ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆಗೆ ಸ್ಪಂದಿಸದಿದ್ದರೆ ರಾಜಧಾನಿಗೆ ದಿಗ್ಬಂಧನ

ಸದಾಶಿವ ಆಯೋಗದ ವರದಿ ಜಾರಿ ಹೋರಾಟ ಸಮಿತಿ ಮಹಾ ಸಂಚಾಲಕ ಹೆಣ್ಣೂರು ಲಕ್ಷ್ಮಿನಾರಾಯಣ ಎಚ್ಚರಿಕೆ
Last Updated 5 ಫೆಬ್ರುವರಿ 2021, 2:58 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಒಳ ಮೀಸಲಾತಿಗೆ ಸಂಬಂಧಿಸಿದ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಸರ್ಕಾರ ಜಾರಿಗೊಳಿಸದಿದ್ದರೆ, ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಹೋರಾಟದ ಮಾದರಿಯಲ್ಲೇ ರಾಜಧಾನಿ ಬೆಂಗಳೂರಿಗೆ ದಿಗ್ಬಂಧನ ಹಾಕಲಾಗುವುದು’ ಎಂದು ಸದಾಶಿವ ವರದಿ ಜಾರಿ ಹೋರಾಟ ಸಮಿತಿ ಮಹಾ ಸಂಚಾಲಕ ಹೆಣ್ಣೂರು ಲಕ್ಷ್ಮಿನಾರಾಯಣ ಎಚ್ಚರಿಕೆ ನೀಡಿದರು.

ವರದಿ ಜಾರಿಗೆ ಆಗ್ರಹಿಸಿ ಕೈಗೊಂಡಿರುವ ಮಾದಿಗ ಚೈತನ್ಯ ರಥಯಾತ್ರೆಯೊಂದಿಗೆ ಗುರುವಾರ ಹುಬ್ಬಳ್ಳಿ ತಲುಪಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಸ್ಪೃಶ್ಯತೆಯ ನೋವುಂಡಿರುವ ನಮ್ಮ ಸಮುದಾಯ ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದಿದೆ. ಮೀಸಲಾತಿ ಇದ್ದರೂ, ಫಲ ಸರಿಯಾಗಿ ಸಿಗುತ್ತಿಲ್ಲ. ಸದಾಶಿವ ವರದಿ ಜಾರಿಯಾದರೆ ಎಲ್ಲಾ ಸಮಸ್ಯೆಗಳು ಬಗೆಹರಿಯಲಿವೆ’ ಎಂದರು.

‘ವರದಿ ಸಲ್ಲಿಕೆಯಾಗಿ ಎಂಟು ವರ್ಷವಾದರೂ ಯಾವ ಸರ್ಕಾರವೂ ಜಾರಿ ಮಾಡುವತ್ತ ಆಸಕ್ತಿ ತೋರಲಿಲ್ಲ. ಇದುವರೆಗೆ ಲೆಕ್ಕವಿಲ್ಲದಷ್ಟು ಹೋರಾಟ ನಡೆಸಿದ್ದೇವೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನೇತೃತ್ವದ ಸರ್ಕಾರಗಳು ಕೇವಲ ಭರವಸೆ ನೀಡಿವೆಯೇ ಹೊರತು, ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಈಗಿನ ಬಿಜೆಪಿ ಸರ್ಕಾರ ಶಿರಾ ಉಪ ಚುನಾವಣೆ ಸಂದರ್ಭದಲ್ಲಿ ವರದಿ ಜಾರಿಗೊಳಿಸುವುದಾಗಿ ಭರವಸೆ ನೀಡಿತ್ತು. ಅದರಂತೆ, ಸಮುದಾಯದ ಬೇಡಿಕೆಯನ್ನು ಈಡೇರಿಸಬೇಕು’ ಎಂದು ಒತ್ತಾಯಿಸಿದರು.

‘ವರದಿ ಜಾರಿಗೆ ಚಲವಾದಿ ಹಾಗೂ ಸ್ಪೃಶ್ಯ ಸಮುದಾಯಗಳ ಮುಖಂಡರ ವಿರೋಧ ಸರಿಯಲ್ಲ. ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ಎಲ್ಲಾ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಸಿಗಬೇಕು. ಮೀಸಲಾತಿ ವಂಚಿತ ಸಮುದಾಯಗಳಿಗೆ ನ್ಯಾಯ ಸಿಗಬೇಕಾದರೆ ಸದಾಶಿವ ವರದಿ ಜಾರಿಯಾಗಲೇಬೇಕು. ಆದ್ದರಿಂದ ಎಲ್ಲಾ ಸಮುದಾಯದವರೂ ನಮ್ಮ ಹೋರಾಟವನ್ನು ಬೆಂಬಲಿಸಬೇಕು’ ಎಂದರು.

ಮಾ. 8ಕ್ಕೆ ಶಕ್ತಿ ಪ್ರದರ್ಶನ:‘ರಥಯಾತ್ರೆಯನ್ನು ಐದು ಹಂತಗಳಲ್ಲಿ ನಡೆಸಲಾಗುತ್ತಿದ್ದು, ಮಾ. 8ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅಂತ್ಯಗೊಳ್ಳಲಿದೆ. ಅಂದು ಮಾದಿಗ ವಿರಾಟ್ ಶಕ್ತಿ ಪ್ರದರ್ಶನ ಸಮಾವೇಶ ನಡೆಯಲಿದೆ. ವರದಿ ಜಾರಿಗೆ ಅಂದು ಸರ್ಕಾರಕ್ಕೆ ಗಡುವು ನೀಡುತ್ತೇವೆ. ಜಾರಿಗೆ ಕ್ರಮ ಕೈಗೊಳ್ಳದಿದ್ದರೆ, ರಾಜಧಾನಿಗೆ ದಿಗ್ಭಂಧನ ಹಾಕಿ ಹೋರಾಟ ತೀವ್ರಗೊಳಿಸುತ್ತೇವೆ’ ಎಂದು ಹೇಳಿದರು.

ಸಮುದಾಯದ ಮುಖಂಡರಾದ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ, ಪ್ರೇಮನಾಥ ಚಿಕ್ಕತುಂಬಳ, ಬಸಪ್ಪ ಮಾದಾರ, ಪ್ರಸಾದ ಪೆರೂರ, ವಿವಿಧ ಸಂಘ, ಸಂಸ್ಥೆ ಹಾಗೂ ಸಂಘಟನೆಗಳ ಮುಖಂಡರು ರಥಯಾತ್ರೆಯಲ್ಲಿ ಭಾಗವಹಿಸಿದ್ದರು.

ಅದ್ಧೂರಿ ಸ್ವಾಗತ:ಹುಬ್ಬಳ್ಳಿ ಹೊರವಲಯದ ಗಬ್ಬೂರಿಗೆ ಸಂಜೆ 5.30ಕ್ಕೆ ಬಂದ ರಥಯಾತ್ರೆಗೆ ಮಾದಿಗ ಹಾಗೂ ಇತರ ಸಮುದಾಯಗಳ ಸ್ಥಳೀಯ ಮುಖಂಡರು ಡೋಲು ವಾದ್ಯ– ಮೇಳ, ಜಾನಪದ ಕಲಾತಂಡಗಳೊಂದಿಗೆ ಅದ್ಧೂರಿ ಸ್ವಾಗತ ನೀಡಿದರು. ಬೈಕ್ ರ‍್ಯಾಲಿಯೊಂದಿಗೆ ಇಂದಿರಾನಗರದ ನಲ್ಲನಮ್ಮ ದೇವಸ್ಥಾನಕ್ಕೆ ಬಂದ ಸದಾಶಿವ ವರದಿ ಜಾರಿ ಹೋರಾಟ ಸಮಿತಿ ಮಹಾ ಸಂಚಾಲಕ ಲಕ್ಷ್ಮಿನಾರಾಯಣ, ದೇವಿಗೆ ಪೂಜೆ ಸಲ್ಲಿಸಿದರು.

ಇಂದಿರಾನಗರದಿಂದ ಪೂರ್ಣಕುಂಭದೊಂದಿಗೆ ಚನ್ನಮ್ಮ ವೃತ್ತ ತಲುಪಿದ ರಥಯಾತ್ರೆ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಅಂತ್ಯಗೊಂಡಿತು. ಅಂಬೇಡ್ಕರ್ ಪ್ರತಿಮೆಗೆ ಲಕ್ಷ್ಮಿನಾರಾಯಣ ಹಾಗೂ ಮುಖಂಡರುಮಾಲಾರ್ಪಣೆ ಮಾಡಿದರು. ದಾರಿಯುದ್ದಕ್ಕೂ ಜನ ರಥಯಾತ್ರೆಗೆ ಹೂ ಎರಚಿ, ಪಟಾಕಿ ಸಿಡಿಸಿ ಸ್ವಾಗತ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT