ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | ಅವಳಿ ನಗರ; ಅಕ್ರಮ ಬಡಾವಣೆ

ತೆರವು ಮಾಡಿದರೂ ನಿಲ್ಲದ ಅಕ್ರಮ; ಆಸ್ತಿ ಮುಟ್ಟುಗೋಲಿಗೆ ಕ್ರಮ
Published 10 ಜುಲೈ 2024, 5:41 IST
Last Updated 10 ಜುಲೈ 2024, 5:41 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅವಳಿ ನಗರದಲ್ಲಿ ಅನಧಿಕೃತ ಬಡಾವಣೆಗಳು ವ್ಯಾಪಕವಾಗಿ ತಲೆ ಎತ್ತುತ್ತಿದ್ದು, ಅವುಗಳಿಗೆ ಕಡಿವಾಣ ಹಾಕಲು ಮತ್ತು ತೆರವುಗೊಳಿಸಲು ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ಸಿದ್ಧತೆ ಮಾಡಿಕೊಂಡಿದೆ.

2020–23ರ ಅವಧಿಯಲ್ಲಿ ಹುಡಾ ಅನಧಿಕೃತ ಬಡಾವಣೆಗಳಿಗೆ ಸಂಬಂಧಿಸಿದಂತೆ ಧಾರವಾಡದಲ್ಲಿ 158 ಜನರು ಮತ್ತು ಹುಬ್ಬಳ್ಳಿಯಲ್ಲಿ 82 ಜನರಿಗೆ ನೋಟಿಸ್ ನೀಡಿದೆ. ಹುಬ್ಬಳ್ಳಿ– ಧಾರವಾಡದಲ್ಲಿ 94 ಅನಧಿಕೃತ ಬಡಾವಣೆಗಳನ್ನು ತೆರವುಗೊಳಿಸಿರುವ ಹುಡಾ ಈಗ 20 ಜನರಿಗೆ (ಆರ್‌ಟಿಸಿ ಮಾಲೀಕರು) ಅಂತಿಮ ನೋಟಿಸ್ ನೀಡಿದೆ. 

ಮಂಟೂರು ರಸ್ತೆ, ನೇಕಾರ ನಗರ, ಹತ್ತಿಕೊಳ್ಳ, ಬಿಡನಾಳ, ಹೊಸ ಯಲ್ಲಾಪುರ ಸೇರಿ ಹಲವೆಡೆ ಅಕ್ರಮ ಲೇಔಟ್‌ಗಳಿವೆ. ಕೆಲ ಕಡೆ ಈಗಾಗಲೇ ಮನೆಗಳು ನಿರ್ಮಾಣಗೊಂಡಿದ್ದು, ಇನ್ನೂ ಕೆಲವು ನಿರ್ಮಾಣ ಹಂತದಲ್ಲಿವೆ. ದಾಖಲೆಗಳನ್ನು ಪರಿಶೀಲಿಸದೆ ನಿವೇಶನ ಖರೀದಿಸಿದವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ಅನಧಿಕೃತ ಬಡಾವಣೆಗಳಿಗೆ ಸಂಬಂಧಿಸಿದಂತೆ ತೆರವು ಕಾರ್ಯಾಚರಣೆ ಮೊದಲು ಹುಬ್ಬಳ್ಳಿಯಲ್ಲಿ, ನಂತರ ಧಾರವಾಡದಲ್ಲಿ ಮಾಡಲಾಗುವುದು. ನೋಟಿಸ್ ಪಡೆದ ಕೆಲವರು ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ಭೂ ಪರಿವರ್ತನೆ ಮಾಡಿಕೊಂಡಿದ್ದಾರೆ. ಕೃಷಿ ಭೂಮಿ ಇದ್ದ ಜಮೀನನ್ನು ಅನಧಿಕೃತವಾಗಿ ಲೇಔಟ್ ಮಾಡಿ ಮಾರಿದರೆ ಕ್ರಮ ಕೈಗೊಳ್ಳಲಾಗುವುದು. ಕೃಷಿ ಮಾಡಿದರೆ ಯಾವುದೇ ಅಭ್ಯಂತರವಿಲ್ಲ’ ಎಂದು ಹುಡಾ ಅಧ್ಯಕ್ಷ ಶಾಕೀರ ಸನದಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರದ ಮಾಸ್ಟರ್‌ಪ್ಲಾನ್‌ದಂತೆ ಇದ್ದರೆ ಬಡಾವಣೆಗೆ‌‌‌‌ ಅನುಮತಿ ಇದೆ. ಆದರೆ, ಪ್ರಾಧಿಕಾರದ ಅನುಮತಿ ಇಲ್ಲದೇ ಲೇಔಟ್‌ ನಿರ್ಮಿಸಿದರೆ, ಅಲ್ಲಿ ನಿಯಮದ ಪ್ರಕಾರ ರಸ್ತೆ, ಚರಂಡಿ, ಉದ್ಯಾನಗಳಿಗೆ ಜಾಗ ಮೀಸಲಿಡುವುದಿಲ್ಲ’ ಎಂದರು.

‘ಕೃಷಿ ಭೂಮಿ ಜಾಗವನ್ನು ವಸತಿ ಉದ್ದೇಶಕ್ಕೆ ಪರಿವರ್ತನೆ ಮಾಡಿಕೊಳ್ಳುವುದಿಲ್ಲ. ಪ್ರಾಧಿಕಾರದ ಬಳಿ ಬಂದು ಬಡಾವಣೆಗೆ ಅನುಮತಿ ಪಡೆಯುವುದಿಲ್ಲ. ಅನಧಿಕೃತ ಬಡಾವಣೆಗಳ ಕುರಿತ ಮಾಹಿತಿ ಉಪನೋಂದಣಾ ಕಚೇರಿಯಲ್ಲೂ  ನೋಂದಣಿ ಆಗುವುದಿಲ್ಲ. ಇದರಿಂದ ಮುದ್ರಾಂಕ ಶುಲ್ಕಕ್ಕೂ ಹೊಡೆತ ಬೀಳುತ್ತದೆ’ ಎಂದರು.

‘ಪರವಾನಗಿ ಪಡೆಯದೆ ಅಭಿವೃದ್ಧಿಪಡಿಸಲಾದ ಬಡಾವಣೆಗಳಲ್ಲಿ ಅಳವಡಿಸಿದ್ದ ಗುರುತು ಕಲ್ಲು, ರಸ್ತೆ, ಚರಂಡಿ, ವಿದ್ಯುತ್ ಕಂಬಗಳನ್ನು ತೆರವು ಮಾಡಿದರೂ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ.‌ ಪ್ರತಿ‌ ಬಾರಿ ಸಮೀಕ್ಷೆ ನಡೆಸಿದಾಗಲೂ ಮತ್ತಷ್ಟು ಅಕ್ರಮ ಬಡಾವಣೆಗಳು ಪತ್ತೆಯಾಗುತ್ತವೆ’ ಎಂದು ಅಧಿಕಾರಿಗಳು ತಿಳಿಸಿದರು.

‘ಸಹಾಯವಾಣಿ ಆರಂಭ’

‘ಅನಧಿಕೃತ ಬಡಾವಣೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಮುಂದಿನ ದಿನಗಳಲ್ಲಿ ಸಹಾಯವಾಣಿ ಆರಂಭಿಸಲಾಗುವುದು. ಸಾರ್ವಜನಿಕರು ಕರೆ ಮಾಡಿ ಸರ್ವೆ ಸಂಖ್ಯೆ ಹೇಳಿದರೆ ಅದು ಅಧಿಕೃತ ಅಥವಾ ಅನಧಿಕೃತ ಎಂಬುದು ತಿಳಸಲಾಗುತ್ತದೆ.ಬಡಾವಣೆಗಳ ಕುರಿತ ಎಲ್ಲ ಮಾಹಿತಿ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಅಳವಡಿಸಲಾಗುವುದು’ ಎಂದು ಶಾಕೀರ ಸನದಿ ತಿಳಿಸಿದರು. ‘ಬಡಾವಣೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿದ ನಂತರ ಪ್ರಾಧಿಕಾರದ ಸಭೆಯಲ್ಲಿ ಅನುಮತಿ ನೀಡಲಾಗುತ್ತದೆ. ಸಂಬಂಧಿಸಿದವರು ಅಭಿವೃದ್ಧಿ ಶುಲ್ಕ ಭರಿಸಿ 16–18 ತಿಂಗಳಲ್ಲಿ ಕಾಮಗಾರಿ ಮುಗಿಸಬೇಕು. ಅನಧಿಕೃತ ಬಡಾವಣೆ ಪ್ರಕರಣದಲ್ಲಿ ಪದೇ ಪದೇ ಸಿಕ್ಕಿಬಿದ್ದರೆ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು’ ಎಂದರು.

ಅನಧಿಕೃತ ಬಡಾವಣೆ ನಿರ್ಮಿಸಿದವರಿಗೆ ಎರಡು ಸಲ ನೋಟಿಸ್ ನೀಡಲಾಗುತ್ತದೆ. ತೆರವುಗೊಳಿಸದಿದ್ದರೆ ಪ್ರಾಧಿಕಾರದಿಂದ ತೆರವು ಮಾಡಿ ಅದರ ಖರ್ಚನ್ನು ಅವರಿಂದ ಭರಿಸಿಕೊಳ್ಳಲಾಗುವುದು.
ಸಂತೋಷ ಬಿರಾದಾ, ಆಯುಕ್ತ ಹುಡಾ
ಅಂತಿಮ ನೋಟಿಸ್ ನೀಡಲಾದ ಹುಬ್ಬಳ್ಳಿಯ 8 ಕಡೆ ಬುಧವಾರದಿಂದ ಅನಧಿಕೃತ ಬಡಾವಣೆಗಳ ತೆರವು ಕಾರ್ಯಾಚರಣೆ ನಡೆಯಲಿದೆ.
ಶಾಕೀರ ಸನದಿ, ಅಧ್ಯಕ್ಷ, ಹುಡಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT