ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ: ಸಮಸ್ಯೆಗಳ ಸುಳಿಯಲ್ಲಿ ‘ಹೆಗ್ಗೇರಿ‘

Published : 21 ಆಗಸ್ಟ್ 2024, 4:22 IST
Last Updated : 21 ಆಗಸ್ಟ್ 2024, 4:22 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ಈ ನಗರದ ಬೀದಿಗೆ ಕಾಲಿಟ್ಟರೆ ಸಾಕು ದುರ್ವಾಸನೆ ಮೂಗಿಗೆ ಅಸಹನೀಯವಾಗುತ್ತದೆ. ಮನೆ ಮುಂದೆ ಬಾಯ್ತೆರೆದ ದೊಡ್ಡ ಚರಂಡಿ ನಾಲಾ. ಚರಂಡಿ ಪಕ್ಕದಲ್ಲೇ ಆಡುವ ಮಕ್ಕಳು. ಸಂಜೆ ವಿಪರೀತ ಸೊಳ್ಳೆಗಳ ಕಾಟ..

ಈ ದುಸ್ಥಿತಿಯ ಚಿತ್ರಣವನ್ನು ಹಳೇಹುಬ್ಬಳ್ಳಿಯ ಹೆಗ್ಗೇರಿಯಲ್ಲಿ ಕಾಣಬಹುದು. ನಗರದ ಮಧ್ಯಭಾಗದಲ್ಲಿರುವ ಈ ಬಡಾವಣೆ ಸಮಸ್ಯೆಗಳ ಸರಮಾಲೆ ಹೊದ್ದು ಕೂತಿದೆ. 2 ಸಾವಿರಕ್ಕೂ ಹೆಚ್ಚು ಜನ ವಾಸಿಸುವ ಈ ಪ್ರದೇಶದಲ್ಲಿ ಸ್ವಚ್ಛತೆ ಇಲ್ಲ. ಮನೆ ಎದುರೇ ಬೀಳುವ ತ್ಯಾಜ್ಯ, ಮನೆ ಮುಂದೆ ಮಲಮೂತ್ರ ವಿಸರ್ಜನೆ ಮಾಡುವ ಮಕ್ಕಳು, ಸರಿಯಾದ ಚರಂಡಿ ವ್ಯವಸ್ಥೆ ಇದ್ದರೂ ನಿರ್ವಹಣೆ ಇಲ್ಲ.

ಆರು ತಿಂಗಳ ಹಿಂದೆ ದೊಡ್ಡದಾದ ಚರಂಡಿ ನಾಲಾ ನಿರ್ಮಿಸಿದ್ದಾರೆ. ಅದಕ್ಕೆ ಮೇಲ್ಚಾವಣಿ ಹಾಕದೆ ಹಾಗೇ ಬಿಟ್ಟಿದ್ದರಿಂದ ಆತಂಕದಲ್ಲಿ ಇಲ್ಲಿನ ಜನರು ದಿನ ದೂಡುವಂತಾಗಿದೆ. ಅಷ್ಟೇ ಅಲ್ಲದೆ ರಸ್ತೆ ಪಕ್ಕದಲ್ಲೂ ಕಸ ಬೀಳುತ್ತಿದ್ದು, ಅರ್ಧ ಭಾಗದಷ್ಟು ರಸ್ತೆ ಕಸದಿಂದ ತುಂಬಿರುತ್ತದೆ. ಪಕ್ಕದಲ್ಲಿಯೇ ಮಕ್ಕಳ ಆಟಕ್ಕೆ ನಿರ್ಮಿಸಿದ ಪಾರ್ಕ್‌ ಇದ್ದರೂ ಬಳಕೆಗೆ ಯೋಗ್ಯವಾಗಿಲ್ಲ. ಹಾಳಾದ ಆಸನಗಳು, ಉದ್ಯಾನದ ತುಂಬಾ ಕಸ ಬೆಳೆದಿದ್ದು, ಓಡಾಡಲು ಆಗದಂತ ಸ್ಥಿತಿ ನಿರ್ಮಾಣವಾಗಿದೆ.

‘ನಮ್ಮ ಮನೆ ಎದುರು ಚರಂಡಿ ನಿರ್ಮಿಸಿದ್ದಾರೆ. ಮೇಲ್ಚಾವಣಿ ಹಾಕಿದ್ದರು ಆದರೆ ರಸ್ತೆ ಕಾಮಗಾರಿ ಮಾಡುವಾಗ ಅದನ್ನು ತೆಗೆದು ಹಾಕಿದ್ದಾರೆ. ಚರಂಡಿ ಇರುವ ಮನೆ ಬಾಗಿಲನ್ನು ತೆರೆಯಲು ಹಿಂದೇಟು ಹಾಕುವಂತಾಗಿದೆ. ಅಷ್ಟೇ ಅಲ್ಲದೆ ನೀರಿನ ಪೈಪ್‌ಲೈನ್‌ ಒಡೆದಿದ್ದು, ಇನ್ನುವರೆಗೂ ಸರಿ ಮಾಡಿಲ್ಲ’ ಎಂದು ನಿವಾಸಿ ರಾಜಮ್ಮ ವಾಟಕರ ಹೇಳಿದರು.

‘ಮನೆ ಹಿಂದೆಯೇ ದೊಡ್ಡದಾಡ ಚರಂಡಿ ನಾಲಾ ನಿರ್ಮಿಸಿದ್ದಾರೆ. ಇದರಿಂದ ನಿತ್ಯ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಪಾಗಿಂಗ್‌ ಕೂಡಾ ಮಾಡಿಲ್ಲ. ಮನೆಯಲ್ಲಿ ಮಕ್ಕಳು ಇರುವುದರಿಂದ ನಾವೇ ಸುರಕ್ಷತೆ ದೃಷ್ಟಿಯಿಂದ ಕಟ್ಟಿಗೆಯ ಪ್ಲಾವಿಡ್‌ ಹಾಕಿಕೊಂಡಿದ್ದೇವೆ. ಸೊಳ್ಳೆಗ ಕಾಟವಂತೂ ವಿಪರೀತವಾಗಿದೆ’ ಎಂದು ನಿವಾಸಿ ಸುಪ್ರಿಯಾ ಟೋಪಣ್ಣವರ ತಿಳಿಸಿದರು.

‘ಪಾಲಿಕೆಯಿಂದ ಚರಂಡಿ ನಾಲಾ ನಿರ್ಮಿಸಲಾಗಿದೆ. ಆದರೆ, ಅನುದಾನ ತಂದು ಮೇಲ್ಚಾವಣಿ ನಿರ್ಮಾಣಕ್ಕೆ ಮುಂದಾದರೆ ಅಲ್ಲಿನ ಹಿರಿಯ ಮುಖಂಡರು ತಡೆಯೊಡ್ಡುತ್ತಿದ್ದಾರೆ. ಆದ್ದರಿಂದ ಮೇಲ್ಚಾವಣಿ ನಿರ್ಮಿಸಿಲ್ಲ. ಎಷ್ಟೋ ಬಾರಿ ಮುಖಂಡರನ್ನು ಭೇಟಿಯಾಗಿ ಮನವೊಲಿಸಲು ಪ್ರಯತ್ನಿಸಿದರೂ ಒಪ್ಪಿಗೆ ನೀಡುತ್ತಿಲ್ಲ. ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಆದರೆ, ಬಡಾವಣೆ ಸ್ವಚ್ಛತೆಗೂ ಆದ್ಯತೆ ನೀಡಲಾಗಿದೆ. ನಿವಾಸಿಗಳು ಸಹ ಸ್ವಚ್ಛತೆ ಕಾಪಾಡಬೇಕು’ ಎಂದು ವಾರ್ಡ್‌ ಸದಸ್ಯೆ ಸರಸ್ವತಿ ವಿನಾಯಕ ದೊಂಗಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಹಳೇಹುಬ್ಬಳ್ಳಿಯ ಹೆಗ್ಗೆರಿಯಲ್ಲಿ ನಿರ್ಮಾಣಗೊಂಡ ಚರಂಡಿ ನಾಲಾದಲ್ಲಿ ಬಿದ್ದಿರುವ ತ್ಯಾಜ್ಯ
ಹಳೇಹುಬ್ಬಳ್ಳಿಯ ಹೆಗ್ಗೆರಿಯಲ್ಲಿ ನಿರ್ಮಾಣಗೊಂಡ ಚರಂಡಿ ನಾಲಾದಲ್ಲಿ ಬಿದ್ದಿರುವ ತ್ಯಾಜ್ಯ
ಹಳೇಹುಬ್ಬಳ್ಳಿಯ ಹೆಗ್ಗೆರಿಯ ಮನೆಯೊಂದರ ಮುಂದೆ ಬಾಯ್ತೆರೆ ಚರಂಡಿ
ಹಳೇಹುಬ್ಬಳ್ಳಿಯ ಹೆಗ್ಗೆರಿಯ ಮನೆಯೊಂದರ ಮುಂದೆ ಬಾಯ್ತೆರೆ ಚರಂಡಿ
ಚರಂಡಿ ನಾಲಾದ ಮೇಲೆ ಮೇಲ್ಚಾವಣಿ ನಿರ್ಮಾಣಕ್ಕೆ ಹಿರಿಯ ನಾಯಕರು ಅವಕಾಶ ನೀಡುತ್ತಿಲ್ಲ. ಇದಕ್ಕೆ ಎಲ್ಲರ ಸಹಕಾರದ ಅಗತ್ಯವಿದೆ.
-ಸರಸ್ವತಿ ವಿನಾಯಕ ದೊಂಗಡಿ ವಾರ್ಡ್‌ ಸದಸ್ಯೆ
ಮನೆಯಲ್ಲಿ ಮಕ್ಕಳು ವಯಸ್ಸಾದವರು ಇದ್ದಾರೆ. ಚರಂಡಿ ನಾಲಾಕ್ಕೆ ಮೇಲ್ಚಾವಣಿ ನಿರ್ಮಿಸಿ ಸೊಳ್ಳೆಗಳ ಕಾಟದಿಂದ ಮುಕ್ತಿ ನೀಡಬೇಕು
-ರಾಜಮ್ಮ ವಾಟಕರ ಹೆಗ್ಗೇರಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT