗಳನ್ನು ಒದಗಿಸಿದ್ದಾರೆ. ಹುಬ್ಬಳ್ಳಿಯಲ್ಲೂ ಇ–ಬಸ್‌ ಒದಗಿಸಲು ಟಾಟಾ ಕಂಪನಿ ಸೇರಿದಂತೆ ಬೇರೆಯವರು ಟೆಂಡರ್‌ನಲ್ಲಿ ಭಾಗವಹಿಸುವ ನಿರೀಕ್ಷೆ ಅಧಿಕಾರಿಗಳು ಹೊಂದಿದ್ದಾರೆ.

ಎಲ್ಲೆಲ್ಲಿ ಇ–ಬಸ್‌ಗಳು?

ಆರಂಭದಲ್ಲಿ ಹುಬ್ಬಳ್ಳಿ– ಧಾರವಾಡ ಡಿಪೊಗಳಿಗೆ 100, ಬೆಳಗಾವಿಗೆ 50, ಬಿಆರ್‌ಟಿಸಿಗೆ 100 ಹಾಗೂ ಗ್ರಾಮೀಣ ಭಾಗದಲ್ಲಿ ಕಾರ್ಯಾಚರಣೆ ನಡೆಸಲು 200 ವಿದ್ಯುತ್‌ ಚಾಲಿತ ಬಸ್‌ಗಳನ್ನು ಒದಗಿಸುವುದಕ್ಕೆ ವಾಯವ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳು ಯೋಜನೆ ಮಾಡಿಕೊಂಡಿದ್ದಾರೆ.

ಇವೆಲ್ಲವೂ ನಾನ್‌ ಎಸಿ ಬಸ್‌ಗಳಾಗಿದ್ದು, ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅವಕಾಶ ಇರುತ್ತದೆ. ಬಿಆರ್‌ಟಿಸಿ ಹೊಂದಿರುವ ಚಿಗರಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅವಕಾಶವಿಲ್ಲ. ಆದರೆ ಹೊಸ ಇ–ಬಸ್‌ಗಳನ್ನು ಬಿಆರ್‌ಟಿಸಿ ಪಡೆಯಲಿದ್ದು, ಶಕ್ತಿ ಯೋಜನೆ ಅನ್ವಯವಾಗಲಿದೆ.

ವಿದ್ಯುತ್‌ ಚಾಲಿತ ಬಸ್‌ಗಳ ಕಾರ್ಯಾಚರಣೆ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಅನುಮತಿ ನೀಡಿದ ಕೂಡಲೇ ಟೆಂಡರ್‌ ಪ್ರಕ್ರಿಯೆ ಆರಂಭಿಸಲಾಗುವುದು.
ಭರತ್‌ ಎಸ್‌., ಎನ್‌ಡಬ್ಲುಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT