ಸೋಮವಾರ, ಆಗಸ್ಟ್ 2, 2021
22 °C
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೆಡಿಎಸ್‌ ಪ್ರತಿಭಟನೆ

ವೈಜ್ಞಾನಿಕ ಮೀಸಲಾತಿ ನಿಗದಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಗಳಿಗೆ ವೈಜ್ಞಾನಿಕವಾಗಿ ಮೀಸಲಾತಿ ನಿಗದಿ ಮಾಡಬೇಕು ಎನ್ನುವುದು ಸೇರಿದಂತೆ ಇನ್ನಿತರ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಜೆಡಿಎಸ್‌ ಹುಬ್ಬಳ್ಳಿ ತಾಲ್ಲೂಕು ಘಟಕದ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್‌.ಎಚ್‌. ಕೋನರಡ್ಡಿ ಮಾತನಾಡಿ ’ನಿಗದಿ ಮಾಡಿರುವ ಮೀಸಲಾತಿ ಬಿಜೆಪಿಗೆ ಅನುಕೂಲವಾಗುವ ರೀತಿಯಲ್ಲಿದ್ದು, ಇದನ್ನು ಬದಲಿಸಬೇಕು’ ಎಂದರು.

’ಕೋವಿಡ್‌ನಿಂದ ಮೃತಪಟ್ಟ ಕುಟುಂಬದ ಸದಸ್ಯರಿಗೆ ಕೇಂದ್ರ ಸರ್ಕಾರ ₹5 ಲಕ್ಷ ಹಾಗೂ ರಾಜ್ಯ ಸರ್ಕಾರ ₹1 ಲಕ್ಷ ಪರಿಹಾರ ನೀಡಬೇಕು. ಮೊದಲ ಮತ್ತು ಎರಡನೇ ಅಲೆಯಲ್ಲಿ ಪ್ರಾಣ ಕಳೆದುಕೊಂಡ ವ್ಯಕ್ತಿಗಳ ಎಲ್ಲ ಕುಟುಂಬಗಳಿಗೂ ಈ ನೆರವು ದೊರಕಬೇಕು’ ಎಂದು ಆಗ್ರಹಿಸಿದರು.

’ಹಿಂದಿನ ಮೂರು ವರ್ಷಗಳ ಅವಧಿಯಲ್ಲಿ ಪ್ರಧಾನಮಂತ್ರಿ ಫಸಲ್‌ ಬೀಮಾ ಯೋಜನೆಯಲ್ಲಿ ರೈತರಿಗೆ ಬರಬೇಕಾದ ಬೆಳೆವಿಮೆ ಪರಿಹಾರ ಎಲ್ಲರಿಗೂ ಸಿಕ್ಕಿಲ್ಲ. ಇದನ್ನು ಖಾಸಗಿ ಕಂಪನಿಗಳ ಬದಲಾಗಿ ಕೇಂದ್ರ ಸರ್ಕಾರದ ಅಧೀನದ ಭಾರತೀಯ ಜೀವವಿಮಾ ನಿಗಮ (ಎಲ್‌ಐಸಿ) ಮೂಲಕ ನೀಡಬೇಕು. ಸರ್ಕಾರ ಈಗ ಡಿಎಪಿ ಗೊಬ್ಬರದ ಬೆಲೆಯನ್ನು ಪ್ರತಿ ಚೀಲಕ್ಕೆ ₹500 ಹೆಚ್ಚಿಸಿದೆ. ಇಂಧನ ಹಾಗೂ ವಿದ್ಯುತ್‌ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದರು.

’ಮಹದಾಯಿ ಯೋಜನೆಗೆ ಅಧಿಸೂಚನೆ ಹೊರಡಿಸಲಾಗಿದ್ದು, ರಾಜ್ಯ ಸರ್ಕಾರ ಕಾಮಗಾರಿ ಪ್ರಾರಂಭಿಸಬೇಕು. ಸಾರಿಗೆ ಸಂಸ್ಥೆ ನೌಕರರು ಪ್ರತಿಭಟನೆ ಮಾಡಿದಾಗ ಅವರ ಮೇಲೆ ಸರ್ಕಾರ ಕೈಗೊಂಡ ಕ್ರಮಗಳನ್ನು ವಾಪಸ್ ಪಡೆಯಬೇಕು. ಕಸಿದುಕೊಂಡ ಸೌಲಭ್ಯಗಳನ್ನು ಮರಳಿ ನೀಡಬೇಕು’ ಎಂದು ಆಗ್ರಹಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಿ. ಗಂಗಾಧರಮಠ, ರಾಜ್ಯ ಘಟಕದ ಉಪಾಧ್ಯಕ್ಷ ಗುರುರಾಜ ಹುಣಸೀಮರದ, ಹುಬ್ಬಳ್ಳಿ ಗ್ರಾಮೀಣ ಘಟಕದ ಅಧ್ಯಕ್ಷ ಶಿವಣ್ಣ ಹುಬ್ಬಳ್ಳಿ, ಶಹರ ಘಟಕದ ಅಧ್ಯಕ್ಷ ಅಪ್ರೋಜ ಮೆಂಚನಕೊಪ್ಪ, ಪ್ರಮುಖರಾದ ವಿನಾಯಕ ಗಾಡಿವಡ್ಡರ, ಸಾದೀಕ ಹಕಿಂ, ಬಸವರಾಜ ಬೀರಣ್ಣವರ, ರಾಮನಾಥ ಶೆಣೈ, ಇರ್ಷಾದ್ ಭದ್ರಾಪುರ, ನವೀನ ಮಡಿವಾಳರ, ಶ್ರೀಕಾಂತ ತಲೆಗಾರ, ಗಿರೀಶ ಹಂಗರಕಿ, ಶಂಕರಗೌಡ ದೊಡ್ಡಮನಿ, ತಾಜು, ಪ್ರಭು ರಾಯನಗೌಡ್ರ, ಡಿ.ಜಿ. ಜಂತ್ಲಿ, ಪ್ರಭು ತಿರ್ಲಾಪೂರ, ಬಾಷಾಸಾಬ ಮುದಗಲ್ಲ, ಈಶ್ವರಯ್ಯ ಶಿಡಗಂಟೆ, ಮಲ್ಲಿಕಾರ್ಜುನ ಪಾಟೀಲ, ಮೌಲಾಸಾಬ ಹೂಲಿ, ಮಲ್ಲಿಕಾರ್ಜುನ ಬೆಳವಟಗಿ, ರವಿ ಯಶಮಳ, ಮುನ್ನಾ ಗುಡಗೇರಿ, ಶೋಭಾ ಪಲ್ಲವಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು